ಎಚ್‌.ಡಿ.ಕುಮಾರಸ್ವಾಮಿ ಒತ್ತುವರಿ ತೆರವು ಮಾಡದಿದ್ರೆ, ಜೈಲಿಗೆ ಹೋಗಿ ! ಹೈಕೋರ್ಟ್

| N/A | Published : Jan 30 2025, 07:53 AM IST

HD Kumaraswamy

ಸಾರಾಂಶ

ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ, ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿದ್ದಾರೆನ್ನಲಾದ 14 ಎಕರೆ ಸರ್ಕಾರಿ ಜಮೀನು ಎರಡು ವಾರದಲ್ಲಿ ತೆರವಾಗುವಂತೆ ಕ್ರಮ  

ಬೆಂಗಳೂರು : ಕೇಂದ್ರದ ಭಾರಿ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ, ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿದ್ದಾರೆನ್ನಲಾದ 14 ಎಕರೆ ಸರ್ಕಾರಿ ಜಮೀನು ಎರಡು ವಾರದಲ್ಲಿ ತೆರವಾಗುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ ಬುದ್ಧಿ ಕಲಿಸಬೇಕಾಗುತ್ತದೆ.

- ಹೀಗಂತ ಹೈಕೋರ್ಟ್ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ಕಟು ಎಚ್ಚರಿಕೆ ನೀಡಿದೆ.

ನ್ಯಾಯಾಲಯದ ಸೂಚನೆ ಹೊರತಾಗಿಯೂ ಕುಮಾರಸ್ವಾಮಿ ಮತ್ತವರ ಸಂಬಂಧಿಕರು ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿರುವ 14 ಎಕರೆ ಸರ್ಕಾರಿ ಜಮೀನು ತೆರವು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಎಚ್ಚರಿಕೆ ನೀಡಿದೆ.

ಪ್ರಕರಣದಲ್ಲಿ ಕೋರ್ಟ್‌ ಆದೇಶ ಪಾಲಿಸಲು 3 ತಿಂಗಳು ಕಾಲಾವಕಾಶ ನೀಡಬೇಕೆಂಬ ಸರ್ಕಾರಿ ವಕೀಲರ ಮನವಿಯನ್ನು ತಳ್ಳಿಹಾಕಿದ ಪೀಠ, ಇನ್ನೆರಡು ವಾರಗಳ ಅವಕಾಶ ನೀಡಲಾಗುವುದು. ಅಷ್ಟರೊಳಗೆ ಒತ್ತುವರಿ ತೆರವುಗೊಳಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.

ಕರಾಠಿಯ ವಿರುದ್ಧವೂ ಗರಂ:

ಇದಕ್ಕೂ ಮುನ್ನ ಕಠಾರಿಯಾ ಅವರು, ಸರ್ಕಾರ ತನ್ನೆಲ್ಲ ಪ್ರಯತ್ನ ಮಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ 14 ಎಕರೆಗೂ ಹೆಚ್ಚು ಒತ್ತುವರಿ ಜಮೀನು ತೆರವು ಮಾಡಿದೆ. ಸಮಗ್ರ ಮತ್ತು ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಸ್‌ಐಟಿ ರಚನೆ ಮಾಡಲಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿಗಳಿಗೆ ವಿವರಣೆ ನೀಡಿದರು.

ಅದಕ್ಕೆ ಒಪ್ಪದ ನ್ಯಾಯಮೂರ್ತಿ ಸೋಮಶೇಖರ್‌ ಅವರು, ಪ್ರತಿವಾದಿಗಳು (ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಂಬಂಧಿಗಳು) ಉನ್ನತ ಹುದ್ದೆಯಲ್ಲಿದ್ದಾರೆಂದು ನೀವು 5 ವರ್ಷ ಏನೂ ಮಾಡಲಿಲ್ಲವೇ ಎಂದು ಪ್ರಶ್ನಿಸಿ, ನಿಮಗೆ ಇನ್ನೆರಡು ವಾರಗಳ ಸಮಯ ಕೊಡುತ್ತೇನೆ. ಅಷ್ಟರೊಳಗೆ ಒತ್ತುವರಿ ತೆರವು ಸಾಧ್ಯವಾಗುವುದಾದರೆ ಹೇಳಿ. ಇಲ್ಲವಾದರೆ ನೀವು ಅಸಮರ್ಥರು ಎಂದು ತೀರ್ಮಾನಿಸಿ ಜೈಲಿಗೆ ಕಳಿಸಲಾಗುವುದು. ನಿಮ್ಮ ವಿರುದ್ಧ ಈ ಕೂಡಲೇ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುತ್ತೇವೆ. 15 ದಿನ ಜೈಲಲ್ಲಿದ್ದು ಬಂದರೆ ಸರಿಹೋಗುತ್ತೀರಿ. ನ್ಯಾಯಾಲಯ ಆದೇಶ ಪಾಲನೆ ಮಾಡುವತನಕ ನಿಮ್ಮ ವೇತನ ನಿಲ್ಲಿಸಿದರೆ ಗೊತ್ತಾಗುತ್ತದೆ. ನೀವು ನೆಪ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ವ್ಯವಸ್ಥೆ ನೋಡಿ ಜನ ನಗುತ್ತಿದ್ದಾರೆ. ಅದು ನಿಮಗೆ ತಿಳಿದಿದೆಯೇ ಎಂದು ಕಟಾರಿಯಾರನ್ನು ನ್ಯಾಯಮೂರ್ತಿಗಳು ತೀಕ್ಷ್ಣವಾಗಿ ಪ್ರಶ್ನಿಸಿದರು.

ಅಲ್ಲದೆ, ನೀವು (ಕಟಾರಿಯಾ) ನೀಡಿರುವ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತೇನೆ. ನೀವು ಹೇಳಿರುವುದಲ್ಲಿ ಸುಳ್ಳು ಕಂಡುಬಂದರೆ ಖಂಡಿತ ಕ್ರಮ ಜರುಗಿಸಲಾಗುವುದು. ಈ ನ್ಯಾಯಪೀಠವನ್ನು ಲಘುವಾಗಿ ಪರಿಗಣಿಸಬೇಡಿ. ಅಧಿಕಾರಿಗಳಿಗೆ ನ್ಯಾಯಾಂಗದ ಭಾಷೆ ಅರ್ಥವಾಗುವುದೇ ಇಲ್ಲ ಎಂದು ಕಟುವಾಗಿ ಹೇಳಿದರು.

ಆಗ ರಾಜ್ಯ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್‌ ವಿ.ರೋಣ ಅವರು, ಕಟಾರಿಯಾ ಅವರು ಕಂದಾಯ ಇಲಾಖೆ ಸುಧಾರಣೆಗೆ ಇ–ಖಾತಾ ವ್ಯವಸ್ಥೆ ರೂಪಿಸಿದ್ದಾರೆ. ಪ್ರಕರಣದಲ್ಲಿ ಹೈಕೋರ್ಟ್‌ ಆದೇಶದ ಪಾಲನೆಗೆ ಮೂರು ತಿಂಗಳಾದರೂ ಕಾಲಾವಕಾಶ ನೀಡಬೇಕು ಎಂದು ಸಮಜಾಯಿಷಿ ನೀಡಲು ಮುಂದಾದರು.

ಅದರಿಂದ ಮತ್ತಷ್ಟು ಕೋಪಗೊಂಡ ನ್ಯಾಯಮೂರ್ತಿ ಸೋಮಶೇಖರ್, ಇ-ಖಾತಾ ಎಂಬುದೇ ಭ್ರಷ್ಟಾಚಾರದ ಆಗರ. ನಮ್ಮಲ್ಲಿ ಮಾನಸಿಕ ಭ್ರಷ್ಟಾಚಾರ, ಪೂರ್ವಗ್ರಹಪೀಡಿತ ಭಾವನೆಯ ಭ್ರಷ್ಟಾಚಾರ, ಹಣದ ಭ್ರಷ್ಟಾಚಾರ ಎನ್ನುವುದು ಸೇರಿ ವಿವಿಧ ಮಾದರಿಯ ಭ್ರಷ್ಟಾಚಾರಗಳಿವೆ. ಅಧಿಕಾರಿಗಳು ಮೊದಲು ಪೂರ್ವಾಗ್ರಹಪೀಡಿತ ಭಾವನೆಯ ಭ್ರಷ್ಟತೆ ಪರಿಧಿಯಿಂದ ಹೊರಬರಬೇಕು ಎಂದರು.