ಸಾರಾಂಶ
ರಾಜ್ ಬಿ.ಶೆಟ್ಟಿ ನಿರ್ಮಾಣ, ಜೆ.ಪಿ.ತುಮಿನಾಡ್ ನಿರ್ದೇಶನದ ‘ಸು ಫ್ರಂ ಸೋ’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಕಮಾಲ್ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ ಬಿ.ಶೆಟ್ಟಿ ನಿರ್ಮಾಣ, ಜೆ.ಪಿ.ತುಮಿನಾಡ್ ನಿರ್ದೇಶನದ ‘ಸು ಫ್ರಂ ಸೋ’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಕಮಾಲ್ ಮಾಡುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿ ಸಿನಿಮಾ ರಿಲೀಸ್ ಆದ ಮೂರನೇ ದಿನಕ್ಕೆ ಬೆಂಗಳೂರು, ಮಂಗಳೂರು, ಮೈಸೂರು ಸೇರಿ ರಾಜ್ಯಾದ್ಯಂತ ಮುಂಜಾನೆ 6 ಗಂಟೆ ಶೋ ಇಡಲಾಗಿದೆ. ಹೀಗಾಗಿ 80 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಚಿತ್ರ, ಈಗ 120ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.ಸಾಮಾನ್ಯವಾಗಿ ಬಹು ಭಾಷಾ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾದ ಮೊದಲ ದಿನ ಮುಂಜಾನೆ 6 ಗಂಟೆಗೆ ಪ್ರದರ್ಶನಗೊಳ್ಳುವುದು ರೂಢಿ. ಆದರೆ ಹೊಸ ಕಲಾವಿದರ ಸಿನಿಮಾವಾಗಿ, ರಿಲೀಸ್ ಆದ ಮೂರನೇ ದಿನಕ್ಕೆ ವಿಪರೀತ ಬೇಡಿಕೆ ಗಿಟ್ಟಿಸಿಕೊಂಡು, ಮುಂಜಾನೆ 6ಕ್ಕೆ ಮೊದಲ ಶೋ ಪ್ರದರ್ಶಿಸುವ ಮೂಲಕ ‘ಸು ಫ್ರಂ ಸೋ’ ಚಿತ್ರ ಇತಿಹಾಸ ನಿರ್ಮಿಸುತ್ತಿದೆ.
ಮಾಮೂಲಿ ಸಿನಿಮಾ ಪ್ರಚಾರ ತಂತ್ರದಿಂದ ಹೊರಬಂದು ಸಿನಿಮಾ ಬಿಡುಗಡೆಗೆ ನಾಲ್ಕು ದಿನ ಮೊದಲೇ ಈ ಸಿನಿಮಾದ ನಿರ್ಮಾಪಕ ರಾಜ್ ಬಿ.ಶೆಟ್ಟಿ ರಾಜ್ಯದ ವಿವಿಧೆಡೆ ಪ್ರೀಮಿಯರ್ ಶೋ ಪ್ರದರ್ಶಿಸಿದ್ದರು. ಇದರಲ್ಲಿ ಪ್ರೇಕ್ಷಕರ ಸ್ಪಂದನೆಯನ್ನೇ ಪ್ರಚಾರಕ್ಕೆ ಬಳಸಿಕೊಳ್ಳಲಾಗಿತ್ತು. ಪರಿಣಾಮ ಬಿಡುಗಡೆಯಾದ ದಿನವೇ ಬಹುತೇಕ ಕಡೆ ಈ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿತು. ಗಂಟೆಗೆ ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾದವು.ಮರುದಿನ ಸಿನಿಮಾ ಸ್ಕ್ರೀನ್‌ಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಯಿತು. ಆದರೂ ಬಹಳ ಮಂದಿ ಟಿಕೆಟ್ ಸಿಗದೆ ಪರದಾಡಿದರು. ಹೀಗಾಗಿ ಸಿನಿಮಾ ರಿಲೀಸ್ ಆದ ಮೂರನೇ ದಿನಕ್ಕೆ ಚಿತ್ರತಂಡದ ಕೋರಿಕೆ ಮೇಲೆ ಚಿತ್ರಮಂದಿರಗಳು ರಾಜ್ಯಾದ್ಯಂತ ಮುಂಜಾನೆ 6 ಗಂಟೆಯ ಪ್ರದರ್ಶನ ಆಯೋಜಿಸಿವೆ. ಇದಕ್ಕೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೂಲಗಳ ಪ್ರಕಾರ ‘ಸು ಫ್ರಂ ಸೋ’ ಸಿನಿಮಾದ ಮೊದಲ ದಿನದ ಗಳಿಕೆ 1 ಕೋಟಿ ರು. ಮೀರಿರುವ ಸಾಧ್ಯತೆ ಇದೆ. ಮೊದಲ ದಿನ ಒಟ್ಟಾರೆ 1 ಲಕ್ಷಕ್ಕೂ ಅಧಿಕ ಮಂದಿ ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. 2025ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಅತೀ ಹೆಚ್ಚು ಜನ ವೀಕ್ಷಿಸಿದ ಚಿತ್ರವಾಗಿ ‘ಸು ಫ್ರಂ ಸೋ’ ಹೊರಹೊಮ್ಮಿದೆ.