(ಈ ವಿಶ್ವ ಮಾನಸಿಕ ಆರೋಗ್ಯ ದಿನದ ಸಂದರ್ಭದಲ್ಲಿ, ಜಿಎಂಆರ್ ಸಮೂಹದ ಸಂಸ್ಥಾಪಕ ಅಧ್ಯಕ್ಷರಾದ ಜಿ.ಎಂ.ರಾವ್ ಅವರು ತಮ್ಮ ಜೀವನದ ಒಂದು ಹೃದಯಸ್ಪರ್ಶಿ ಘಟನೆಯನ್ನು ಹಂಚಿಕೊಳ್ಳುತ್ತಾರೆ. ವ್ಯವಹಾರದಲ್ಲಿ ಎದುರಾದ ಹಿನ್ನಡೆಯೊಂದು ಅವರನ್ನು ಆಂತರಿಕ ಪಯಣದತ್ತ ಕರೆದೊಯ್ದಿತು.
(ಈ ವಿಶ್ವ ಮಾನಸಿಕ ಆರೋಗ್ಯ ದಿನದ ಸಂದರ್ಭದಲ್ಲಿ, ಜಿಎಂಆರ್ ಸಮೂಹದ ಸಂಸ್ಥಾಪಕ ಅಧ್ಯಕ್ಷರಾದ ಜಿ.ಎಂ.ರಾವ್ ಅವರು ತಮ್ಮ ಜೀವನದ ಒಂದು ಹೃದಯಸ್ಪರ್ಶಿ ಘಟನೆಯನ್ನು ಹಂಚಿಕೊಳ್ಳುತ್ತಾರೆ. ವ್ಯವಹಾರದಲ್ಲಿ ಎದುರಾದ ಹಿನ್ನಡೆಯೊಂದು ಅವರನ್ನು ಆಂತರಿಕ ಪಯಣದತ್ತ ಕರೆದೊಯ್ದಿತು. ಈ ಪಯಣವು ಅವರನ್ನು, ಆಧ್ಯಾತ್ಮಿಕ ಗುರುಗಳಾದ ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರನ್ನು ಭೇಟಿಯಾಗುವಂತೆ ಮಾಡಿತು. ಆ ಭೇಟಿಯ ನಂತರ ಅವರ ಜೀವನದಲ್ಲಿ ಸಂಭವಿಸಿದ ಬದಲಾವಣೆ ಇಂದಿಗೂ ಅವರೊಂದಿಗೆ ಉಳಿದಿದೆ.)
-ಇಂದು ವಿಶ್ವ ಮಾನಸಿಕ ಆರೋಗ್ಯ ದಿನ (ಸೀಲ್ ಮಾಡಿ)
ಜಿ.ಎಂ.ರಾವ್
ನಾವು ದೊಡ್ಡ ದೊಡ್ಡ ಉದ್ಯಮಗಳನ್ನು ಕಟ್ಟುವುದನ್ನು ಕಲಿತಿದ್ದೇವೆ, ಹಿಂದೆಂದಿಗಿಂತಲೂ ವೇಗವಾಗಿ ಮುನ್ನಡೆಯುವುದನ್ನು ಕಲಿತಿದ್ದೇವೆ ಮತ್ತು ಹಿಂದೆಂದಿಗಿಂತಲೂ ಹೆಚ್ಚಿನ ಮಾಹಿತಿಯೊಂದಿಗೆ ಬದುಕುವುದನ್ನು ಕಲಿತಿದ್ದೇವೆ. ಆದರೆ ಇದಾವುದೂ, ನಮ್ಮ ನಿದ್ರೆ ದೂರವಾದಾಗ, ಮನಸ್ಸು ಚಂಚಲವಾದಾಗ ಮತ್ತು ಹೊರಗಿನಿಂದ ಎಲ್ಲವೂ ಚೆನ್ನಾಗಿರುವಂತೆ ಕಂಡರೂ ನಮ್ಮೊಳಗೆ ಶಾಂತಿ ಇಲ್ಲದಿರುವಾಗ, ನಮ್ಮೊಳಗೆ ಏನಾಗುತ್ತಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದನ್ನಾಗಲೀ, ಅದನ್ನು ಹೇಗೆ ನಿಭಾಯಿಸಬೇಕೆಂಬುದನ್ನಾಗಲೀ ತಿಳಿಸಿಕೊಡುವುದಿಲ್ಲ.
ಸುಮಾರು 30 ವರ್ಷಗಳ ಹಿಂದೆ, ನಮ್ಮ ಕುಟುಂಬವು ನಮ್ಮ ಉದ್ಯಮದ ಪಯಣದಲ್ಲಿನ ಅತ್ಯಂತ ಕಠಿಣ ಮತ್ತು ಕತ್ತಲೆಯ ದಿನಗಳನ್ನು ಎದುರಿಸುತ್ತಿತ್ತು. ನಾವು ಒಂದು ವಿದ್ಯುತ್ ಸ್ಥಾವರವನ್ನು ನಿರ್ಮಿಸುತ್ತಿದ್ದೆವು. ಆ ಸಮಯದಲ್ಲಿ ಒಪ್ಪಂದದಲ್ಲಿದ್ದ ಕೆಲವು ವಾಕ್ಯಗಳ ಅರ್ಥ ವ್ಯಾಖ್ಯಾನದ ಕುರಿತು ವಿವಾದ ಉದ್ಭವಿಸಿತು. ಆ ಒಂದೇ ಭಿನ್ನಾಭಿಪ್ರಾಯದಿಂದ ಪರಿಸ್ಥಿತಿ ಹಂತಹಂತವಾಗಿ ಗಂಭೀರಗೊಂಡಿತು. ನಾವು ದಿವಾಳಿತನದ ಅಂಚಿನಲ್ಲಿದ್ದೆವು.
ನನಗೆ ಸಿಕ್ಕದ ಶ್ರೀಗಳ ಸಂಘ:
ನನಗೆ ನಿದ್ರೆ ಬರುತ್ತಿರಲಿಲ್ಲ, ಮನಸ್ಸಿನಲ್ಲಿ ಶಾಂತಿಯಿರಲಿಲ್ಲ. ಕುಟುಂಬದ ಜವಾಬ್ದಾರಿ, ವ್ಯವಹಾರದ ಹೊಣೆ, ನೌಕರರ ಭವಿಷ್ಯ ಮತ್ತು ನಮ್ಮೆಲ್ಲರ ಕನಸುಗಳ ಭಾರವನ್ನು ನಾನು ಹೊತ್ತುಕೊಂಡಿದ್ದೆ. ನಾನು ಸಂಪೂರ್ಣವಾಗಿ ಕುಸಿದುಬೀಳುವ ಹಂತದಲ್ಲಿದ್ದೆ. ಅಂತಹ ಸಮಯದಲ್ಲಿ, ನಾನು ನನ್ನ ಇಡೀ ಕುಟುಂಬದೊಂದಿಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಬಂದೆ. ನಾವು ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರೊಂದಿಗೆ ಕುಳಿತು ಮಾತನಾಡಿದೆವು. ನಾನು ಅನುಭವಿಸುತ್ತಿದ್ದ ಕಷ್ಟಗಳನ್ನು ಅವರೊಂದಿಗೆ ಹಂಚಿಕೊಂಡೆ. ನಾವು ಇಲ್ಲಿ ಸುದರ್ಶನ ಕ್ರಿಯೆ ಎಂಬ ಉಸಿರಾಟದ ಪ್ರಕ್ರಿಯೆಯನ್ನು ಕಲಿತೆವು. ಗುರುದೇವರು ನಮಗೆ ಮಾರ್ಗದರ್ಶನ ನೀಡಿ ಆಶೀರ್ವದಿಸಿದರು.
ಆಗ ನಮ್ಮೊಳಗೆ ಏನೋ ಒಂದು ಬದಲಾವಣೆ ಸಂಭವಿಸಿತು. ಅದನ್ನು ಪದಗಳಲ್ಲಿ ವಿವರಿಸಲು ನನಗೆ ಸಾಧ್ಯವಿಲ್ಲ. ನಮ್ಮ ಸಮಸ್ಯೆಗಳೆಲ್ಲವೂ ದಿನ ಬೆಳಗಾಗುತ್ತಿದ್ದಂತೆ ಮಾಯವಾದವು ಎಂದಲ್ಲ. ಆದರೆ, ನನ್ನೊಳಗೇ ಏನೋ ಒಂದು ಬದಲಾಯಿತು. ಬಿರುಗಾಳಿಯ ನಡುವೆಯೂ ಉಸಿರಾಡುವುದನ್ನು ನಾನು ಕಲಿತೆ. ನಾನು ಸುದರ್ಶನ ಕ್ರಿಯೆ, ಧ್ಯಾನ ಮತ್ತು ಸತ್ಸಂಗದಲ್ಲಿ ನಿರತವಾಗಿ ಮುಂದುವರೆದೆ. ಪ್ರತಿ ಭಾನುವಾರವೂ ಸುದರ್ಶನ ಕ್ರಿಯೆಯ ದೀರ್ಘ ಅಭ್ಯಾಸದಲ್ಲಿ ಭಾಗವಹಿಸುತ್ತಿದ್ದೆ. ಕ್ರಮೇಣ ಈ ಅಭ್ಯಾಸಗಳು ನನ್ನ ಜೀವನದ ಅವಿಭಾಜ್ಯ ಅಂಗವಾದವು. ಇಂದು ನಾನು ಎದುರಿಸುತ್ತಿರುವ ಸವಾಲುಗಳು ಅಂದಿಗಿಂತ ಬಹುಶಃ ಸಾವಿರ ಪಟ್ಟು ದೊಡ್ಡದಾಗಿವೆ, ಆದರೆ ಗುರುದೇವರ ಕೃಪೆಯಿಂದ, ಅದನ್ನು ಎದುರಿಸಲು ಸಾಧ್ಯವಾಗುತ್ತಿದೆ.
ಇಂದು ನಮ್ಮ ಕಾರ್ಯಕ್ಷೇತ್ರವು ವಿಮಾನ ನಿಲ್ದಾಣಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯವರೆಗೆ ವಿಸ್ತರಿಸಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುವಾಗ, ಅದರೊಂದಿಗೆ ಹೆಚ್ಚು ಒತ್ತಡಗಳು ಮತ್ತು ಅನಿಶ್ಚಿತತೆಗಳೂ ಬರುತ್ತವೆ. ದೆಹಲಿ ವಿಮಾನ ನಿಲ್ದಾಣವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ದೆಹಲಿಯಲ್ಲಿ ವಿಮಾನ ನಿಲ್ದಾಣವನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ಅಲ್ಲದೆ, ಅದು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಯೋಜನೆಯಾಗಿತ್ತು. ಅನೇಕ ಸವಾಲುಗಳಿದ್ದವು. ಹೈದರಾಬಾದ್ ವಿಮಾನ ನಿಲ್ದಾಣವನ್ನು ನಿರ್ಮಿಸುವುದು ಮತ್ತೊಂದು ವಿಭಿನ್ನ ರೀತಿಯ ಸವಾಲಾಗಿತ್ತು. ಹೈದರಾಬಾದ್ ವಿಮಾನ ನಿಲ್ದಾಣದ ನಿರ್ಮಾಣ ನಡೆಯುತ್ತಿದ್ದಾಗ ಗುರುದೇವರು ಅಲ್ಲಿಗೆ ಆಗಮಿಸಿ ಆಶೀರ್ವದಿಸಿದ್ದರು.
ಇಂದು ನಾವು ವಿಮಾನ ನಿಲ್ದಾಣಗಳು, ಮೂಲಸೌಕರ್ಯಗಳು, ನಿಯಂತ್ರಣಾತ್ಮಕ ನಿಯಮಗಳಿಗೆ ಒಳಪಟ್ಟ ಕಾರ್ಯಕ್ಷೇತ್ರಗಳು ಮತ್ತು ಜಾಗತಿಕ ಅನಿಶ್ಚಿತತೆಗಳೊಂದಿಗೆ ವ್ಯವಹರಿಸುತ್ತಿದ್ದೇವೆ. ಇದು ಪ್ರತಿದಿನವೂ ಹೊಸದಾದ ಸವಾಲನ್ನು ತರುತ್ತದೆ. ಆದರೂ ಅವೆಲ್ಲವನ್ನೂ ನಿಭಾಯಿಸಲು ನನಗೆ ಸಾಧ್ಯವಾಗುತ್ತಿದೆ.
ಈಗ ನಾನು ಆರೋಗ್ಯವಾಗಿದ್ದೇನೆ:
ನನಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲ. ನನಗೆ 76 ವರ್ಷ ವಯಸ್ಸು ತುಂಬುತ್ತಿದೆ. ನಾನು ಚೆನ್ನಾಗಿ ನಿದ್ರಿಸುತ್ತೇನೆ. ನನ್ನ ಮನಸ್ಸು ಶಾಂತವಾಗಿದೆ. ಇವೆಲ್ಲದಕ್ಕೂ ನಾನು ಗುರುದೇವರಿಗೆ ಮತ್ತು ಪ್ರತಿದಿನದ ಸುದರ್ಶನ ಕ್ರಿಯೆ ಹಾಗೂ ಧ್ಯಾನದ ಅಭ್ಯಾಸಕ್ಕೆ ಋಣಿಯಾಗಿದ್ದೇನೆ. ನಾನು ಇಂದಿಗೂ ಅವರ ಜ್ಞಾನಭರಿತ ಪ್ರವಚನಗಳನ್ನು ಆಲಿಸುತ್ತೇನೆ ಮತ್ತು ಅವರ ಜ್ಞಾನದಿಂದ ಮಾರ್ಗದರ್ಶನ ಪಡೆಯುತ್ತೇನೆ. ಹಿಂದಿರುಗಿ ನೋಡಿದಾಗ ನನಗೆ ಅತ್ಯಂತ ಗಮನಾರ್ಹವಾಗಿ ಕಾಣುವುದು ಏನೆಂದರೆ, ನನ್ನ ಸವಾಲುಗಳ ಪ್ರಮಾಣ ಅಪಾರವಾಗಿ ಹೆಚ್ಚಾಗಿದೆ, ಆದರೆ ಅವುಗಳನ್ನು ನಿಭಾಯಿಸುವ ನನ್ನ ಸಾಮರ್ಥ್ಯವೂ ಅಷ್ಟೇ ಹೆಚ್ಚಾಗಿದೆ. ಈ ಅಭ್ಯಾಸವು ನನ್ನ ಜೀವನದಲ್ಲಿ ಮೂಡಿಸಿರುವ ಬದಲಾವಣೆ ಇದೇ.
45 ವರ್ಷಗಳಿಂದ ಗುರುದೇವರು ಜಗತ್ತಿನಾದ್ಯಂತ ಮನೆಗಳಲ್ಲಿ, ಹೃದಯಗಳಲ್ಲಿ, ಕಾರಾಗೃಹಗಳಲ್ಲಿ, ಯುದ್ಧಪೀಡಿತ ಪ್ರದೇಶಗಳಲ್ಲಿ ಹಾಗೂ ಮಾನವ ಬದುಕಿನ ಅತ್ಯಂತ ಏಕಾಂಗಿ ಕ್ಷಣಗಳಲ್ಲಿಯೂ ಮಂದಹಾಸವನ್ನು ಮೂಡಿಸುತ್ತಾ ಬಂದಿದ್ದಾರೆ. ಅವರ ಸೇವಾಕಾರ್ಯಗಳು 180ಕ್ಕೂ ಹೆಚ್ಚು ದೇಶಗಳ ಜನರನ್ನು ತಲುಪಿವೆ. ಆ ಕಾರ್ಯಗಳಲ್ಲಿ ಕೆಲವನ್ನು ಹತ್ತಿರದಿಂದ ನೋಡುವ ಸೌಭಾಗ್ಯ ನನಗೆ ದೊರೆತಿದೆ.
ಇಂದು ಗುರುದೇವರು ಕಾರ್ಯನಿರ್ವಹಿಸುತ್ತಿರುವ ಜಗತ್ತು 50 ವರ್ಷಗಳ ಹಿಂದಿನ ಜಗತ್ತಿಗಿಂತ ಬಹಳ ಭಿನ್ನವಾಗಿದೆ. ನಾವು ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದೇವೆ. ಇದು ಏರಿಳಿತಗಳು, ಅನಿಶ್ಚಿತತೆಗಳು, ಸಂಕೀರ್ಣತೆಗಳು ಹಾಗೂ ಮಹತ್ವಾಕಾಂಕ್ಷೆಗಳಿಂದ ಕೂಡಿದ ಜಗತ್ತು. ಮಾಹಿತಿಗೆ ಕೊನೆಯೇ ಇಲ್ಲ, ಆದರೆ ಮನಃಶಾಂತಿ ಮಾತ್ರ ವಿರಳವಾಗಿದೆ. ಮೊಬೈಲ್‌ಗಳು ತುಂಬಿಕೊಂಡಿವೆ, ಆದರೆ ಹೃದಯಗಳು ಖಾಲಿಯಾಗಿವೆ. ಮಕ್ಕಳು ಮೌನದ ಬದಲಿಗೆ ಮೊಬೈಲ್ ಸ್ಕ್ರೀನ್‌ನೊಂದಿಗೆ ಬೆಳೆಯುತ್ತಿದ್ದಾರೆ. ವಯಸ್ಕರು ಇನ್ನಷ್ಟು ವೇಗವಾಗಿ ಓಡುತ್ತಿದ್ದಾರೆ, ಆದರೆ ಎಲ್ಲಿಯೂ ತಲುಪುತ್ತಿಲ್ಲ. ಒತ್ತಡ, ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆಗಳು ಸದ್ದಿಲ್ಲದೆ ನಮ್ಮ ಕಾಲದ ಹೊಸ ಮಹಾಮಾರಿಯಾಗಿ ಮಾರ್ಪಟ್ಟಿವೆ. ಇಂತಹ ಜಗತ್ತಿನಲ್ಲಿ ಆಧ್ಯಾತ್ಮಿಕತೆ ಒಂದು ಐಷಾರಾಮವಲ್ಲ; ಅದು ಅನಿವಾರ್ಯವಾದ ಅವಶ್ಯಕತೆ. ನಮ್ಮ ಬದುಕಿನ ಆಘಾತಗಳನ್ನು ತಡೆದುಕೊಳ್ಳಲು ನೆರವಾಗುವ ನಿಜವಾದ ರಕ್ಷಣಾಕವಚವೇ ಆಧ್ಯಾತ್ಮಿಕತೆ.
ಸುದರ್ಶನ ಕ್ರಿಯೆಯ ಮಹತ್ವ:
ನಲವತ್ತೈದು ವರ್ಷಗಳ ಹಿಂದೆ, ಹಲವು ದಿನಗಳ ಮೌನ ಸಾಧನೆಯ ನಂತರ ಗುರುದೇವರು ಸುದರ್ಶನ ಕ್ರಿಯೆಯನ್ನು ಜಗತ್ತಿಗೆ ನೀಡಿದರು. ಇಂದು ಆ ಒಂದೇ ಪ್ರಕ್ರಿಯೆಯು ಪ್ರಪಂಚದಾದ್ಯಂತ ಜನರನ್ನು ಸ್ಪರ್ಶಿಸಿದೆ. ವಿಶೇಷವಾಗಿ ಯುವಜನರಲ್ಲಿ ಅದರ ಪ್ರಭಾವವನ್ನು ನಾನು ಕಂಡಿದ್ದೇನೆ. ಭರವಸೆಯನ್ನು ಕಳೆದುಕೊಂಡ, ಆತ್ಮವಿಶ್ವಾಸವನ್ನು ಕಳೆದುಕೊಂಡ ಮತ್ತು ಅನೇಕ ರೀತಿಯಲ್ಲಿ ತಮ್ಮನ್ನೇ ಕಳೆದುಕೊಂಡ ಯುವಜನರಿದ್ದಾರೆ. ಈ ಅಭ್ಯಾಸಗಳನ್ನು ಕಲಿತ ನಂತರ ಅವರಲ್ಲಿ ಕೆಲವರು ತಮ್ಮ ಕುಟುಂಬಗಳಿಗೆ, ವಿದ್ಯಾಭ್ಯಾಸಕ್ಕೆ ಮತ್ತು ತಮ್ಮ ಬದುಕಿಗೆ ಮರಳಿರುವುದನ್ನು ನಾನು ಕಂಡಿದ್ದೇನೆ. ಅವರು ಸಂಪೂರ್ಣವಾಗಿ ಕುಗ್ಗಿದ ಮನಸ್ಥಿತಿಯಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಗಳಿಗೆ ಬಂದು, ಅಲ್ಲಿ ತಮ್ಮ ಬಗ್ಗೆ ಹೊಸ ಅರಿವು ಹಾಗೂ ಆತ್ಮವಿಶ್ವಾಸವನ್ನು ಮೂಡಿಸಿಕೊಂಡು ಮರಳಿದ್ದಾರೆ. ನನ್ನ ದೃಷ್ಟಿಯಲ್ಲಿ ಇದು ಸಣ್ಣ ಸಾಧನೆಯೇನಲ್ಲ. ಇದೇ ಗುರುದೇವರು ತಂದಿರುವ ಮಹಾನ್ ಕ್ರಾಂತಿ.
ಕಳೆದ 45 ವರ್ಷಗಳಲ್ಲಿ ಗುರುದೇವರು ಮಾಡಿರುವ ಕಾರ್ಯವನ್ನು ಗಮನಿಸಿದಾಗ, ಅವರು ಆಧ್ಯಾತ್ಮಿಕತೆಯನ್ನು ಎಷ್ಟು ಸರಳವಾಗಿ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಿದ್ದಾರೆ ಎಂಬುದು ಕಾಣಿಸುತ್ತದೆ. ಅವರು ಉಸಿರಾಟದ ಪ್ರಕ್ರಿಯೆ, ಧ್ಯಾನ, ಮೌನ ಮತ್ತು ಸತ್ಸಂಗವನ್ನು ಸಮಾಜದ ಎಲ್ಲ ವರ್ಗಗಳ ಜನರಿಗೆ ತಲುಪಿಸಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳ ನಾಯಕರು ಮತ್ತು ವಿದ್ಯಾರ್ಥಿಗಳಿಂದ ಹಿಡಿದು ಹಳ್ಳಿಗಳಲ್ಲಿ, ಕಾರಾಗೃಹಗಳಲ್ಲಿ ಮತ್ತು ಸಂಘರ್ಷಪೀಡಿತ ಪ್ರದೇಶಗಳಲ್ಲಿ ಇರುವ ಜನರವರೆಗೂ ಇವುಗಳನ್ನು ತಲುಪಿಸಿದ್ದಾರೆ.
ಆದರೆ ನನ್ನ ಪಾಲಿಗೆ ಅತ್ಯಂತ ಮಹತ್ವದ ಸಾಕ್ಷ್ಯ ನನ್ನ ಸ್ವಂತ ಅನುಭವವೇ ಆಗಿದೆ. ನಾನು ಸುದರ್ಶನ ಕ್ರಿಯೆಯನ್ನು ಕಲಿತದ್ದು ಯಾವುದೋ ವೆಲ್‌ನೆಸ್ ಕಾರ್ಯಕ್ರಮವನ್ನು ಹುಡುಕುತ್ತಿದ್ದ ಕಾರಣಕ್ಕಲ್ಲ. ನಾನು ಅದನ್ನು ಕಲಿತದ್ದು ಜೀವನದ ತೀವ್ರ ಸಂಕಷ್ಟದಲ್ಲಿದ್ದ ಕಾರಣಕ್ಕೆ. ನಾನು ಈ ಅಭ್ಯಾಸವನ್ನು ಆರಂಭಿಸಿದಾಗ ನನ್ನ ಸಮಸ್ಯೆಗಳು ಮಾಯವಾಗಲಿಲ್ಲ, ಆದರೆ ಅವುಗಳನ್ನು ನಿಭಾಯಿಸುವ ನನ್ನ ಸಾಮರ್ಥ್ಯ ಹೆಚ್ಚಾಯಿತು.
ಸಮಸ್ಯೆ ಬರುವ ಮುನ್ನವೇ ಎಚ್ಚರವಾಗಿ:
ಅದಕ್ಕಾಗಿಯೇ ನಾನು ಇಂದಿನ ಯುವಜನರಿಗೆ ಹೇಳುವುದು: ಆಧ್ಯಾತ್ಮಿಕತೆಯತ್ತ ಬರಲು ಜೀವನದಲ್ಲಿ ಸಂಕಷ್ಟ ಎದುರಾಗುವವರೆಗೂ ಕಾಯಬೇಡಿ. ನನ್ನಂತೆಯೇ ಎಲ್ಲ ದಾರಿಗಳೂ ಮುಚ್ಚಿಹೋಗಿ, ಬೇರೆ ದಾರಿಯೇ ಇಲ್ಲದಂತಹ ಪರಿಸ್ಥಿತಿ ಬರುವವರೆಗೂ ಕಾಯಬೇಡಿ. ಸುದರ್ಶನ ಕ್ರಿಯೆಯನ್ನು ಕಲಿಯಿರಿ, ಪ್ರತಿದಿನ ಅಭ್ಯಾಸ ಮಾಡಿ, ಧ್ಯಾನ ಮಾಡಿ, ಗುರುದೇವರ ಮಾತುಗಳನ್ನು ಆಲಿಸಿ, ಸತ್ಸಂಗದಲ್ಲಿ ಭಾಗವಹಿಸಿ ಮತ್ತು ಸ್ವಲ್ಪ ಸಮಯ ಮೌನದಲ್ಲಿ ಕುಳಿತುಕೊಳ್ಳಿ. ನಿಮ್ಮ ಕುಟುಂಬದವರನ್ನೂ, ಸಹೋದ್ಯೋಗಿಗಳನ್ನೂ ಮತ್ತು ಮಕ್ಕಳನ್ನೂ ಜೊತೆಗೆ ಕರೆತನ್ನಿ. ಹೊರಗಿನ ಜಗತ್ತನ್ನು ಎದುರಿಸಲು ನಮ್ಮನ್ನು ಸಿದ್ಧಪಡಿಸಿಕೊಳ್ಳುವುದಕ್ಕಾಗಿ ನಾವು ಎಷ್ಟೊಂದು ಸಮಯವನ್ನು ವ್ಯಯಿಸುತ್ತೇವೆ! ನಮ್ಮ ವೃತ್ತಿಜೀವನ, ಉದ್ಯಮಗಳು, ಆರ್ಥಿಕ ಭವಿಷ್ಯ ಮತ್ತು ಜವಾಬ್ದಾರಿಗಳಿಗಾಗಿ ನಮ್ಮನ್ನು ಸಿದ್ಧಪಡಿಸಿಕೊಳ್ಳುತ್ತೇವೆ. ಅದೇ ರೀತಿ ನಮ್ಮನ್ನು ಆಂತರಿಕವಾಗಿಯೂ ಸಿದ್ಧಪಡಿಸಿಕೊಳ್ಳಬೇಕು.
ಹೊರಗಿನ ಜಗತ್ತು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಮಾರುಕಟ್ಟೆಯಲ್ಲಿ ಏರಿಳಿತಗಳು ಹಾಗೆಯೇ ಇರುತ್ತದೆ. ತಂತ್ರಜ್ಞಾನ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಕೃತಕ ಬುದ್ಧಿಮತ್ತೆ (ಎಐ) ಮತ್ತಷ್ಟು ಪ್ರಗತಿ ಹೊಂದುತ್ತಲೇ ಇರುತ್ತದೆ. ಹೊಸ ಹೊಸ ಅನಿಶ್ಚಿತತೆಗಳು ಎದುರಾಗುತ್ತಲೇ ಇರುತ್ತವೆ. ಇವೆಲ್ಲವನ್ನೂ ನಿಯಂತ್ರಿಸುವುದು ನಮ್ಮಿಂದ ಸಾಧ್ಯವಿಲ್ಲ. ಆದರೆ ನಮ್ಮ ಆಂತರಿಕ ಅಡಿಪಾಯವನ್ನು ಗಟ್ಟಿಗೊಳಿಸಿಕೊಳ್ಳಲು ನಾವು ಪ್ರಯತ್ನಿಸಬಹುದು. ಸುಮಾರು ಮೂರು ದಶಕಗಳ ಹಿಂದೆ, ನನ್ನ ಜೀವನದ ಅತ್ಯಂತ ಕಠಿಣ ಹಂತವೊಂದನ್ನು ದಾಟಲು ದಾರಿ ಹುಡುಕುತ್ತಾ ನಾನು ಆಶ್ರಮಕ್ಕೆ ಬಂದಿದ್ದೆ. ಆ ಮೊದಲ ಅನುಭವವು ಮುಂದಿನ ದಶಕಗಳಲ್ಲಿ ನನ್ನ ಜೀವನಕ್ಕೆ ಎಷ್ಟು ಮಹತ್ವದ್ದಾಗಲಿದೆ ಎಂಬುದು ಅಂದು ನನಗೆ ತಿಳಿದಿರಲಿಲ್ಲ. ಆದರೆ ಇಂದು ಅದರ ಮಹತ್ವವನ್ನು ನಾನು ಚೆನ್ನಾಗಿ ಅರಿತಿದ್ದೇನೆ.
(ಲೇಖಕರು: ಜಿಎಂಆರ್ ಸಮೂಹದ ಸಂಸ್ಥಾಪಕ ಅಧ್ಯಕ್ಷರು. ಆರ್ಟ್ ಆಫ್ ಲಿವಿಂಗ್‌ನ 45ನೇ ವರ್ಷಾಚರಣೆಯ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಜಿ.ಎಂ.ರಾವ್ ಅವರು ನೀಡಿದ ಭಾಷಣದ ಆಯ್ದ ಭಾಗ.)

