ಸಾರಾಂಶ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 1’ ಚಿತ್ರದ ಟ್ರೇಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಐದು ಭಾಷೆಗಳಲ್ಲಿ 2.18 ಕೋಟಿ ವೀಕ್ಷಣೆ ಕಾಣುವ ಮೂಲಕ ದಾಖಲೆ ಮಾಡಿದೆ.
ಬೆಂಗಳೂರು : ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 1’ ಚಿತ್ರದ ಟ್ರೇಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಐದು ಭಾಷೆಗಳಲ್ಲಿ 2.18 ಕೋಟಿ ವೀಕ್ಷಣೆ ಕಾಣುವ ಮೂಲಕ ದಾಖಲೆ ಮಾಡಿದೆ.
ಸೋಮವಾರ ಮಧ್ಯಾಹ್ನ 12.45ಕ್ಕೆ ಹೊಂಬಾಳೆ ಫಿಲಂಮ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಟ್ರೇಲರ್ ಬಿಡುಗಡೆ ಆಗಿದ್ದು, ರಾತ್ರಿ 9.44ರ ಹೊತ್ತಿಗೆ ಕನ್ನಡ 44 ಲಕ್ಷ, ಹಿಂದಿ 1.2 ಕೋಟಿ, ತೆಲುಗು 34 ಲಕ್ಷ, ತಮಿಳು 14 ಲಕ್ಷ ಹಾಗೂ ಮಲಯಾಳಂನಲ್ಲಿ 6.18ಲಕ್ಷ ವೀಕ್ಷಣೆ ಕಂಡು, ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಸೋಮವಾರ ಸಂಜೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ‘ಅ.2ರಂದು ಪ್ರಪಂಚದಾದ್ಯಂತ ‘ಕಾಂತಾರ 1’ ತೆರೆಗೆ ಬರುತ್ತಿದ್ದು, ಭಾರತದಲ್ಲೇ ಐದು ಭಾಷೆಗಳಲ್ಲಿ 7 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣಲು ಸಜ್ಜಾಗಿದೆ. ಬೇರೆ ದೇಶಗಳಲ್ಲೂ ದೊಡ್ಡಮಟ್ಟದಲ್ಲಿ ಬಿಡುಗಡೆ ಆಗಲಿದ್ದು, ಅಲ್ಲಿ ಸ್ಕ್ರೀನ್‌ಗಳಿಗಿಂತ ಶೋಗಳ ಲೆಕ್ಕ ಬರುತ್ತದೆ. ವಿಶೇಷವೆಂದರೆ ಸ್ಪ್ಯಾನಿಷ್ ಭಾಷೆಗೆ ಡಬ್ ಆಗಿ ಮೆಕ್ಸಿಕೋ ಹಾಗೂ ದಕ್ಷಿಣ ಅಮೆರಿಕದಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ ‘ಕಾಂತಾರ 1’ ಚಿತ್ರ ಪಾತ್ರವಾಗುತ್ತಿದೆ’ ಎಂದು ಹೇಳಿದರು.
ರಿಷಬ್ ಶೆಟ್ಟಿ ಮಾತನಾಡಿ, ‘ಇದು ಕದಂಬರ ಕಾಲದ ಕತೆ. ಆದರೆ, ಕದಂಬರ ಕತೆಯಲ್ಲ. ಆ ಕಾಲಘಟ್ಟದಲ್ಲಿ ನಡೆಯುವ ಕತೆ. ಮುಖ್ಯವಾಗಿ ಜನಪದ ಕತೆ ಹಾಗೂ ವಿದ್ವಾಂಸರು, ಸಾಹಿತಿಗಳು, ಸಂಶೋಧಕರು ಕೊಟ್ಟ ಮಾಹಿತಿಗಳನ್ನು ಆಧರಿಸಿ ಈ ಚಿತ್ರಕ್ಕೆ ಕತೆ ಬರೆಯಲಾಗಿದೆ. ತುಳುನಾಡಿನ ಮೂಲ ಪುರುಷರಾದ ಬೆರ್ಮೆರ್ ಹಾಗೂ ಪರುಶುರಾಮನ ಪ್ರಸ್ತಾಪ ಇದ್ದೇ ಇರುತ್ತದೆ. ಇಲ್ಲಿ ಯಾರನ್ನೂ ಕಡಿಮೆ ಮಾಡಿಲ್ಲ. ನಮ್ಮ ಚಿತ್ರದ ಶೂಟಿಂಗ್ ಸಮಯದಲ್ಲಿ ಆದ ಸಾವುಗಳ ಬಗ್ಗೆ ನನಗೂ ದುಃಖ, ನೋವು ಇದೆ. ಹಾಗಂತ ನಾನು ಅದನ್ನು ಶೋ ಆಫ್ ಮಾಡಲಾರೆ. ಚಿತ್ರೀಕರಣ ಸಮಯದಲ್ಲಿ ನಾನೇ ಸತ್ತೇ ಹೋಗುತ್ತಿದ್ದೆ. ನಾಲ್ಕೈದು ಬಾರಿ ಸಾವಿನ ಬಾಗಿಲು ತಟ್ಟಿ, ನಿಮ್ಮ ಮುಂದೆ ನಿಂತಿದ್ದೇನೆ ಎಂದರೆ ಅದಕ್ಕೆ ಕಾರಣ ದೈವ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕಿ ರುಕ್ಮಿಣಿ ವಸಂತ್, ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ, ಚಿತ್ರದ ಕೋ ರೈಟರ್ಸ್ ರವಿಯಣ್ಣ, ಅನಿರುದ್ಧ್ ಮಹೇಶ್ ಸೇರಿ ಹಲವರು ಹಾಜರಿದ್ದರು.
ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ 1’ ಚಿತ್ರ ಹಾಗೂ ದೈವ ಶಕ್ತಿಗಳನ್ನು ಬಿಂಬಿಸುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುವ ಮೂಲಕ ಅಂಚೆ ಇಲಾಖೆ ಚಿತ್ರತಂಡದ ಜೊತೆಗೆ ವಿಶೇಷವಾಗಿ ಕೈ ಜೋಡಿಸಿ, ಚಿತ್ರತಂಡವನ್ನು ಬೆಂಬಲಿಸಿದೆ.
ಟಿಕೆಟ್ ಪ್ರೈಸ್ ವಿರುದ್ಧ ಕೋರ್ಟ್‌ಗೆ
ರಾಜ್ಯ ಸರ್ಕಾರದ 200 ರು. ಟಿಕೆಟ್ ಪ್ರೈಸ್ ಅದೇಶವನ್ನು ಪ್ರಶ್ನಿಸಿ ಹೊಂಬಾಳೆ ಫಿಲಮ್ಸ್ ಕೋರ್ಟ್‌ಗೆ ಹೋಗಿರುವ ವಿಚಾರವಾಗಿ ‘ಕಾಂತಾರ 1’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಕೇಳಿ ಬಂದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ನಿರ್ಮಾಪಕ ವಿಜಯ್ ಕಿರಗಂದೂರು ನಿರಾಕರಿಸಿದರು. ‘200 ರು. ಟಿಕೆಟ್ ಬೆಲೆ ನಿಗದಿ ಮಾಡಿರುವ ಸರ್ಕಾರದ ಅದೇಶವನ್ನು ಇಡೀ ಚಿತ್ರರಂಗ ಸ್ವಾಗತಿಸಿದೆ. ಪ್ರೇಕ್ಷಕರು ಕೂಡ ಒಪ್ಪಿಕೊಂಡಿದ್ದಾರೆ. ಆದರೆ, ನೀವು ಮಾತ್ರ ಈ ಅದೇಶ ಪ್ರಶ್ನಿಸಿ ಕೋರ್ಟ್‌ಗೆ ಹೋಗಿದ್ದು ಎಷ್ಟು ಸರಿ’ ಎನ್ನುವ ಪ್ರಶ್ನೆಗೆ ‘ನನಗೂ ಆ ಬಗ್ಗೆ ಮಾತನಾಡಬೇಕಿದೆ. ಆದರೆ, ಈಗ ಚಿತ್ರದ ಬಿಡುಗಡೆ ಪ್ರಚಾರ ನಡೆಯುತ್ತಿದೆ. ಹೀಗಾಗಿ ನಾನು ಕೋರ್ಟ್ ವಿಚಾರಕ್ಕೆ ಉತ್ತರಿಸಲು ಹೋಗಲ್ಲ’ ಎಂದು ವಿಜಯ್ ಕಿರಗಂದೂರು ಪ್ರತಿಕ್ರಿಯಿಸಿದರು.
ಫೋಟೋಸ್- ಬೆಂಗಳೂರು ಡೇಟ್ ಫೋಲ್ಡರ್ ಕಾಂತಾರ 1 ಹೆಸರಿನ ಫೋಲ್ಡರ್ ನಲ್ಲಿದೆ.