ಸಾರಾಂಶ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜಪ್ತಿ ಮಾಡಲಾದ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನಾಭರಣಗಳು ಸೇರಿ ಇನ್ನಿತರ ವಸ್ತುಗಳನ್ನು ತಮಿಳುನಾಡು ಸರ್ಕಾರದ ಸುಪರ್ದಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ವಿಶೇಷ ನ್ಯಾಯಾಲಯ ಪೂರ್ಣಗೊಳಿಸಿದೆ.
ಬೆಂಗಳೂರು : ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜಪ್ತಿ ಮಾಡಲಾದ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನಾಭರಣಗಳು ಸೇರಿ ಇನ್ನಿತರ ವಸ್ತುಗಳನ್ನು ತಮಿಳುನಾಡು ಸರ್ಕಾರದ ಸುಪರ್ದಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ವಿಶೇಷ ನ್ಯಾಯಾಲಯ ಪೂರ್ಣಗೊಳಿಸಿದೆ.
ತಮಿಳುನಾಡಿನ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಜೆ. ಅನ್ನೆ ಮೇರಿ ಸ್ವರ್ಣಾ, ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ ವಿಶೇಷ ತನಿಖಾ ತಂಡದ ಪೊಲೀಸ್ ವರಿಷ್ಠಾಧಿಕಾರಿ ವಿಮಲಾ, ಉಪ ಪೊಲೀಸ್ ವರಿಷ್ಠಾಧಿಕಾರಿ ಪುಗಳ್ ವೆಂದನ್ ನೇತೃತ್ವದ ತಂಡಕ್ಕೆ ವಜ್ರಾಭರಣ ಸೇರಿ ಇತರೆ ವಸ್ತುಗಳನ್ನು ಹಸ್ತಾಂತರ ಮಾಡಲಾಯಿತು.
ಜಯಲಲಿತಾ ಅವರ ಚಿನ್ನದ ಡಾಬು, ಕಿರೀಟ, ಕತ್ತಿ, ವಿವಿಧ ವಿನ್ಯಾಸದ ಆಕರ್ಷಕ ಸರಗಳು, ವಜ್ರ ವೈಢೂರ್ಯಗಳನ್ನು ನೀಡಲಾಯಿತು. ತಮಿಳುನಾಡಿನ ಪರವಾನಗಿ ಹೊಂದಿರುವ ಪ್ರಭಾಕರ್ ಅವರು ವಜ್ರಾಭರಣಗಳನ್ನು ತೂಕ ಮಾಡಿ ಪರಿಶೀಲನೆ ನಡೆಸಿದ ಬಳಿಕ ನೀಡಲಾಯಿತು. ರಾಜ್ಯ ಸರ್ಕಾರದಿಂದ ವಿಶೇಷ ಸರ್ಕಾರಿ ಅಭಿಯೋಜಕರಾದ ಕಿರಣ್ ಜವಳಿ ಇಡೀ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಇಡೀ ಹಸ್ತಾಂತರ ಪ್ರಕ್ರಿಯೆಯನ್ನು ಫೋಟೊ ಮತ್ತು ವಿಡಿಯೋ ಮಾಡಲಾಗಿದೆ.
ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳು ಸೇರಿ ಎರಡು ಲಕ್ಷ ರು.ಗಿಂತ ಅಧಿಕ ನಗದನ್ನು ಹಿಂತಿರುಗಿಸಲಾಗಿದೆ. ಹಳೆಯ ನೋಟುಗಳನ್ನು ಮರಳಿಸಲಾಗಿದ್ದು, ನೋಟು ಅಮಾನೀಕರಣದಿಂದಾಗಿ ನೋಟಿನ ಮೌಲ್ಯ ಕಳೆದುಕೊಂಡಿವೆ. ಹೀಗಾಗಿ ಆರ್‌ಬಿಐ ಮೂಲಕ ತಮಿಳುನಾಡು ಸರ್ಕಾರ ಬದಲಿಸಿಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.
2023ರವರೆಗೆ 10.18 ಕೋಟಿ ರು. ಮೌಲ್ಯದ ನಿಶ್ಚಿತ ಠೇವಣಿ ರಸೀದಿಯೂ ನ್ಯಾಯಾಲಯದ ವಶದಲ್ಲಿದ್ದು, ಅದನ್ನೂ ನೀಡಲಾಗಿದೆ. ಎಲ್ಲ ಹಣವನ್ನು ತಮಿಳುನಾಡು ಸರ್ಕಾರಕ್ಕೆ ಎಲ್ಲ ಬ್ಯಾಂಕ್‌ಗಳು ವರ್ಗಾಯಿಸಬೇಕು. ತಮಿಳುನಾಡು ಸರ್ಕಾರಕ್ಕೆ ಆಗುವ ಹಣ ವರ್ಗಾವಣೆ ಪ್ರಕ್ರಿಯೆ ಮೇಲೆ ಡಿವೈಎಸ್‌ಪಿ ಪುಗಳ್ ವೆಂದನ್ ನಿಗಾವಹಿಸಬೇಕು ಎಂದು ಹೇಳಿದೆ.
ಗ್ರಾಮೀಣ ಶಿಕ್ಷಣ, ಆರೋಗ್ಯಕ್ಕೆ ಬಳಕೆಗೆ ಸೂಚನೆ:
ಕೋಟ್ಯಂತರ ರು. ಮೌಲ್ಯದ ವಸ್ತುಗಳು ದೊರೆತ ಬಳಿಕ ತಮಿಳುನಾಡು ಸರ್ಕಾರ ತನ್ನ ನ್ಯಾಯಾಂಗ ಅಧಿಕಾರವನ್ನು ಬಳಸಿಕೊಂಡು ವಜ್ರಾಭರಣ ಮತ್ತು ಆಸ್ತಿ ಮಾರಾಟದಿಂದ ಲಭ್ಯವಾಗುವ ಹಣವನ್ನು ರಾಜ್ಯದ ಗ್ರಾಮೀಣ ಭಾಗದ ಶಿಕ್ಷಣ ಮತ್ತು ಆರೋಗ್ಯಕ್ಕೆ ಬಳಕೆ ಮಾಡುವುದು ಸೂಕ್ತ. ಇದರಿಂದ ಸಂವಿಧಾನ ರೂಪಿಸಿದವರ ಆಶಯ ಈಡೇರಿಸಿದಂತಾಗುತ್ತದೆ. ಅಲ್ಲದೇ, ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ತಿಳಿಸಿದೆ.
ಹಸ್ತಾಂತರ ಪ್ರಕ್ರಿಯೆ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ಕಾರಿ ವಿಶೇಷ ಅಭಿಯೋಜಕ ಕಿರಣ್ ಜವಳಿ, ನ್ಯಾಯಾಲಯದ ಆದೇಶದಂತೆ ತಮಿಳುನಾಡು ವಿಚಕ್ಷಣಾ ಅಧಿಕಾರಿಗಳ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿ ಒಟ್ಟು 27 ಕೆ.ಜಿ. ಚಿನ್ನದ ವಿವಿಧ ವಸ್ತುಗಳನ್ನು ಹಿಂತಿರುಗಿಸಲಾಗಿದೆ. ಅಲ್ಲದೆ ಸುಮಾರು 1526 ಎಕರೆ ಜಾಗದ ಆಸ್ತಿ ಪತ್ರಗಳನ್ನು ತಮಿಳುನಾಡು ಸರ್ಕಾರಕ್ಕೆ ಮರಳಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ನೊಂದಿಗೆ ಜಯಲಲಿತಾ ಅವರಿಗೆ ಸೇರಿದ ವಸ್ತುಗಳನ್ನು ನಗರದಿಂದ ಆರು ಟ್ರಂಕ್‌ಗಳಲ್ಲಿ ತಮಿಳುನಾಡಿಗೆ ಕೊಂಡೊಯ್ಯಲಾಗಿದೆ. ಸದ್ಯ ಜಯಲಲಿತಾ ಅವರಿಂದ ವಶಪಡಿಸಿಕೊಂಡ ಯಾವುದೇ ವಸ್ತುಗಳು ರಾಜ್ಯದಲ್ಲಿ ಇಲ್ಲ ಎಂದು ಹೇಳಿದರು.
ಅಕ್ರಮ ಆಸ್ತಿ ಪ್ರಕರಣದಲ್ಲಿ 2014ರಲ್ಲಿ ಜಯಲಲಿತಾ ಅವರನ್ನು ದೋಷಿ ಎಂದು ಬೆಂಗಳೂರಿನ ವಿಶೇಷ ನ್ಯಾಯಾಲಯ ಘೋಷಿಸಿತ್ತು. ಜಯಲಲಿತಾ ಅವರು 2016ರಲ್ಲಿ ತೀರಿಕೊಂಡಿದ್ದು, 21 ವರ್ಷಗಳಿಂದ ಆಕೆಯಿಂದ ವಶಪಡಿಸಿಕೊಳ್ಳಾದ ವಸ್ತುಗಳು ಕರ್ನಾಟಕದಲ್ಲೇ ಇದ್ದವು.
ಮರಳಿಸಿದ ವಸ್ತುಗಳು
- 27 ಕೆ.ಜಿಯ ಚಿನ್ನಾಭರಣ
- 740 ದುಬಾರಿ ಚಪ್ಪಲಿಗಳು
- 11,344 ರೇಷ್ಮೆ ಸೀರೆಗಳು
- 250 ಶಾಲು
- 12 ರೆಫ್ರಿಜರೇಟರ್
- 10 ಟಿವಿ ಸೆಟ್, 8 ವಿಸಿಆರ್
- 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್,
- 1040 ವಿಡಿಯೋ ಕ್ಯಾಸೆಟ್,
- 3 ಐರನ್ ಲಾಕರ್