ನೀವು ಕನ್ನಡಿಗರಾಗಿದ್ರೆ ಫೋನ್‌ಪೇ ಆ್ಯಪ್‌ ಅನ್‌ಇನ್‌ಸ್ಟಾಲ್‌ ಮಾಡಿಬಿಡಿ : ಎಲ್ಲಡೆ ಅಭಿಯಾನ

| Published : Jul 21 2024, 05:19 AM IST

phonepe

ಸಾರಾಂಶ

ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲು ನೀಡುವ ಕರ್ನಾಟಕ ಸರ್ಕಾರದ ನೀತಿಯನ್ನು ನಾಚಿಕೆಗೇಡು ಎಂದಿದ್ದ ‘ಫೋನ್‌ ಪೇ’ ಯುಪಿಐ ಆ್ಯಪ್‌ನ ಸಿಇಒ ಸಮೀರ್‌ ನಿಗಮ್‌ ಹೇಳಿಕೆ, ಕಂಪನಿ ಪಾಲಿಗೆ ತಿರುಗುಬಾಣವಾಗಿ ಪರಿಣಮಿಸಿದೆ

ನವದೆಹಲಿ (ಜು.20): ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲು ನೀಡುವ ಕರ್ನಾಟಕ ಸರ್ಕಾರದ ನೀತಿಯನ್ನು ನಾಚಿಕೆಗೇಡು ಎಂದಿದ್ದ ‘ಫೋನ್‌ ಪೇ’ ಯುಪಿಐ ಆ್ಯಪ್‌ನ ಸಿಇಒ ಸಮೀರ್‌ ನಿಗಮ್‌ ಹೇಳಿಕೆ, ಕಂಪನಿ ಪಾಲಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲೇ ಕೇಂದ್ರ ಕಚೇರಿ ಹೊಂದಿದ್ದರೂ ಕನ್ನಡಿಗರ ವಿರುದ್ಧವೇ ಮಾತನಾಡಿರುವ ಕಂಪನಿ ಸಿಇಒ ಹೇಳಿಕೆ ವಿರೋಧಿಸಿ ಕನ್ನಡಿಗರು ‘ಬಾಯ್ಕಾಟ್‌ ಫೋನ್‌ ಪೇ’, ‘ಅನ್‌ಇನ್‌ಸ್ಟಾಲ್‌ ಫೋನ್‌ಪೇ ಆ್ಯಪ್‌’ ಅಭಿಯಾನ ಆರಂಭಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಎಕ್ಸ್‌ (ಟ್ವೀಟರ್‌)ನಲ್ಲಿ ‘ಬಾಯ್ಕಾಟ್‌ ಫೋನ್‌ ಪೇ’, (#BoycottPhonePe) ‘ಅನ್‌ಇನ್‌ಸ್ಟಾಲ್‌ ಫೋನ್‌ ಪೇ ಆ್ಯಪ್‌(Uninstall the Phone Pay app)’ ಹ್ಯಾಷ್‌ಟ್ಯಾಗ್‌ ಭರ್ಜರಿ ಟ್ರೆಂಡಿಂಗ್‌ ಆಗಿದೆ. ನೀವು ಸ್ವಾಭಿಮಾನಿ ಕನ್ನಡಿಗರಾಗಿದ್ದರೆ ‘ಫೋನ್‌ ಪೇ’ ಅನ್‌ಇನ್‌ಸ್ಟಾಲ್‌ ಮಾಡಿ ಎಂದು ಹಲವು ಬಳಕೆದಾರರು ಕರೆ ನೀಡಿದ್ದಾರೆ. ಜೊತೆಗೆ ಹಲವು ಟ್ವೀಟರ್‌ ಬಳಕೆದಾರರು, ತಮ್ಮ ಮೊಬೈಲ್‌ನಿಂದ ‘ಫೋನ್‌ ಪೇ’ ಆ್ಯಪ್‌ ತೆಗೆದು ಹಾಕುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ವ್ಯಾಪಾರಸ್ಥರು ಕೂಡಾ ತಮ್ಮ ಅಂಗಡಿಗಳಲ್ಲಿ ಅಳವಡಿಸಿದ್ದ ಫೋನ್‌ ಪೇ ಕ್ಯುಆರ್‌ ಕೋಡ್‌ ಸ್ಟಿಕ್ಕರ್‌ ಹರಿದು ಹಾಕಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಯ್ಕಾಟ್‌ ಕ್ಯಾಂಪೇನ್‌:

‘ಕನ್ನಡಿಗರ ವಿರುದ್ಧ ಮಾತನಾಡಿದ ಫೋನ್‌ ಪೇ ಸಿಇಓಗೆ ಬುದ್ಧಿ ಕಲಿಸಬೇಕಿದೆ. ಫೋನ್‌ ಪೇಗೆ 1 ರೇಟಿಂಗ್ ನೀಡಿ, ಮೊಬೈಲ್‌ನಿಂದ ಆ್ಯಪ್‌ ಡಿಲೀಟ್‌ ಮಾಡಿ’ ಎಂದು ಹಲವು ನೆಟ್ಟಿಗರು ಅಭಿಯಾನವನ್ನು ಆರಂಭಿಸಿದ್ದಾರೆ. ‘ಸ್ವದೇಶಿ ನಿರ್ಮಿತ ಆ್ಯಪ್‌ ಎಂದು ಫೋನ್‌ ಪೇ ಬಳಸುತ್ತಿದ್ದೆ. ಸಮೀರ್‌ ನಿಗಮ್‌ ಅವರೇ ನೀವು ಬೆಳೆಯಲು ಕರ್ನಾಟಕ ಬಹಳಷ್ಟು ಸಹಾಯ ಮಾಡಿದೆ. ನೀವು ನಿಮ್ಮ ವೃತ್ತಿ ಜೀವನ ಉತ್ತಮಗೊಳಿಸಲು ಬಂದಿದ್ದೀರಿ, ಬೆಂಗಳೂರನ್ನಲ್ಲ. ಫೋನ್‌ ಪೇಗೆ ಗುಡ್ ಬೈ ಹೇಳುವ ಸಮಯ ಬಂದಿದೆ’ ಎಂದು ಇನ್ನೊಬ್ಬ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಸಮೀರ್ ಕ್ಷಮೆಗೆ ಆಗ್ರಹ:

‘ಕನ್ನಡದ ಜನತೆ ಸಮೀರ್‌ ಅವರಿಗೆ ತಕ್ಕ ಪಾಠ ಕಲಿಸಿದ್ದು ಒಳ್ಳೆಯದಾಗಿದೆ. ಅವರು ಕ್ಷಮೆಯಾಚಿಸಬೇಕು. ಸಂವಿಧಾನವು ಸ್ಥಳೀಯ ಭಾಷೆಯನ್ನು ಅಗೌರವಿಸಲು ಹೇಳುವುದಿಲ್ಲ’ ಎಂದು ರಾಜಸ್ಥಾನ ಮೂಲದ ಟ್ವೀಟರ್‌ ಹ್ಯಾಂಡಲ್‌ನಲ್ಲಿ ಪ್ರತಿಕ್ರಿಯೆ ನೀಡಲಾಗಿದೆ. ‘ನಾನು ಬಯಸುವ ಯಾವುದೇ ಪಾವತಿ ಅಪ್ಲಿಕೇಶನ್ ನಾನು ಬಳಸಬಹುದು. ಭಾರತದ ಸಂವಿಧಾನ ನನಗೆ ಈ ಹಕ್ಕುಗಳನ್ನು ನೀಡಿದೆ’ ಎಂದು ಮತ್ತೊಬ್ಬರು ಕಮೆಂಟ್ ಮಾಡೋ ಮೂಲಕ ಸಮೀರ್‌ಗೆ ಟಾಂಗ್ ನೀಡಿದ್ದಾರೆ.

ಸಮೀರ್‌ ನಿಗಮ್‌ ಹೇಳಿದ್ದೇನು?

ಕರ್ನಾಟಕ ಸರ್ಕಾರದ ಮೀಸಲು ನೀತಿ ವಿರೋಧಿಸಿ ಜು.17ರಂದು ಹೇಳಿಕೆಯೊಂದನ್ನು ನೀಡಿದ್ದ ಸಮೀರ್‌ ನಿಗಮ್‌(Sameer nigam), ‘ನನಗೆ 46 ವರ್ಷ. 15ಕ್ಕಿಂತ ಅಧಿಕ ವರ್ಷ ಯಾವುದೇ ರಾಜ್ಯದಲ್ಲಿ ವಾಸಿಸಿಲ್ಲ. ನನ್ನ ತಂದೆ ಭಾರತೀಯ ನೌಕಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶದಾದ್ಯಂತ ಹಲವು ಕಡೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಕಂಪೆನಿಗಳನ್ನು ಸ್ಥಾಪಿಸಿದ್ದೇನೆ. 25 ಸಾವಿರಕ್ಕೂ ಹೆಚ್ಚು ಜನರಿಗೆ ಕೆಲಸವನ್ನು ನೀಡಿದ್ದೇನೆ. ನನ್ನ ಮಕ್ಕಳು ತವರು ನೆಲದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ಇದು ನಾಚಿಕೆಗೇಡುತನ’ ಎಂದಿದ್ದರು.