ಸಾರಾಂಶ
‘ಸು ಪ್ರಂ ಸೋ’ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಈ ಚಿತ್ರದ ನಿರ್ದೇಶಕ, ನಟ ಜೆಪಿ ತುಮಿನಾಡು ಬಾಲಿವುಡ್‌ನ ಸ್ಟಾರ್ ನಟ ಅಜಯ್ ದೇವಗನ್ ಅವರಿಗೆ ಹಾರರ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ, ಮುಂದಿನ ಪ್ರಾಜೆಕ್ಟ್ ಕುರಿತು ಜೆಪಿ ತುಮಿನಾಡು ಮಾತುಗಳು.
ಸಿನಿವಾರ್ತೆ
- ಇತ್ತೀಚೆಗೆ ‘ಸು ಫ್ರಮ್ ಸೋ’ ಸಿನಿಮಾದ ಪ್ರಚಾರಕ್ಕಾಗಿ ಹೈದರಾಬಾದಿನಲ್ಲಿದ್ದಾಗ ಅಜಯ್ ದೇವಗನ್ ಅವರ ಆಫೀಸಿನಿಂದ ಕರೆ ಬಂತು. ಅವರನ್ನು ಭೇಟಿಯಾಗಬಹುದಾ ಅಂತ. ಹೀಗೆ ಫಿಕ್ಸ್ ಆದ ಭೇಟಿಯಲ್ಲಿ ಅಜಯ್ ಅವರು ನಮ್ಮ ಸಿನಿಮಾದ ಬಗ್ಗೆ ಮೆಚ್ಚಿ ಮಾತನಾಡಿದರು. ಉತ್ತಮ ಮನರಂಜನೆ ಇತ್ತು. ಕೊನೆಯ ಅಂಶ ಮನಸ್ಸಿಗೆ ತಟ್ಟಿತು ಎಂದೆಲ್ಲ ಪ್ರಶಂಸೆ ಮಾಡಿದರು. ಮುಂದೆ ನೀವು ಸಿನಿಮಾ ಮಾಡೋದಿದ್ದರೆ ಹಿಂದಿಯಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡುವ ಪ್ಲಾನ್ ಮಾಡಿ. ಹಂಚಿಕೆಯ ವಿಚಾರದಲ್ಲಿ ನಾವು ನಿಮ್ಮ ಜೊತೆಗಿರುತ್ತೇವೆ ಎಂಬ ಭರವಸೆಯನ್ನೂ ನೀಡಿದ್ದಾರೆ. ಆದರೆ ಈಗ ಸೋಷಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂತೆ, ನನಗೆ ಸ್ಕ್ರಿಪ್ಟ್ ಮಾಡಿ, ಡೈರೆಕ್ಷನ್ ಮಾಡಿ ಅಂತೆಲ್ಲ ಅಜಯ್ ದೇವಗನ್ ಹೇಳಿಲ್ಲ.
- ‘ಸು ಫ್ರಮ್ ಸೋ’ ಸಿನಿಮಾದಲ್ಲಿನ ನನ್ನ ಪಾತ್ರವನ್ನು ನೋಡಿ ತೆಲುಗು, ಮಲಯಾಳಂ ಮೊದಲಾದ ಭಾಷೆಗಳಿಂದ ನಟನೆಗೆ ಆಫರ್‌ಗಳು ಬರುತ್ತಿವೆ. ನಟನೆಯೂ ನನ್ನ ಆಸಕ್ತಿಯೇ ಆಗಿರುವ ಕಾರಣ ಈ ಬಗ್ಗೆ ಸ್ವಲ್ಪ ದಿನದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ.
- ನನ್ನ ಮೊದಲ ಮರ್ಯಾದೆ ಸ್ಕ್ರಿಪ್ಟಿಗೇ. ಇಷ್ಟಾದರೂ ನನಗೊಂದು ಕನ್ನಡದಲ್ಲಿಯೇ ಸರಿಯಾದ ಸಿನಿಮಾ ಮಾಡಬೇಕು ಅಂತಿದೆ. ಚಿತ್ರರಂಗ ಏನನ್ನೋ ನಿರೀಕ್ಷಿಸುತ್ತಿದ್ದ ಸಮಯಕ್ಕೆ ಸರಿಯಾಗಿ ಬಂದ ಕಾರಣ ‘ಸು ಫ್ರಂ ಸೋ’ ಸಿನಿಮಾ ಕ್ಲಿಕ್ ಆಗಿರಬಹುದು. ಆದರೆ ನನಗೆ ನಿರ್ದೇಶಕನಾಗಿ ಇದರಲ್ಲಿರುವ ಸಮಸ್ಯೆಗಳೇನು ಅನ್ನೋದು ಗೊತ್ತಾಗಿದೆ. ಮುಂದಿನ ಸಿನಿಮಾದಲ್ಲಿ ಅದನ್ನು ಮೀರುತ್ತೇನೆ.
- ನನಗೆ ನನ್ನ ಸಿನಿಮಾವನ್ನು ಜಗತ್ತೇ ತಿರುಗಿ ನೋಡಬೇಕು ಅನ್ನೋದೆಲ್ಲ ಇಲ್ಲ. ನನ್ನ ಮನೆಯವರು, ನನ್ನೂರಿನ ಜನ ಥೇಟರಿನಲ್ಲಿ ಚಿತ್ರ ನೋಡಿ ಕೊನೆಯಲ್ಲಿ ಖುಷಿಯಲ್ಲಿ ಆಚೆ ಬರಬೇಕು. ಸಿನಿಮಾ ಬಲ್ಲವರ ಕೈಯಲ್ಲಿ ಹೊಗಳಿಸಿಕೊಳ್ಳುವ ಆಸೆ ನನಗಿಲ್ಲ. ಟೈಟಾನಿಕ್ ಸಿನಿಮಾವನ್ನೂ ಟೀಕಿಸುವವರಿದ್ದಾರೆ. ನನಗಿರುವುದು ನನ್ನೂರ ಜನ ಮೆಚ್ಚುವ ಸಿನಿಮಾ ಮಾಡಬೇಕು ಅನ್ನೋದಷ್ಟೇ.
- ನನ್ನ ಪ್ರಕಾರ ಸಿನಿಮಾ ಅಂದರೆ ಸಿನಿಮಾ ಅಷ್ಟೇ. ಸಿನಿಮಾವೇ ಭಾಷೆ. ಚೆನ್ನಾಗಿದ್ದರೆ ಅದು ಎಲ್ಲ ಭಾಷೆಯ ಚಿತ್ರರಂಗವನ್ನೂ ತಲುಪುತ್ತದೆ. ನನ್ನ ಮನಸ್ಸಿನಲ್ಲಿ ಸಾಕಷ್ಟು ಪಾತ್ರಗಳಿವೆ, ಅನುಭವಕ್ಕೆ ದಕ್ಕಿದ ನಾನು ಕಂಡ ಲೋಕದ ಕಥೆಗಳಿವೆ. ಅದನ್ನು ಹೇಳಬೇಕು ಎಂಬ ತುಡಿತ ಇದೆ.