ಸಾರಾಂಶ
ಯಮೆನ್ ದೇಶದಲ್ಲಿ ಕೇರಳ ಮೂಲದ ನಿಮಿಷ ಎಂಬ ನರ್ಸ್‌ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಅಲ್ಲಿನ ಸರ್ಕಾರ ಹಾಗೂ ಸಂತ್ರಸ್ಥ ಕುಟುಂಬದೊಂದಿಗೆ ಮಾತನಾಡಿ ಮುಂದೂಡುವ ಮೂಲಕ ಹೊಸ ಆಸೆ ಚಿಗುರುವಂತೆ ಮಾಡಿದ ಡಾ.ಮೌಲಾ ಷರೀಫ್ ಅವರ ಕಾರ್ಯ ಶ್ಲಾಘನೀಯ
ತುಮಕೂರು : ಯಮೆನ್ ದೇಶದಲ್ಲಿ ಕೇರಳ ಮೂಲದ ನಿಮಿಷ ಎಂಬ ನರ್ಸ್‌ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಅಲ್ಲಿನ ಸರ್ಕಾರ ಹಾಗೂ ಸಂತ್ರಸ್ಥ ಕುಟುಂಬದೊಂದಿಗೆ ಮಾತನಾಡಿ ಮುಂದೂಡುವ ಮೂಲಕ ಹೊಸ ಆಸೆ ಚಿಗುರುವಂತೆ ಮಾಡಿದ ಡಾ.ಮೌಲಾ ಷರೀಫ್ ಅವರ ಕಾರ್ಯ ಶ್ಲಾಘನೀಯವಾದುದ್ದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಬಣ್ಣಿಸಿದ್ದಾರೆ.
ತಮ್ಮ 63ನೇ ಹುಟ್ಟು ಹಬ್ಬದ ಅಂಗವಾಗಿ ಸಿದ್ಧಗಂಗಾ ಮಠದಲ್ಲಿ ಗುರುವಾರ ನಡೆದ ಸಭೆಯಲ್ಲಿ ಷರೀಫ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಡಾ.ಷರೀಫ್ ಅವರು ಹಿಂದೂಸ್ತಾನ್ ಗೋಲ್ಡ್ ಕಂಪನಿಯ ಮಾಲೀಕರು. ಯಮೆನ್ ದೇಶದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ನಿಮಿಷ ಎಂಬ ನರ್ಸ್ ಅವರ ಗಲ್ಲು ಶಿಕ್ಷೆ ರದ್ದು ಪಡಿಸಲು ಕೇಂದ್ರ ಸರ್ಕಾರ ಸೇರಿ ಹಲವಾರು ಸಂಘ ಸಂಸ್ಥೆಗಳು ಮನವಿ ಮಾಡಿದ್ದವು. ಆದರೆ ಡಾ.ಷರೀಫ್ ಅವರು ಖುದ್ದು ಯಮೆನ್ ದೇಶದಲ್ಲಿ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ, ಅವರು ಪ್ರಕರಣವನ್ನು ಕ್ಷಮಿಸುವಂತೆ ಮನವೊಲಿಸಿದ್ದಾರೆ. ಇದರಿಂದಾಗಿ ಅವರ ಮರಣದಂಡನೆ ಮುಂದೂಡಲಾಗಿದೆ. ಇದು ಎರಡು ದೇಶಗಳ ನಡುವಿನ ಬಾಂಧವ್ಯನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ನುಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಮೌಲಾ ಷರೀಫ್, ‘ಕಲಿಯುಗದ ನಿಜವಾದ ಸ್ವರ್ಗ ಎಂದರೆ ಅದು ಸಿದ್ದಗಂಗಾ ಮಠ. ನನ್ನೆಲ್ಲಾ ಸಮಾಜ ಸೇವೆಗೆ ಸಿದ್ಧಗಂಗಾ ಮಠವೇ ಮೂಲ ಕಾರಣ’ ಎಂದು ಹೇಳಿದರು.