ಸಾರಾಂಶ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ 134 ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ 2025-26ನೇ ಸಾಲಿನಲ್ಲಿ ಲಭ್ಯವಿರುವ 11,330 ಸೀಟುಗಳಿಗೆ 41 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಬೆಂಗಳೂರು : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ 134 ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ 2025-26ನೇ ಸಾಲಿನಲ್ಲಿ ಲಭ್ಯವಿರುವ 11,330 ಸೀಟುಗಳಿಗೆ 41 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಭಾನುವಾರ ರಾಜ್ಯದ 145 ಕೇಂದ್ರಗಳಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆದಿದೆ.
ಇಲಾಖೆ ಅಡಿ 134 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಮುಸ್ಲಿಂ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 2025-26ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಕ್ಕೆ 11,330 ಸೀಟುಗಳು ಲಭ್ಯವಿದ್ದವು. ಒಟ್ಟು 56 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಭಾನುವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸುಮಾರು 41 ಸಾವಿರ ಮಂದಿ ಹಾಜರಾಗಿದ್ದರು ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದ್ದಾರೆ.
ರಾಜ್ಯದ ಅಲ್ಪಸಂಖ್ಯಾತರ ವಸತಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಇದರಿಂದಾಗಿ ಎಲ್ಲ ಪೋಷಕರು ಈ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದಾರೆ. ಅಲ್ಪಸಂಖ್ಯಾತರ ನಿರ್ದೇಶನಾಲಯದಡಿ ಜಿಲ್ಲೆಗೊಂದರಂತೆ ಸಿಬಿಎಸ್ಸಿ ಪಠ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಪ್ರವೇಶ ಪ್ರಕ್ರಿಯೆ ಮುಕ್ತ ಮತ್ತು ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿ ಸಂಪೂರ್ಣ ಆನ್‌ಲೈನ್‌ನಲ್ಲೇ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.