ಸಾರಾಂಶ
ನನ್ನ 42 ವರ್ಷಗಳ ರಾಜಕೀಯ ಜೀವನದಲ್ಲಿ ಕಾಲ್ತುಳಿತದಂತಹ ಕಹಿ ಘಟನೆ ನಡೆದಿರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತದಿಂದ 11 ಮಂದಿ ಸಾವಿಗೀಡಾದಾಗಿನಿಂದ ವಿಚಲಿತನಾಗಿದ್ದೇನೆ.
ವಿಧಾನಸಭೆ : ‘ನನ್ನ 42 ವರ್ಷಗಳ ರಾಜಕೀಯ ಜೀವನದಲ್ಲಿ ಕಾಲ್ತುಳಿತದಂತಹ ಕಹಿ ಘಟನೆ ನಡೆದಿರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತದಿಂದ 11 ಮಂದಿ ಸಾವಿಗೀಡಾದಾಗಿನಿಂದ ವಿಚಲಿತನಾಗಿದ್ದೇನೆ. ಘಟನೆ ನಡೆದ ದಿನವೂ ದುಃಖಪಟ್ಟಿದ್ದೆ, ಈಗಲೂ ದುಃಖ ಪಡುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವನಾತ್ಮಕವಾಗಿ ಹೇಳಿದರು.
ನಿಯಮ 69ರ ಅಡಿ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಸಿದ್ದರಾಮಯ್ಯ, ಕಾಲ್ತುಳಿತ ನಡೆದ ದಿನವೇ ನಾನು ವಿಷಾದವ್ಯಕ್ತಪಡಿಸಿದ್ದೆ. ಈಗಲೂ ವಿಷಾದಿಸುತ್ತಿದ್ದೇನೆ. ಕಾಲ್ತುಳಿತ ಸಂಭವಿಸಿದ ಸಂದರ್ಭದಲ್ಲಿ ನಾನು ಲಂಡನ್‌ನಿಂದ ಬಂದಿದ್ದ ನನ್ನ ಮೊಮ್ಮಗನೊಂದಿಗೆ ಹೋಟೆಲ್‌ನಲ್ಲಿ ತಿಂಡಿ ತಿನ್ನುತ್ತಿದ್ದೆ. 5.15ಕ್ಕೆ ಶಾಸಕ ಪೊನ್ನಣ್ಣ ಕರೆ ಮಾಡಿ ಕಾಲ್ತುಳಿತದ ಮಾಹಿತಿ ನೀಡಿದರು.
ಆಗ ನಗರ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಮಾಹಿತಿ ಪಡೆದು, ಕೂಡಲೇ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರೊಂದಿಗೆ ಆಸ್ಪತ್ರೆಗೆ ತೆರಳಿದೆ. ಅಲ್ಲಿ 11 ಮಂದಿಯ ಶವ ನೋಡಿ ಮನಸ್ಸು ಕದಡಿತು ಎಂದರು.
ಕಾಲ್ತುಳಿತ ನಡೆದ ದಿನ ನಿದ್ದೆ ಮಾಡಲು ಸಾಧ್ಯವಾಗಿಲ್ಲ. ಕಾಲ್ತುಳಿತದಿಂದ ಸಾವಿಗೀಡಾದವರಲ್ಲಿ 13ರಿಂದ 29 ವರ್ಷ ವಯಸ್ಸಿನವರಿದ್ದಾರೆ. ಭವಿಷ್ಯದಲ್ಲಿ ಅವರು ಏನೇನೋ ಸಾಧನೆ ಮಾಡುವವರಿದ್ದರು. ಚಿಕ್ಕವಯಸ್ಸಿನಲ್ಲಿಯೇ ಪ್ರಾಣ ಕಳೆದುಕೊಳ್ಳುವಂತಾಯಿತು. ಅವರ ಸಾವು ಅವರ ತಂದೆ-ತಾಯಿಗಷ್ಟೇ ಅಲ್ಲ, ಮನುಷ್ಯತ್ವ ಇರುವ ಎಲ್ಲರಿಗೂ ದುಃಖ ತರಿಸುತ್ತದೆ ಎಂದು ಹೇಳಿದರು.
ದುರ್ಘಟನೆ ಕುರಿತು ಕ್ಷಮೆ ಕೇಳಿದ ಕೂಡಲೇ ನ್ಯಾಯ ದೊರಕುವುದಿಲ್ಲ. ಕ್ರಮಗಳಿಂದಷ್ಟೇ ನ್ಯಾಯ ಸಿಗುತ್ತದೆ. ಅದನ್ನು ನಾವು ಮಾಡಿದ್ದೇವೆ. ಕಾಲ್ತುಳಿತದಿಂದ ಸಾವಿನ ಸುದ್ದಿ ತಿಳಿದ ಕೂಡಲೇ ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ಮರುದಿನ ನ್ಯಾ. ಮೈಕಲ್ ಡಿ.ಕುನ್ಹಾ ನೇತೃತ್ವದ ಏಕ ಸದಸ್ಯ ಆಯೋಗ ನೇಮಕ ಮಾಡಿದೆ. ಮೂವರು ಐಪಿಎಸ್ ಅಧಿಕಾರಿ ಸೇರಿ ಐವರು ಪೊಲೀಸರನ್ನು ಅಮಾನತು ಮಾಡಿದೆವು. ನನ್ನ ರಾಜಕೀಯ ಕಾರ್ಯದರ್ಶಿಯನ್ನೇ ತೆಗೆದು ಹಾಕಿದ್ದೇನೆ. ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಸಂಸ್ಥೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನಾಲ್ವರನ್ನು ಬಂಧಿಸಲಾಯಿತು. ಇನ್ನು, ಸಿಐಡಿ ತನಿಖೆಯೂ ನಡೆಸಲಾಗಿದ್ದು, ಚಾರ್ಜ್‌ಶೀಟ್ ಸಿದ್ಧಪಡಿಸಲಾಗಿದೆ. ಹೈಕೋರ್ಟ್ ಸೂಚನೆ ನಂತರ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಇಷ್ಟೆಲ್ಲ ಕ್ರಮ ಕೈಗೊಂಡರೂ ಬಿಜೆಪಿಯವರು ಸರ್ಕಾರ ಮತ್ತು ನನ್ನ ವಿರುದ್ಧವೇ ಆರೋಪ ಮಾಡುತ್ತಾರೆ. ದುರ್ಘಟನೆಗೆ ನಾವೇ ಕಾರಣ ಎಂದು ಹೇಳುತ್ತಾರೆ. ಈ ವಿಚಾರಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಇನ್ನು, ಘಟನೆ ಕುರಿತಂತೆ ಮತ್ತೊಮ್ಮೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
*ಲಂಡನ್‌ನಿಂದ ಬಂದ ಮೊಮ್ಮಗನ ಜೊತೆ ಹೋಟೆಲಲ್ಲಿದ್ದೆ
*ಸಂಜೆ ಶಾಸಕ ಪೊನ್ನಣ್ಣ ಕರೆ ಮಾಡಿ ವಿಷಯ ತಿಳಿಸಿದರು
*ತಕ್ಷಣ ಪರಂ ಜೊತೆ ಆಸ್ಪತ್ರೆಗೆ ಹೋಗಿ ಶವ ನೋಡಿ ನೊಂದೆ
*ಆದರೂ ಬಿಜೆಪಿಗರು ನನ್ನ ಮೇಲೆ ಆರೋಪ ಮಾಡುತ್ತಾರೆ
*ಇದರಲ್ಲಿ ರಾಜಕೀಯ ಬೇಡ, ಘಟನೆಯ ಬಗ್ಗೆ ವಿಷಾದವಿದೆ