ಬಿಸಿಲ ಬೇಗೆ: ಬಿಯರ್‌ ಬಿಕರಿ ಜೋರು

| Published : Apr 13 2024, 08:14 AM IST

beer

ಸಾರಾಂಶ

ರಾಜ್ಯದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಬಿಯರ್‌ ಮಾರಾಟದಲ್ಲೂ ಹೆಚ್ಚಳವಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ತಣ್ಣನೆಯ ಬಿಯರ್‌ ಖರೀದಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿರುವುದು ಇದಕ್ಕೆ ಕಾರಣವಾಗಿದೆ.

ಬೆಂಗಳೂರು :  ರಾಜ್ಯದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಬಿಯರ್‌ ಮಾರಾಟದಲ್ಲೂ ಹೆಚ್ಚಳವಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ತಣ್ಣನೆಯ ಬಿಯರ್‌ ಖರೀದಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿರುವುದು ಇದಕ್ಕೆ ಕಾರಣವಾಗಿದೆ.

ಏ.1 ರಿಂದ 11 ರವರೆಗೂ ರಾಜ್ಯದಲ್ಲಿ ಒಟ್ಟಾರೆ 17.67 ಲಕ್ಷ ಲೀಟರ್‌ ವಿವಿಧ ಬ್ರಾಂಡ್‌ನ ಬಿಯರ್‌ ಮಾರಾಟವಾಗಿದೆ. 2021ರಲ್ಲಿ ಇದೇ ಅವಧಿಯಲ್ಲಿ 8.83 ಲಕ್ಷ ಲೀಟರ್‌, 2022ರಲ್ಲಿ 9.20 ಲಕ್ಷ ಲೀಟರ್‌, 2023ರಲ್ಲಿ 13.16 ಲಕ್ಷ ಲೀಟರ್‌ ಬಿಯರ್‌ ಮಾರಾಟವಾಗಿತ್ತು. ಆದರೆ ಈ ಬಾರಿ ಬಿಸಿನ ಝಳ ಹೆಚ್ಚಾಗಿರುವುದರಿಂದ ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಅಧಿಕ ಬಿಯರ್‌ ಬಿಕರಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 4.51 ಲಕ್ಷ ಲೀಟರ್‌ ಬಿಯರ್‌ ಅಧಿಕ ಸೇಲ್‌ ಆಗಿದೆ.

‘ಸಾಮಾನ್ಯವಾಗಿ ದಿನಕ್ಕೆ ಸುಮಾರು ಒಂದು ಲಕ್ಷ ಲೀಟರ್‌ ಬಿಯರ್‌ ರಾಜ್ಯಾದ್ಯಂತ ಮಾರಾಟವಾಗುತ್ತದೆ. ಈ ಬಾರಿ ಬಿಸಿಲು ಅಧಿಕವಾಗಿರುವುದರಿಂದ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಲೋಕಸಭಾ ಚುನಾವಣೆಯ ಕಾವು ಇನ್ನೂ ‘ರಂಗೇ’ರದೇ ಇರುವುದರಿಂದ ಇದು ಬಿಯರ್‌ ಮಾರಾಟದ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಸಭಾ ಚುನಾವಣೆಗೆ ಹೋಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ‘ಮದ್ಯದ ಘಾಟು’ ಅಷ್ಟೊಂದು ಇರುವುದಿಲ್ಲ’ ಎಂದು ಕೆಲ ಮದ್ಯ ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಐಎಂಎಲ್‌ ಮಾರಾಟವೂ ಹೆಚ್ಚಳ

ಬಿಯರ್‌ ಅಷ್ಟೇ ಅಲ್ಲ, ಭಾರತೀಯ ಮದ್ಯ(ಐಎಂಎಲ್‌)ಗಳ ಮಾರಾಟದಲ್ಲೂ ಏಪ್ರಿಲ್‌ ಆರಂಭದಲ್ಲಿ ಹೆಚ್ಚಳ ಕಂಡುಬಂದಿದೆ. 2022ರಲ್ಲಿ 14.95 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ನಲ್ಲಿ 180 ಎಂಎಲ್‌ನ 48 ಬಾಟಲ್‌ಗಳಿರುತ್ತವೆ) ಮದ್ಯ ಮಾರಾಟವಾಗಿದ್ದರೆ, 2023ರಲ್ಲಿ 18.02 ಲಕ್ಷ ಬಾಕ್ಸ್‌ ಇದ್ದದ್ದು, 2024 ರಲ್ಲಿ 18.67 ಲಕ್ಷ ಬಾಕ್ಸ್‌ ಮದ್ಯ ಮಾರಾಟವಾಗಿದೆ.

ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ರಾಜ್ಯದಲ್ಲಿ 65 ಸಾವಿರ ಬಾಕ್ಸ್‌ ಭಾರತೀಯ ಮದ್ಯ ಅಧಿಕವಾಗಿ ಮಾರಾಟವಾಗಿದೆ. ಸಾಮಾನ್ಯವಾಗಿ ಪ್ರತಿ ದಿನ ರಾಜ್ಯದಲ್ಲಿ ಸುಮಾರು 1.50 ಲಕ್ಷದಿಂದ 1.60 ಲಕ್ಷ ಬಾಕ್ಸ್‌ ಭಾರತೀಯ ಮದ್ಯ ಮಾರಾಟವಾಗುತ್ತದೆ. ಚುನಾವಣೆ ‘ಕಾವು’ ಇನ್ನೂ ಅಷ್ಟೊಂದು ಹೆಚ್ಚಾಗಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಮದ್ಯ ಮಾರಾಟದಲ್ಲಿ ಇನ್ನೂ ಹೆಚ್ಚಳ ಕಂಡುಬರಬಹುದು ಎಂದು ಮೂಲಗಳು ತಿಳಿಸಿವೆ.

ಏ.1 ರಿಂದ 11 ರವರೆಗೂ ಬಿಯರ್‌ ಮಾರಾಟ

2021 8.83 ಲಕ್ಷ ಲೀಟರ್‌

2022 9.20 ಲಕ್ಷ ಲೀಟರ್‌

2023 13.16 ಲಕ್ಷ ಲೀಟರ್‌

2024 17.67 ಲಕ್ಷ ಲೀಟರ್‌

ನಂದಿನಿ ಹಾಲು, ಮೊಸರು ದಾಖಲೆ ಮಾರಾಟ:

ಬಿರು ಬೇಸಿಗೆ ಮತ್ತು ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್‌) ಇತಿಹಾಸದಲ್ಲೇ ನಂದಿನಿ ಹಾಲು ಮತ್ತು ಮೊಸರು ದಾಖಲೆ ಮಟ್ಟದಲ್ಲಿ ಮಾರಾಟವಾಗಿದೆ.

ಏಪ್ರಿಲ್‌ 6 ರಂದು ಒಂದೇ ದಿನ 13.56 ಲಕ್ಷ ಲೀಟರ್‌ ಸ್ಯಾಚೆಟ್‌ ಮೊಸರು ಮತ್ತು ಏಪ್ರಿಲ್‌ 11ರಂದು 51.60 ಲಕ್ಷ ಲೀಟರ್‌ ಸ್ಯಾಚೆಟ್‌ ಹಾಲು ಮಾರಾಟವಾಗಿದೆ. ಇದು ಕೆಎಂಎಫ್‌ ಇತಿಹಾಸದಲ್ಲೇ ಇಲ್ಲಿಯವರೆಗೆ ಒಂದೇ ದಿನದಲ್ಲಿ ಹಾಲು, ಮೊಸರಿನ ಅತ್ಯಧಿಕ ಮಾರಾಟದ ದಾಖಲೆ ಇದಾಗಿದೆ ಕೆಎಂಎಫ್‌ ಪ್ರಕಟಣೆ ತಿಳಿಸಿದೆ.

ಪ್ರಸ್ತುತ ಹಾಲು ಮಾರಾಟದ ಪ್ರಗತಿಯು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಸರಾಸರಿ ಶೇ.10ರಷ್ಟು ಪ್ರಗತಿಯಾಗಿದೆ. ಹಾಗೆಯೇ ಮೊಸರಿನ ಮಾರಾಟ ಶೇ.22ರಷ್ಟು ಹೆಚ್ಚಾಗಿದೆ. ಮಜ್ಜಿಗೆ ಮತ್ತು ಲಸ್ಸಿ ಉತ್ಪನ್ನಗಳಿಗೂ ಸಹ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಪ್ರತಿ ದಿನ ಅಂದಾಜು 1.5 ಲಕ್ಷ ಲೀಟರ್‌ ಮಾರಾಟ ಮಾಡಲಾಗುತ್ತಿದ್ದು ಕಳೆದ ಸಾಲಿಗಿಂತ ಶೇ.30ರಷ್ಟು ಜಾಸ್ತಿಯಾಗಿದೆ. 2024 ಮಾರ್ಚ್‌ ತಿಂಗಳಲ್ಲಿ ನಂದಿನಿ ಐಸ್‌ಕ್ರೀಂ ಮಾರಾಟ ಶೇ.36ರಷ್ಟು ಹೆಚ್ಚಾಗಿದೆ. ಪ್ರತಿದಿನ ಸರಾಸರಿ 25,439 ಲೀಟರ್‌ ಐಸ್‌ಕ್ರೀಂ ಮಾರಾಟ ಮಾಡುವ ಮೂಲಕ ಕೆಎಂಎಫ್‌ ದಾಖಲೆ ನಿರ್ಮಿಸಿದೆ ಪ್ರಕಟಣೆಯಲ್ಲಿ ಹೇಳಲಾಗಿದೆ.