ಮಸೀದಿ ಮುಂದೆ ಭಾರತ್‌ ಮಾತಾಕೀ ಜೈ ಕೂಗಿದರೆ ತಪ್ಪಲ್ಲ- ಸಾಮರಸ್ಯವನ್ನು ಉತ್ತೇಜಿಸುತ್ತದೆ : ಹೈಕೋರ್ಟ್‌

| Published : Sep 28 2024, 10:01 AM IST

Highcourt

ಸಾರಾಂಶ

‘ಭಾರತ್‌ ಮಾತಾ ಕಿ ಜೈ’ ಘೋಷಣೆಯು ಸಾಮರಸ್ಯವನ್ನು ಉತ್ತೇಜಿಸುತ್ತದೆ ಹೊರತು ವೈಷಮ್ಯ ಹರಡುವುದಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

  ಬೆಂಗಳೂರು : ‘ಭಾರತ್‌ ಮಾತಾ ಕಿ ಜೈ’ ಘೋಷಣೆಯು ಸಾಮರಸ್ಯವನ್ನು ಉತ್ತೇಜಿಸುತ್ತದೆ ಹೊರತು ವೈಷಮ್ಯ ಹರಡುವುದಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮಸೀದಿ ಮುಂದೆ ಪ್ರತಿಭಟನೆ ನಡೆಸಿ ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ ಸಂಬಂಧ ಎರಡು ಧರ್ಮಗಳ ವಿರುದ್ಧ ದ್ವೇಷ ಹರಡುವ ಆರೋಪದ ಮೇಲೆ ಮಂಗಳೂರಿನ ಸುರೇಶ್‌ ಸೇರಿ ಐವರು ಹಿಂದು ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಳೆದ ಜೂ.9ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕಾರ ಸ್ವೀಕಾರ ಸಮಾರಂಭ ವೀಕ್ಷಣೆ ಬಳಿಕ ಅರ್ಜಿದಾರರು ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ 25 ಜನರಿದ್ದ ಒಂದು ಗುಂಪು ಅರ್ಜಿದಾರರನ್ನು ತಡೆದು, ಏಕೆ ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಿದ್ದೀರಾ ಎಂದು ಆಕ್ಷೇಪಿಸಿತ್ತು. ಆ ಸಂದರ್ಭದಲ್ಲಿ ಅರ್ಜಿದಾರರೊಬ್ಬರಿಗೆ ಚಾಕುವಿಂದ ಚುಚ್ಚಲಾಗಿತ್ತು. ಈ ಕುರಿತು ಅರ್ಜಿದಾರರು ದೂರು ದಾಖಲಿಸಿದ್ದರು.

ಆದರೆ, ಮರು ದಿನ ಮುಸ್ಲಿಂ ವ್ಯಕ್ತಿ ಪಿ.ಕೆ.ಅಬ್ದುಲ್ಲಾ ಎಂಬಾತ ಮಂಗಳೂರಿನ ಕೊಣಾಜೆ ಪೊಲೀಸ್‌ ಠಾಣೆಗೆ ದೂರು ನೀಡಿ, ಅರ್ಜಿದಾರರು ಮಸೀದಿ ಮುಂದೆ ಬಂದು ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದರು. ಅದರಂತೆ ಪೊಲೀಸರು ಐಪಿಸಿ ಸೆಕ್ಷನ್‌ 153 ಎ ಅಡಿಯಲ್ಲಿ ಎರಡು ಧರ್ಮಗಳ ನಡುವೆ ದ್ವೇಷ ಹರಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿಯನ್ನು ಪುಸ್ಕರಿಸಿದ ಹೈಕೋರ್ಟ್‌, ಅರ್ಜಿದಾರರು ಹೂಡಿದ್ದ ಪ್ರಕರಣಕ್ಕೆ ಪ್ರತಿಯಾಗಿ ಈ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಐಪಿಸಿ ಸೆಕ್ಷನ್‌ 153ಎ ಅನ್ವಯವಾಗುವ ಒಂದೇ ಒಂದು ಅಂಶವಿಲ್ಲ. ವಾಸ್ತವವಾಗಿ ಧರ್ಮ-ಭಾಷೆ ಸೇರಿದಂತೆ ವಿವಿಧ ಅಂಶಗಳನ್ನು ಮುಂದಿಟ್ಟುಕೊಂಡು ಬೇರೆ ಬೇರೆ ಗುಂಪುಗಳ ನಡುವೆ ದ್ವೇಷ ಭಾವನೆ ಮೂಡಿಸುವ ಘಟನೆ ನಡೆದಿರಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಅಂತಹ ಘಟನೆ ನಡೆದಿಲ್ಲ. ಐಪಿಸಿ ಸೆಕ್ಷನ್‌ 153 ದುರ್ಬಳಕೆಗೆ ಈ ಪ್ರಕರಣ ಉತ್ತಮ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಅರ್ಜಿದಾರರು ಕೇವಲ ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಾರೆ ಹಾಗೂ ಪ್ರಧಾನ ಮಂತ್ರಿಯನ್ನು ಹೊಗಳಿದ್ದಾರೆ. ದ್ವೇಷ ಹರಡಿದ ಅಂಶವು ದೂರಿನಲ್ಲಿಯೇ ಉಲ್ಲೇಖಿಸಿಲ್ಲ. ವಾಸ್ತವ ಅಂಶ ಪರಿಗಣಿಸಿದರೆ ‘ಭಾರತ್‌ ಮಾತಾ ಕಿ ಜೈ’ ಘೋಷಣೆ ಕೂಗಿರುವುದು ಕೇವಲ ಸಾಮರಸ್ಯ ಉತ್ತೇಜಿಸುತ್ತದೆಯೇ ಹೊರತು ದ್ವೇಷವನ್ನಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ. ಅರ್ಜಿದಾರರ ಪರ ಹೈಕೋರ್ಟ್‌ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌ ವಾದ ಮಂಡಿಸಿದ್ದರು.