ಸಾರಾಂಶ
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಾವು ಜೋರು ಪಡೆಯುತ್ತಿದೆ. ಎಡಗೈ ಸಮುದಾಯಗಳ ಜತೆಗೆ ಪ್ರತಿಪಕ್ಷಗಳೂ ಬೀದಿಗಿಳಿದಿವೆ. ನ್ಯಾ.ನಾಗಮೋಹನ್‌ದಾಸ್ ಆಯೋಗ ವರದಿಯಲ್ಲಿ ಸ್ಪೃಷ್ಯ ಜಾತಿಗಳಿಗೆ ಅನ್ಯಾಯ ಆಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ನಿಯೋಗ ಸಿಎಂ ಮೊರೆ ಹೋಗಿದೆ.
ಶಿವರಾಜ್ ತಂಗಡಗಿ- ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು
ಕನ್ನಡಪ್ರಭ ಸಂದರ್ಶನ - ಶ್ರೀಕಾಂತ್ ಎನ್. ಗೌಡಸಂದ್ರ
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಾವು ದಿನದಿಂದ ದಿನಕ್ಕೆ ಜೋರು ಪಡೆಯುತ್ತಿದೆ. ಒಳಮೀಸಲು ಜಾರಿಗೆ ಎಡಗೈ ಸಮುದಾಯಗಳ ಜತೆಗೆ ಪ್ರತಿಪಕ್ಷಗಳೂ ಬೀದಿಗಿಳಿದಿವೆ. ನ್ಯಾ.ನಾಗಮೋಹನ್‌ದಾಸ್ ಆಯೋಗ ವರದಿಯಲ್ಲಿ ಸ್ಪೃಷ್ಯ ಜಾತಿಗಳಿಗೆ ಅನ್ಯಾಯ ಆಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ನಿಯೋಗ ಸಿಎಂ ಮೊರೆ ಹೋಗಿದೆ. ಇದರ ನಡುವೆಯೇ ಶನಿವಾರ ಒಳ ಮೀಸಲು ಕುರಿತ ವಿಶೇಷ ಸಂಪುಟ ಸಭೆ ಕರೆಯಲಾಗಿದೆ. ಮತ್ತೊಂದೆಡೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಬಿಸಿ ಆಯೋಗವು 624 ಕೋಟಿ ರು. ವೆಚ್ಚದಲ್ಲಿ 2ನೇ ಬಾರಿಗೆ ಬಹುಚರ್ಚಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (ಜಾತಿಗಣತಿ) ಮುಂದಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸ್ಪೃಶ್ಯ ಜಾತಿಗಳಿಗೆ ಮೀಸಲಾತಿಗೆ ಕಡಿಮೆಯಾಗಿದೆ ಎಂಬ ಅಸಮಾಧಾನವೂ ಶುರುವಾಗಿದೆ. ಆಯೋಗ ಮಾಡಿರುವ ಸಮಗ್ರ ಸಮೀಕ್ಷೆಯ ಬಗ್ಗೆಯೇ ಪ್ರಶ್ನೆಗಳು ಎದ್ದಿವೆ. ಜಾತಿ ಗಣಿತಿ ಎಂಬುದೇ ದುಬಾರಿ ವ್ಯವಹಾರ ಎಂಬ ಗುಮಾನಿಯೂ ಇದೆ. ಈ ಎಲ್ಲಾ ಗೊಂದಲ, ಪ್ರಶ್ನೆಗಳು ಹಾಗೂ ಅನುಮಾನಗಳ ಬಗ್ಗೆ ಉತ್ತರಿಸಲು ಇಲಾಖೆಯ ಸಚಿವರೂ ಹಾಗೂ ಸ್ಪೃಶ್ಯ ಜಾತಿಗಳ ಏಕೈಕ ಸಚಿವರಾದ ಶಿವರಾಜ್ ತಂಗಡಗಿ ಅವರು ‘ಕನ್ನಡಪ್ರಭ’ ಜತೆ ಮುಖಾಮುಖಿ ಆಗಿದ್ದಾರೆ.
ಒಳ ಮೀಸಲಾತಿ ಕುರಿತ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಮುಂದೆ?
ಒಳ ಮೀಸಲಾತಿ ಎಂಬುದು ಮೂರು ದಶಕಗಳ ಬೇಡಿಕೆ. ಹಿಂದಿನ ಯಾವ ಸರ್ಕಾರಗಳೂ ಇದನ್ನು ಈಡೇರಿಸಿರಲಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬದ್ಧತೆಯಿಂದ ನ್ಯಾ.ನಾಗಮೋಹನ್‌ದಾಸ್ ಆಯೋಗ ರಚಿಸಿ ವರದಿ ಪಡೆದಿದ್ದಾರೆ. ಆ.16 ರಂದು ವಿಶೇಷ ಸಚಿವ ಸಂಪುಟ ಕರೆದಿದ್ದು, ಅದರಲ್ಲಿ ಚರ್ಚಿಸಿ ನಿರ್ಧಾರ ಮಾಡುತ್ತಾರೆ.
ಆಯೋಗದ ವರದಿಯಲ್ಲಿರುವ ಒಳ ಮೀಸಲಾತಿ ಅಂಕಿ-ಅಂಶಕ್ಕೆ ನಿಮ್ಮ ಸಹಮತ ಇದೆಯೇ?
ಒಳ ಮೀಸಲಾತಿ ಕುರಿತ ವರದಿ ನಮಗೆ ನೀಡಿ ಅಧ್ಯಯನ ನಡೆಸಲು ಸೂಚಿಸಿದ್ದಾರೆ. ನಾನಿನ್ನೂ ವರದಿ ನೋಡಿಲ್ಲ. ವರದಿ ಅಧ್ಯಯನ ಮಾಡಿ ಶನಿವಾರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನನ್ನ ಅಭಿಪ್ರಾಯ ತಿಳಿಸುತ್ತೇನೆ. ಚುನಾವಣೆ ಪ್ರಣಾಳಿಕೆಯಲ್ಲೇ ನಾವು ಒಳ ಮೀಸಲಾತಿ ಜಾರಿ ಬದ್ಧತೆ ಪ್ರಕಟಿಸಿದ್ದೇವೆ. ಇದರಲ್ಲಿ ಎರಡನೇ ಮಾತಿಲ್ಲ.
ಹಿಂದಿನ ಸರ್ಕಾರ ಸ್ಪೃಶ್ಯ ಜಾತಿಗಳಿಗೆ ಶೇ.4.5 ರಷ್ಟು ಮೀಸಲಾತಿ ನಿಗದಿ ಮಾಡಿತ್ತು. ಆಯೋಗವು ಶೇ.4 ನಿಗದಿ ಮಾಡಿದೆ. ಇದು ನಿಮಗೆ ಓಕೆನಾ?
ಶೇ.4, ಶೇ.4.5 ಎಂದೆಲ್ಲ ಅಂಕಿ-ಅಂಶ ಮಾತನಾಡಲು ನಾನು ಹೋಗುವುದಿಲ್ಲ. ಹಿಂದಿನ ಸರ್ಕಾರ ಯಾವುದೇ ಸಮೀಕ್ಷೆ ಇಲ್ಲದೆ ರಾಮನ ಲೆಕ್ಕ ಭೀಮನ ಲೆಕ್ಕ ಎಂದು ಮೀಸಲಾತಿ ಹಂಚಿ ನಿರ್ಧರಿಸಿತ್ತು. ಬಳಿಕ ಅವರೇ ಹಿಂದೆ ಸರಿಯಿತು. ಈಗ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲೂ ಕೆಲವೊಂದು ತೊಡಕುಗಳು ಇರಬಹುದು. ಅದರ ಬಗ್ಗೆ ಚರ್ಚೆಯಾಗಬೇಕು. ಇಂತಹ ವಿಚಾರಗಳ ಬಗ್ಗೆ ಸಂಪುಟ ಸಭೆಯಲ್ಲಿ ಪರಿಹಾರ ಪಡೆದುಕೊಳ್ಳುತ್ತೇವೆ.
ಸ್ಪೃಶ್ಯ ಜಾತಿಗಳಿಗೆ ಮೀಸಲಾತಿಗೆ ಕಡಿಮೆ ಅಂತ ಉಪಸಭಾಧ್ಯಕ್ಷರೇ ಮುಖ್ಯಮಂತ್ರಿಯವರ ಮೊರೆ ಹೋಗಿದ್ದರಲ್ವಾ?
ರುದ್ರಪ್ಪ ಲಮಾಣಿ ಅವರ ನಿಯೋಗ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿರುವುದು ಗೊತ್ತಿದೆ. ನನಗೆ ಸಚಿವ ಸಂಪುಟದಲ್ಲೇ ಚರ್ಚಿಸಲು ಅವಕಾಶ ಇದೆ. ಹೀಗಾಗಿ ನಾನು ನನ್ನ ಅಭಿಪ್ರಾಯಗಳನ್ನು ಸಂಪುಟದಲ್ಲೇ ಚರ್ಚಿಸುತ್ತೇನೆ. ವರದಿಯಲ್ಲಿರುವುದೇ ಅಂತಿಮವಲ್ಲ. ಅದರಲ್ಲಿ ಸಣ್ಣ ಪುಟ್ಟ ತೊಡಕುಗಳನ್ನು ಬಗೆಹರಿಸಿ 101 ಜಾತಿಗಳಿಗೂ ನ್ಯಾಯ ಒದಗಿಸುತ್ತೇವೆ.
ಆಯೋಗದ ವರದಿಯಲ್ಲೇ ಕೇಂದ್ರದ 2027ರ ಜಾತಿಗಣತಿ ವರದಿ ಅನ್ವಯ ಮತ್ತೆ ಒಳ ಮೀಸಲಾತಿ ಪರಿಷ್ಕರಣೆಗೆ ತಿಳಿಸಿದ್ದಾರೆ?
ಸರ್ಕಾರ ಮತ್ತೆ ಪರಿಷ್ಕರಣೆ ಮಾಡುತ್ತಾ? ಎಲ್ಲಾ ಸಾಧಕ ಬಾಧಕಗಳನ್ನು ಸಂಪುಟದಲ್ಲಿ ಚರ್ಚಿಸಲಾಗುವುದು. ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಶೇ.24.1ರಷ್ಟು ಅನುದಾನ ನೀಡಲು ಎಸ್ಸಿಪಿ-ಟಿಎಸ್‌ಪಿ ಕಾಯ್ದೆ ಜಾರಿ ಮಾಡಲಿ. ಬಳಿಕ ದಲಿತರ ಬಗ್ಗೆ ಮಾತನಾಡಲಿ.
ಸಮಗ್ರ ಸಮೀಕ್ಷೆ ಸರಿಯಾಗಿಲ್ಲ. ಎಲ್ಲಾ ಮನೆಗಳಿಗೂ ಹೋಗಿಲ್ಲ ಎಂಬ ವಾದವಿದೆಯಲ್ಲ? ಕೆಲ ಕೈಲಾಗದವರು ಮಾಡುವ ಟೀಕೆ ಟಿಪ್ಪಣಿ ಇದು. ಸುಮ್ಮನೆ ಮನೆಗಳಿಗೆ ಹೋಗಿ ಸ್ಟಿಕ್ಕರ್ ಅಂಟಿಸುತ್ತಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ಸಮೀಕ್ಷೆಯಲ್ಲಿ ಎಲ್ಲಾ ಜನಸಂಖ್ಯೆ ಕವರ್ ಆಗದಿರಬಹುದು. ಹಾಗಂತ ವರದಿಯ ನೈಜತೆ ಪ್ರಶ್ನಿಸಬಾರದು.
ರಾಜ್ಯ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಬಿಜೆಪಿಯವರು ಪ್ರತಿಭಟಿಸುತ್ತಿದ್ದಾರೆ ಒಳ ಮೀಸಲಾತಿ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ. ಇದೇ ಬಿಜೆಪಿ ಸರ್ಕಾರವೇ ಎ.ಜೆ. ಸದಾಶಿವ ಆಯೋಗ ವರದಿ ತಿರಸ್ಕರಿಸಿತು. ಆಗ ರಾಜ್ಯದಲ್ಲಿ ಸಚಿವರಾಗಿದ್ದ ಗೋವಿಂದ ಕಾರಜೋಳ, ಕೇಂದ್ರದಲ್ಲಿ ಸಚಿವರಾಗಿದ್ದ ನಾರಾಯಣಸ್ವಾಮಿ ಏನು ಮಾಡುತ್ತಿದ್ದರು? ಅವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಾವು ಮಾದಿಗ, ಛಲವಾದಿ, ಬಂಜಾರ, ಭೋವಿ, ಕೊರಮ, ಕೊರಚ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಒಳ ಮೀಸಲಾತಿ ಮಾಡುತ್ತೇವೆ.
ರಾಜ್ಯದಲ್ಲಿ 2ನೇ ಬಾರಿಗೆ ನೂರಾರು ಕೋಟಿ ರು. ವೆಚ್ಚ ಮಾಡಿ ಜಾತಿಗಣತಿ ಮಾಡಲು ಮುಂದಾಗಿದ್ದೀರಲ್ಲಾ?
ಇದರ ಅಗತ್ಯವೇನು? ನಾವು ಜಾತಿಗಣತಿ ಮಾಡುತ್ತಿಲ್ಲ. ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸುತ್ತಿದ್ದೇವೆ. ಅದರಲ್ಲಿರುವ 54 ಕಲಂಗಳಲ್ಲಿ ಜಾತಿ ಕೂಡ ಒಂದು ಕಲಂ ಅಷ್ಟೇ. ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿ ಅರಿತು ಸಾಮಾಜಿಕ ನ್ಯಾಯ ಒದಗಿಸಲು ಇದು ಅಗತ್ಯ.
ಈ ಸಮೀಕ್ಷೆಗೆ ತಗಲುವ ವೆಚ್ಚವೆಷ್ಟು? ಅದಕ್ಕೆ ಅಂಗೀಕಾರ ದೊರೆತಿದೆಯೇ? 624 ಕೋಟಿ ರು. ವೆಚ್ಚದಲ್ಲಿ ಸಮೀಕ್ಷೆ ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿದೆ. 1.65 ಲಕ್ಷ ಸಿಬ್ಬಂದಿ ಸಮೀಕ್ಷೆಯಲ್ಲಿ ಕೆಲಸ ಮಾಡಲಿದ್ದಾರೆ. ಅವರ ವೇತನಕ್ಕಾಗಿಯೇ ಬಹುತೇಕ ಹಣ ವೆಚ್ಚವಾಗುತ್ತದೆ. ಜತೆಗೆ ಡಿಜಿಟಲ್ ಸಮೀಕ್ಷೆಗೆ ಮುಂದಾಗಿದ್ದು, ಮತದಾರರ ಪಟ್ಟಿಯನ್ನು ಬಳಸಿಕೊಂಡು ಸಮೀಕ್ಷೆ ನಡೆಸಲು ಸಂಪುಟ ಅಂಗೀಕಾರ ನೀಡಿದೆ.
ಸಮೀಕ್ಷೆಗೆ ಏನೆಲ್ಲಾ ಸಿದ್ಧತೆ ಪೂರ್ಣಗೊಂಡಿದೆ? ಸೆ.22 ರಿಂದ ಅಕ್ಟೋಬರ್ 6 ರವರೆಗೆ ಸಮೀಕ್ಷೆ ನಡೆಯಲಿದೆ. ರಜಾ ದಿನಗಳಲ್ಲೇ ಶಿಕ್ಷಕರು, ಅಂಗನವಾಡಿ ಶಿಕ್ಷಕರು, ಕಂದಾಯ ಇಲಾಖೆ ಅಧಿಕಾರಿಗಳನ್ನು ಬಳಸಿಕೊಂಡು ಸಮೀಕ್ಷೆ ನಡೆಸಲಾಗುವುದು. ಪ್ರಾಮಾಣಿಕ, ಪಾರದರ್ಶಕವಾಗಿ ಸಮೀಕ್ಷೆ ನಡೆಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದೇವೆ.
ಎಸ್ಸಿ ಸಮಗ್ರ ಸಮೀಕ್ಷೆಯಲ್ಲಿ ಬಹುತೇಕ ಮನೆಗಳಿಗೆ ಗಣತಿದಾರರು ಹೋಗೇ ಇರಲಿಲ್ಲ. ಈ ಬಗ್ಗೆ ಎಚ್ಚರ ವಹಿಸಿದ್ದೀರಾ?
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಆ ಸಮಸ್ಯೆ ಬರುವುದಿಲ್ಲ. ನಮ್ಮ ಸಮೀಕ್ಷೆಯಲ್ಲಿ 7 ಕೋಟಿ ಜನಸಂಖ್ಯೆಯೂ ಭಾಗವಹಿಸಲಿದೆ. ಹೀಗಾಗಿ ತಂತ್ರಜ್ಞಾನ ಬಳಸಿಕೊಂಡು ಅಚ್ಚುಕಟ್ಟಾಗಿ ಮಾಡುತ್ತೇವೆ. ಸಮೀಕ್ಷೆಗೆ ಒಳಪಡದಿದ್ದವರನ್ನು ಒಳಪಡಿಸಲು ಪ್ರತ್ಯೇಕ ಶಿಬಿರ ನಡೆಸುತ್ತೇವೆ. ಇದನ್ನು ಯಶಸ್ವಿಗೊಳಿಸಲು ಪ್ರಚಾರ ಅಭಿಯಾನವನ್ನೂ ನಡೆಸುತ್ತೇವೆ.
ಕಾಂತರಾಜು ಆಯೋಗದ ವರದಿಗೆ 168 ಕೋಟಿ ರು., ಎಸ್ಸಿ ಸಮಗ್ರ ಸಮೀಕ್ಷೆಗೆ 115 ಕೋಟಿ ರು., ಈಗ 624 ಕೋಟಿ ರು. ಗಣತಿ ಸಮೀಕ್ಷೆಗೆ ಇಷ್ಟೆಲ್ಲಾ ಸಾರ್ವಜನಿಕರ ಹಣ ವೆಚ್ಚ ಅಗತ್ಯವಿದೆಯೇ? ಸಮೀಕ್ಷೆ ಮಾಡಲೇಬೇಕು. ಇಲ್ಲದಿದ್ದರೆ ಯಾವ ಸರ್ಕಾರದ ಬಳಿ ಸಾಮಾಜಿಕ ಮತ್ತು ಶೈಕ್ಷಣಿಕ ಅಂಕಿ-ಅಂಶ ಇದೆ? ಹಿಂದೆ ಈ ರೀತಿಯ ಸಮೀಕ್ಷೆ ಆಧಾರದ ಮೇಲೆಯೇ ಎಸ್ಸಿ-ಎಸ್ಟಿಗೆ ಶೇ.24.1ರಷ್ಟು ಹಣ ಬಜೆಟ್‌ನಲ್ಲಿ ಮೀಸಲಿಡಲು ಅವಕಾಶವಾಯಿತು. ಈ ರೀತಿ ಅಂಕಿ-ಅಂಶ ಸಿಗುವುದರಿಂದ ಅಭಿವೃದ್ಧಿಗೆ ಪೂರಕ.
ಕೇಂದ್ರ ಸರ್ಕಾರವೇ 2027ರಲ್ಲಿ ಜಾತಿಗಣತಿ ಮಾಡುವುದಾಗಿ ಹೇಳಿದೆ. ಆ ವರದಿ ಮೇಲೆ ಎಲ್ಲವೂ ಪರಿಷ್ಕರಣೆಯಾಗಲಿದೆಯಲ್ಲಾ?
ಇಲ್ಲ ಕೇಂದ್ರ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿಲ್ಲ. ಕೇವಲ ಜಾತಿಗಣತಿ ಮಾತ್ರ ನಡೆಸುತ್ತಿದೆ. ಈಗಲೂ ಕೇಂದ್ರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಿ ಎಂದೇ ಒತ್ತಾಯಿಸುತ್ತಿದ್ದೇನೆ.
ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿ ಆಧಾರದ ಮೇಲೆ ಏನು ಕ್ರಮ ಆಗಲಿದೆ?
ತುಳಿತಕ್ಕೆ ಒಳಗಾದ ಹಾಗೂ ತಳಮಟ್ಟದ ಸಮುದಾಯದವರಿಗೆ ನ್ಯಾಯ ಒದಗಿಸಲು ಹಾಗೂ ಉತ್ತಮ ಯೋಜನೆ ಕೊಡಲು ಇದು ನೆರವಾಗಲಿದೆ. ಅಂಕಿ-ಅಂಶಗಳ ಆಧಾರದ ಮೇಲೆ ಸರ್ಕಾರ ಮುಂದೆ ಕಾರ್ಯಕ್ರಮ, ಅನುದಾನ ಮೀಸಲು ಇಡಲಿದೆ. ಈ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ.
ಕನ್ನಡ ಮತ್ತು ಸಂಸ್ಕೃತಿ, ಒಬಿಸಿ ಕಲ್ಯಾಣ ಸಚಿವರಾಗಿ ಎರಡು ವರ್ಷಗಳ ಸಾಧನೆಯೇನು?
ಒಬಿಸಿ ಕಲ್ಯಾಣ ಇಲಾಖೆಯಲ್ಲಿ ಎರಡು ವರ್ಷದಲ್ಲಿ 158 ಹಾಸ್ಟೆಲ್ ಮಾಡಿದ್ದೇನೆ. ಆಹಾರ ಗುಣಮಟ್ಟ ಉತ್ತಮಗೊಳಿಸುವುದು, ವಿದ್ಯಾರ್ಥಿನಿಲಯ ದುರಸ್ತಿ, ವಿದ್ಯಾಸಿರಿ ಸಹಾಯಧನ ಹೆಚ್ಚಳ, ಪ್ರತಿ ವರ್ಷ 35 ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದೇವೆ. ಇತ್ತೀಚೆಗೆ 15,000 ಹಾಸಿಗೆ, 2ಟೈಯರ್ ಮಂಚ ಖರೀದಿಗೆ ಒಪ್ಪಿಗೆ ನೀಡಿದ್ದೇವೆ. ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ. ಗಂಗಾಕಲ್ಯಾಣ ಯೋಜನೆಯಡಿ ಹಿಂದಿನ ಸರ್ಕಾರ 15,000 ಕ್ಕಿಂತಲೂ ಹೆಚ್ಚು ಬೋರ್‌ವೆಲ್ ಬಾಕಿ ಉಳಿಸಿತ್ತು. ಅದನ್ನು ಕೊರೆಸುವ ಜತೆಗೆ ಹೊಸದಾಗಿ 12,000 ಕೊರೆಸಲು ಅನುಮತಿ ನೀಡಿದ್ದೇವೆ. ಜತೆಗೆ ಮೊದಲ ಬಾರಿಗೆ ಬೋರ್‌ವೆಲ್ ಕೊರೆಸುವ ಜತೆಗೆ ಪಂಪ್‌ಸೆಟ್, ಮೋಟಾರು ಅಳವಡಿಕೆಯನ್ನೂ ಮಾಡುತ್ತಿದ್ದೇವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಾಧನೆಯೇನು? ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಆಗಿದ್ದರಿಂದ ವರ್ಷವಿಡೀ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯದಡಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಚರಿಸಲಾಯಿತು. ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಕನ್ನಡ ಧ್ವಜಾರೋಹಣ ನಡೆಸಿ ಕನ್ನಡ ಮನಸ್ಸುಗಳ ಹಬ್ಬವಾಗಿ ಆಚರಿಸಲಾಯಿತು. ಭುವನೇಶ್ವರಿ ಪ್ರತಿಮೆ ಮಾಡಿ ಇಡೀ ಕನ್ನಡಿಗರಿಗೆ ಗೌರವ ತಂದಿದ್ದೇವೆ.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ. ರಿಜಿಸ್ಟ್ರಾರ್‌ಗಳೇ ಇಲ್ಲ ಎಂಬ ಆರೋಪವಿದೆ?
ಹೌದು. ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ.
ಅಕಾಡೆಮಿಗಳಿಗೆ ಅನುದಾನ ಕೊರತೆಯಿದೆ ಎಂಬ ಆರೋಪವೂ ಇದೆಯಲ್ಲ? ಬಿಜೆಪಿ ಅವಧಿಯಲ್ಲಿ ಅಕಾಡೆಮಿಗಳ ಅನುದಾನ ಕಡಿತಗೊಳಿಸಿದ್ದರು. ಅದನ್ನು ಮತ್ತೆ ಹೆಚ್ಚಿಸಲು ತೀರ್ಮಾನಿಸಿದ್ದೇವೆ. ಆದರೂ ಅನುದಾನ ಸಾಲದು ಎಂಬ ಮಾತು ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನ ಹರಿಸುತ್ತೇವೆ.
ಕನ್ನಡ ಸಾಹಿತ್ಯ ಪರಿಷತ್ ವಿವಾದವೇನು? ಹಣ ದುರ್ಬಳಕೆ ಹಾಗೂ ಅಧಿಕಾರ ದುರುಪಯೋಗ ಆರೋಪ ಇದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ.