ಸಾರಾಂಶ
ನಮ್ಮ ಫಾರೆಸ್ಟ್ ಏರಿಯಾ ಬಾಲ್ಡ್‌ಹೆಡ್ ಇದ್ದಹಂಗೆ. ರಸ್ತೆ ಇಕ್ಕೆಲದಾಗ ಹಚ್ಚ ಹಸಿರು, ಒಳಗ ಹೊಕ್ಕು ನೋಡಿದ್ರ ಖಾಲಿ. ಥೇಟ್ ನಮ್ಮ ಬೊಕ್ಕತಲೆ ಇದ್ಹಂಗೆ, ಸುತ್ತೆಲ್ಲ ಕೂದಲು, ನಡನೆತ್ತಿ ಭಣಭಣ!
ಈ ರೀತಿ ಬೊಕ್ಕತಲೆಗೆ ಹೋಲಿಕೆ ಮಾಡಿ ನಮ್ಮ ಅರಣ್ಯನಾಶವನ್ನು ಹೇಳಿದವರು ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆಜೀ. ಕಲಬುರಗಿಯಲ್ಲಿ ನಡೆದ ರಾಜ್ಯಮಟ್ಟದ ವನ ಮಹೋತ್ಸವದಲ್ಲಿ ಮಾತನಾಡುತ್ತಾ ಅರಣ್ಯ ನಾಶದ ಕರಾಳ ಮುಖ ತೆರೆದಿಟ್ರು ಖರ್ಗೆ. ನಿಸರ್ಗ ಕಾಪಾಡದಿದ್ರೆ ಉಳಿಗಾಲವಿಲ್ಲ, ಹಸಿರೇ ಉಸಿರು ಅಂತ ಹೇಳ್ತಾ... ನಾವು ವೆಹಿಕಲ್‌ನಾಗ ಕುಂತು ರಸ್ತೆಗುಂಟ ಹೊಂಟಾಗ ನಾಲ್ಕು ಹಸಿರು ಮರ ಕಾಣ್ತಿದ್ಹಂಗೇ ಭಾರಿ ಅರಣ್ಯ ಅಂತೀವಿ, ಒಳಗ ಹೆಜ್ಜಿ ಇಟ್ರ ಭಣಭಣ, ಸುತ್ತಮುತ್ತ ಕೂದಲರಾಶಿ ನಡನೆತ್ತಿ ಥಳ ಥಳ, ಥೇಟ್ ಬೊಕ್ಕ ತಲೆಯವರಂಗೇ ನಮ್ಮ ಫಾರೆಸ್ಟ್ ಏರಿಯಾ ಆದ್ರೆ ಮುಂದೇನ್ ಗತಿ ಎಂದರು.
ರಾಷ್ಟ್ರೀಯ ಸರಾಸರಿಯಂತೆ ಶೇ.33ರಷ್ಟು ಅರಣ್ಯ ಇರಬೇಕಂತ ಇದ್ರೂ ಕರ್ನಾಟಕದಾಗ ಶೇ.21, ಕಲಬುರಗಿ ಸೇರಿದ್ಹಂಗ ಕಲ್ಯಾಣದ 7 ಜಿಲ್ಲೆಯೊಳ್ಗ ಶೇ.5, ಇನ್ನ ನಮ್ಮ ಕಲಬುರಗ್ಯಾಗ ಈ ಅಕಡಾ (ಅಂಕಿ) ಶೇ.2 ದಾಟಿಲ್ಲಂತ ತಲೆ ಮೇಲೆ ಕೈಯಾಡಿಸಿಕೊಂಡರು. ಕಾರ್ಯಕ್ರಮ ಮುಗಿದ ನಂತರ ವೇದಿಕೆ ಮುಂಭಾಗದಲ್ಲೇ ಹುಲಿ, ಸಿಂಹಗಳಿರೋ ಸೆಲ್ಫಿ ಪಾಯಿಂಟ್ ಮುಂದೆ ಶಾಸಕರು, ಸಂಸದರು, ಸಚಿವರಾದಿ ಎಲ್ರೊಂದಿಗೆ ಫೋಟೋ ಪೋಸ್ ನೀಡಿ ಹೊಂಟೇ ಬಿಟ್ರೆನ್ನಿ.
‘ಐ ಲವ್ ಯು ಪ್ರಿಯಾಂಕ್- ಯು ಮಸ್ಟ್ ಲವ್ ಮಿ’
ಇದು ಯಾರೋ ಹೇಳಿದ ಮಾತಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರಿಕಾಗೋಷ್ಠಿಯಲ್ಲಿ ಬಂಡವಾಳ ಹೂಡಿಕೆ ಕುರಿತಂತೆ ಅಮೆರಿಕದ ವಿವಿಧ ನಗರಗಳಲ್ಲಿ ನಡೆದ ರೋಡ್ ಶೋ ಕುರಿತಂತೆ ವಿವರಿಸಿದ ನಂತರ ಎಂದಿನಂತೆ ಪತ್ರಕರ್ತರು ರಾಜಕೀಯ ಪ್ರಶ್ನೆ ಕೇಳತೊಡಗಿದರು. ಏನ್ ಸರ್ ಬಿಜೆಪಿಯವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗಿಂತ ನಿಮ್ಮನ್ನೇ ಬಹಳ ಟೀಕೆ ಮಾಡ್ತಿದ್ದಾರೆ. ಮರಿ ಖರ್ಗೆ, ಪುಟಾಣಿ ಖರ್ಗೆ, ಅಪ್ಪನ ಹೆಸರಲ್ಲಿ ಮೇಲೆ ಬಂದವರು ಅನ್ನುವಂತಹ ಹೇಳಿಕೆಗಳನ್ನೆಲ್ಲಾ ನೀಡಿ ನಿಮ್ಮನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ ಅಂದಾಗ,
ನಾನೇನ್ ಮಾಡ್ಲಿ ಹೇಳಿ. ಈ ಬಿಜೆಪಿಯ ಅಶೋಕಣ್ಣ, ಛಲವಾದಿ ನಾರಾಯಣಸ್ವಾಮಿ, ಪ್ರತಾಪ್ ಸಿಂಹ, ಪಿ.ರಾಜೀವ್ ಸೇರಿದಂತೆ ಇನ್ನು ಕೆಲವರಿಗೆ ನನ್ನ ಮೇಲೆ ತುಂಬಾ ಪ್ರೀತಿ ಜಾಸ್ತಿ. ಆದ್ರೆ ನನಗೆ ಅವರ ಮೇಲೆ ಏನೂ ಇಲ್ಲ. ಆದ್ರೂ ಈ ಉಪೇಂದ್ರ ಸಿನೆಮಾ ತರ ‘ಐ ಲವ್ ಯು, ಯು ಮಸ್ಟ್ ಲವ್ ಮಿ’ ಅಂತಿದ್ದಾರೆ. ಹಿಂಗಾಗಿದೆ ನನ್ ಕತೆ. ಈ ಬಿಜೆಪಿಯವರಿಗೆ ನನ್ನ ಹೆಸರು ಹೇಳದೆ ಇದ್ರೆ ಆಗೋದೇ ಇಲ್ಲ. ಕಂಪನಿಗಳು ತಮ್ಮ ಪ್ರಾಡಕ್ಟ್ ವಾಲ್ಯೂ ಕಡಿಮೆ ಆದಾಗ ಪ್ರಚಾರಕ್ಕೆ ಹೀರೋಗಳಿಂದ ಜಾಹೀರಾತು ಮಾಡಿಸ್ತಾರಲ್ಲ ಹಂಗೆ ಬಿಜೆಪಿಯಲ್ಲಿ ಬೆಲೆ ಕಡಿಮೆ ಆಗಿರುವ ಕೆಲವು ಕಳಪೆ ಪ್ರಾಡಕ್ಟ್ ಗಳ ಪ್ರಚಾರಕ್ಕೆ ಈ ಖರ್ಗೆ ಬೇಕಾಗಿದೆ. ಅವರ ಪಾಲಿಗೆ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್ ಎಲ್ಲಾ ನಾನೆ ನೋಡಿ ಅಂದ್ರು... ಪ್ರಿಯಾಂಕ್ ಖರ್ಗೆ ಅವರ ಮಾತು ಕೇಳಿ ನಗುವ ಸರದಿ ಮಾಧ್ಯಮ ಮಂದಿಯದ್ದಾಗಿತ್ತು.
ಬೀದಿ ನಾಯಿಗಳಿಗೆ ಚಿಕನ್ ರೈಸ್‌ನಲ್ಲೂ ರಾಜಕೀಯ!!
ಬೀದಿ ನಾಯಿಗಳಿಗೆ ‘ಚಿಕನ್ ರೈಸ್’ ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಮತ್ತು ಕೊಳಗೇರಿ ಶ್ವಾನ ಪ್ರೇಮಿಗಳ ನಡುವಿನ ಕಿತ್ತಾಟ ಈಗ ತಾರಕಕ್ಕೇರಿದೆ. ಇಷ್ಟಕ್ಕೆಲ್ಲಾ ಕಾರಣ ನಮ್ಮ ಬಿಬಿಎಂಪಿ ಪ್ರತಿ ದಿನ ಸುಮಾರು ಐದು ಸಾವಿರ ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವುದಾಗಿ ಪ್ರಕಟಿಸಿರುವುದು. ಚಿಕನ್ ರೈಸ್ ಕೊಡುವುದಕ್ಕೆ ಒಂದು ಕಡೆ ಕಿತ್ತಾಟದ ಜೊತೆಗೆ ಇದರಲ್ಲೂ ರಾಜಕೀಯ ಅಡಗಿದೆಯಂತೆ!
ವಿಷಯ ಏನಪ್ಪಾ ಅಂದರೆ, ಬೆಂಗಳೂರಿನಲ್ಲಿ 2.79 ಲಕ್ಷ ಬೀದಿ ನಾಯಿಗಳಿವೆ. ಈ ಪೈಕಿ ಬಿಬಿಎಂಪಿ ಕೇವಲ 5 ಸಾವಿರ ಬೀದಿ ನಾಯಿಗಳಿಗೆ ಮಾತ್ರ ಚಿಕನ್ ರೈಸ್ ನೀಡಲು ಯೋಜನೆ ರೂಪಿಸಿದೆ. ಹಾಗಾದರೆ ಉಳಿದ ಅನಾಥ ಬೀದಿ ನಾಯಿಗಳಿಗೆ ಚಿಕನ್ ರೈಸ್‌ನಿಂದ ವಂಚನೆ, ತಾರತಮ್ಯ ಮಾಡುವುದೇ ಯಾಕೆ, ಸಮಾನತೆ, ಸಮಬಾಳು ಎಂಬ ಮಾತು ಬೀದಿ ನಾಯಿಗಳಿಗೆ ಅನ್ವಯವಾಗುವುದಿಲ್ಲವೇ. ಯಾವ ಮಾನದಂಡದಡಿ ಐದು ಸಾವಿರ ಬೀದಿ ನಾಯಿಗಳನ್ನು ಆಯ್ಕೆ ಮಾಡಿ ಚಿಕನ್ ರೈಸ್ ನೀಡಲಿದೆ ಎಂದು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಪ್ರಶ್ನೆಗಳಿಗೆ ಉತ್ತರ ಯಾರು ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ಮತ್ತೊಂದು ವಿಶೇಷವೆಂದರೆ ನಗರದ ಪ್ರತಿಷ್ಠಿತ ಬಡಾವಣೆಗಳಾದ ಸದಾಶಿವನಗರ, ಆರ್‌ಎಂವಿ ಡಾಲರ್ಸ್ ಕಾಲೋನಿ, ಎಚ್‌ಆರ್‌ಬಿಆರ್, ಎಚ್‌ಎಸ್‌ಆರ್, ಕುಮಾರ ಪಾರ್ಕ್‌ನಲ್ಲಿರುವ ಬೀದಿ ನಾಯಿಗಳಿಗೆ ಮಾತ್ರ ಚಿಕನ್ ರೈಸ್ ಭಾಗ್ಯ ನೀಡಲು ರಾಜಕೀಯ ಪ್ರಭಾವ ಬೀರಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಈ ಮಾತು ಕೇಳಿ ಬರುತ್ತಿದ್ದಂತೆ ಕೊಳಗೇರಿಯ ಶ್ವಾನ ಪ್ರಿಯರು ಆಕ್ರೋಶಗೊಂಡಿದ್ದಾರೆ, ತಮ್ಮ ಬಡಾವಣೆಯ ಬೀದಿ ನಾಯಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಇಷ್ಟು ದಿನ ಕಷ್ಟಪಟ್ಟ ಕೊಳಗೇರಿಯ ಬೀದಿ ನಾಯಿಗಳಿಗೆ ಮುಂದಿನ ದಿನಗಳಲ್ಲಾದರೂ ಚಿಕನ್ ರೈಸ್ ಭಾಗ್ಯ ಸಿಗಬೇಕು. ಈ ವಿಚಾರದಲ್ಲಿ ಕಿಂಚಿತ್ತೂ ತಾರತಮ್ಯವಾಗಬಾರದು. ಚಿಕನ್ ರೈಸ್ ವಿತರಣೆ ವೇಳೆ ಕೊಳಗೇರಿ ನಾಯಿಗಳಿಗೆ ಮೊದಲ ಆದ್ಯತೆ ನೀಡಬೇಕು. ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಅದಕ್ಕಾಗಿ ಆಯ್ಕೆ ಸಮಿತಿ ರಚಿಸಬೇಕು. ನಗರದ ಎಲ್ಲ ಬೀದಿ ನಾಯಿಗಳಿಗೆ ಚಿಕನ್ ರೈಸ್ ಯೋಜನೆ ವಿಸ್ತರಣೆ ಮಾಡಬೇಕೆಂಬ ಬೇಡಿಕೆ ಮನವಿಯನ್ನು ಬಿಬಿಎಂಪಿಗೆ ಸಲ್ಲಿಸುವುದಕ್ಕೆ ನಿರ್ಧರಿಸಲಾಗಿದೆ. ಬಿಬಿಎಂಪಿ ಸ್ಪಂದಿಸದಿದ್ದರೆ ಸಂಘಟನೆ ಕಟ್ಟಿಕೊಂಡು ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ನಡೆಸುವುದಕ್ಕೆ ತೀರ್ಮಾನಿಸಿದ್ದಾರಂತೆ. ---
-ಶೇಷಮೂರ್ತಿ ಅವಧಾನಿ
-ಲಿಂಗರಾಜು ಕೋರಾ
-ವಿಶ್ವನಾಥ್ ಮಲೆಬೆನ್ನೂರು