ಕರ್ನಾಟಕ ಪ್ರಗತಿಯಿಂದ ದೇಶ ಉದ್ಧಾರ - ಕೇಂದ್ರ ಸರ್ಕಾರವು ರಾಜ್ಯದ ಬೆನ್ನಿಗೆ : ಕೇಂದ್ರ ಸಚಿವ ಪೀಯೂಷ್

| N/A | Published : Feb 13 2025, 10:38 AM IST

Piyush Goyal

ಸಾರಾಂಶ

ಕರ್ನಾಟಕ ಪ್ರಗತಿಯು ದೇಶದ ಪ್ರಗತಿಯಾಗಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯದ ಬೆನ್ನಿಗೆ ನಿಲ್ಲಲಿದೆ. ಕರ್ನಾಟಕವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಕೇಂದ್ರವನ್ನಾಗಿಸಲು ಎಲ್ಲ ನೆರವು ನೀಡಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ತಿಳಿಸಿದರು.

 ಬೆಂಗಳೂರು : ಕರ್ನಾಟಕ ಪ್ರಗತಿಯು ದೇಶದ ಪ್ರಗತಿಯಾಗಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯದ ಬೆನ್ನಿಗೆ ನಿಲ್ಲಲಿದೆ. ಕರ್ನಾಟಕವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಕೇಂದ್ರವನ್ನಾಗಿಸಲು ಎಲ್ಲ ನೆರವು ನೀಡಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ತಿಳಿಸಿದರು.

ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಇನ್ವೆಸ್ಟ್‌ ಕರ್ನಾಟಕದ ಮೊದಲ ದಿನವಾದ ಬುಧವಾರದಂದು ರಾಜ್ಯದ ಆರ್ಥಿಕತೆ ಮತ್ತು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಿದ 15 ಉದ್ಯಮಗಳಿಗೆ ಇನ್ವೆಸ್ಟ್ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

2047ರ ವೇಳೆಗೆ ಭಾರತದ ಆರ್ಥಿಕತೆಯ ಮೌಲ್ಯ 30 ಟ್ರಿಲಿಯನ್‌ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕು. ಅಲ್ಲದೆ, ಸದ್ಯ ಭಾರತವು ವಿಶ್ವದಲ್ಲಿ 5ನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ್ದು, 2027ರ ವೇಳೆಗೆ 3ನೇ ಸ್ಥಾನಕ್ಕೆ ತಲುಪಲಿದೆ. ಈ ವೇಳೆ ಭಾರತದ ಆರ್ಥಿಕತೆ 5 ಟ್ರಿಲಿಯನ್‌ ಡಾಲರ್‌ ಹೊಂದಲಿದೆ ಎಂದು ಹೇಳಿದರು.

ಭಾರತದ ರಫ್ತು ವಹಿವಾಟು ಪ್ರಮಾಣ 800 ಬಿಲಿಯನ್‌ ಡಾಲರ್‌ಗೆ ಮುಟ್ಟಿದೆ. ಅದರಲ್ಲಿ ಕರ್ನಾಟಕವು ಸಿಂಹಪಾಲನ್ನು ಹೊಂದಿದೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಡೀಪ್‌ ಟೆಕ್‌, ಫಿನ್‌ಟೆಕ್‌, ಫ್ಯೂಚರ್‌ ಇಂಡಸ್ಟ್ರಿಗಳ ಬೆಳವಣಿಗೆಗೆ ವಿಪುಲ ಅವಕಾಶವಿದೆ. ಈ ಕ್ಷೇತ್ರಗಳ ಬೆಳವಣಿಗೆಗೆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಹೀಗಾಗಿ ಕರ್ನಾಟಕವನ್ನು ಭವಿಷ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದ ಕೇಂದ್ರವನ್ನಾಗಿ ಮಾಡಲು ಎಲ್ಲ ನೆರವು ನೀಡಲಾಗುವುದು ಎಂದು ತಿಳಿಸಿದರು.

ಕರ್ನಾಟಕದ ಬೆಳವಣಿಗೆಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಕಳೆದ ವರ್ಷ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ₹11 ಲಕ್ಷ ಕೋಟಿ ವಿನಿಯೋಗಿಸಲಾಗಿದೆ. ಅದರ ಭಾಗವಾಗಿ ತುಮಕೂರಿನಲ್ಲಿ 8 ಸಾವಿರ ಎಕರೆ ವಿಸ್ತೀರ್ಣದಲ್ಲಿ ಪ್ಲಗ್‌ ಆ್ಯಂಡ್‌ ಪ್ಲೇ ಮಾದರಿಯಲ್ಲಿ ಕೈಗಾರಿಕಾ ಸ್ಮಾರ್ಟ್‌ ಸಿಟಿ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 1,736 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, 2026ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ. ಈ ರೀತಿ ಹಲವು ಯೋಜನೆಗಳನ್ನು ರಾಜ್ಯಕ್ಕೆ ನೀಡಲಾಗುತ್ತಿದೆ. ಅದರಿಂದ ಕರ್ನಾಟಕದ ಆರ್ಥಿಕತೆ ವೃದ್ಧಿಯಾಗಿ ದೇಶದ ಆರ್ಥಿಕತೆ ಹೆಚ್ಚಳಗೊಳ್ಳಲು ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಬಿಯಾಂಡ್ ಬೆಂಗಳೂರು ನಮ್ಮ ಗುರಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಬೆಂಗಳೂರಿನ ಬೆಳವಣಿಗೆಯಿಂದ ಜನಸಂಖ್ಯೆ 1.40 ಕೋಟಿಗೆ ತಲುಪಿದೆ. ಜತೆಗೆ ನಗರದಲ್ಲಿ 1 ಕೋಟಿಗೂ ಹೆಚ್ಚಿನ ವಾಹನಗಳಿವೆ. ಇದರಿಂದ ಸಂಚಾರ ದಟ್ಟಣೆಯಂತಹ ಸಮಸ್ಯೆ ಎದುರಿಸುವಂತಾಗಿದೆ. ಅದನ್ನು ನಿವಾರಿಸಲು ₹1 ಲಕ್ಷ ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ, ಮೇಲ್ಸೇತುವೆಗಳು, ಡಬ್ಬಲ್‌ ಡೆಕ್ಕರ್‌ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಅಲ್ಲದೆ, ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡುವುದು ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬಿಯಾಂಡ್‌ ಬೆಂಗಳೂರು ನಮ್ಮ ಗುರಿಯಾಗಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ನಗರಗಳಲ್ಲಿ ಹೂಡಿಕೆ ಆಕರ್ಷಿಸಲಾಗುತ್ತಿದೆ ಎಂದು ತಿಳಿಸಿದರು.

ಹೊಸ ಅಧ್ಯಾಯ ಆರಂಭ: ಎಂಬಿಪಾ

ಕೈಗಾರಿಕಾ ಸಚಿವೆ ಎಂ.ಬಿ. ಪಾಟೀಲ್‌ ಮಾತನಾಡಿ, ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಅಗತ್ಯವಿರುವ ಉದ್ಯಮ ಸ್ನೇಹಿ ನೀತಿಗಳನ್ನು ಜಾರಿಗೊಳಿಸಲಾಗಿದೆ. ಇದು ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಇನ್ವೆಸ್ಟ್‌ ಕರ್ನಾಟಕದ ಮೂಲಕ ರಾಜ್ಯ ಸುಸ್ಥಿರ ಅಭಿವೃದ್ಧಿಯತ್ತ ದಾಪುಗಾಲಿಟ್ಟುತ್ತಿದೆ. ಜತೆಗೆ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಕ್ಲೀನ್‌ ಮೊಬಿಲಿಟಿ, ಎಲೆಕ್ಟ್ರಿಕ್‌ ವಾಹನಗಳ ಕೇಂದ್ರವಾಗಿ ಕರ್ನಾಟಕ ರೂಪುಗೊಳ್ಳಲು ಇನ್ವೆಸ್ಟ್‌ ಕರ್ನಾಟಕ ಸಹಕಾರಿಯಾಗಿದೆ ಎಂದು ತಿಳಿಸಿದರು.

ಸಚಿವರಾದ ಕೆ.ಜೆ.ಜಾರ್ಜ್‌, ಡಾ। ಶರಣಪ್ರಕಾಶ್‌ ಪಾಟೀಲ್‌, ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್‌, ಎನ್.ಎಸ್‌.ಬೋಸರಾಜು, ಕಿಯೋನಿಕ್ಸ್ ಅಧ್ಯಕ್ಷ ಶರತ್‌ ಬಚ್ಚೇಗೌಡ, ಉದ್ಯಮಿ ನಿಖಿಲ್‌ ಕಾಮತ್‌ ಇದ್ದರು.

15 ಉದ್ಯಮಿಗಳಿಗೆ ಇನ್ವೆಸ್ಟ್

ಕರ್ನಾಟಕ ಪ್ರಶಸ್ತಿ ಪ್ರದಾನ

ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದವರಿಗೆ ಇನ್ವೆಸ್ಟ್‌ ಕರ್ನಾಟಕ ಹೆಸರಿನಲ್ಲಿ ವಿವಿಧ ವಿಭಾಗದಲ್ಲಿ ಪ್ರಶಸ್ತಿ ನೀಡಲಾಯಿತು. ಹಿರಿಯ ಉದ್ಯಮಿ ವಿಕ್ರಮ್‌ ಕಿರ್ಲೋಸ್ಕರ್‌ ಅವರಿಗೆ ಮರಣೋತ್ತರವಾಗಿ ‘ಇಂಡಸ್ಟ್ರಿಯಲ್‌ ಲೆಗೆಸಿ’ ಪ್ರಶಸ್ತಿ ನೀಡಲಾಯಿತು. ಅವರ ಪರವಾಗಿ ಉದ್ಯಮಿ ಗೀತಾಂಜಲಿ ಕಿರ್ಲೋಸ್ಕರ್‌ ಪ್ರಶಸ್ತಿ ಸ್ವೀಕರಿಸಿದರು.

ದಾಲ್‌ ಸ್ಟ್ರೀಲ್‌ ಸಮೂಹಕ್ಕೆ ದಶಮಾನದ ಹೂಡಿಕೆದಾರ, ಏಕಸ್‌ ಸಂಸ್ಥೆಗೆ ಕಾರ್ಯಪರಿಸರ ನಿರ್ಮಾತೃ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಳಿದಂತೆ, ಸನ್‌ರೈಸ್‌ ವಲಯದಲ್ಲಿ ಎಚ್‌ಎಎಲ್‌, ಆರ್‌ಟಿಎಕ್ಸ್‌, ಟೊಯೋಟಾ-ಕಿರ್ಲೋಸ್ಕರ್‌, ಬಯೋಕಾನ್‌, ಬೋಯಿಂಗ್‌, ಟೆಕ್ಸಾಸ್‌ ಇನ್ಸ್‌ಟ್ರುಮೆಂಟ್ಸ್‌, ಸ್ಯಾಮ್ಸಂಗ್‌, ಫಾಕ್ಸ್‌ಕಾನ್‌, ಟಾಟಾ ಎಲೆಕ್ಟ್ರಾನಿಕ್ಸ್‌, ಇನ್ಫೋಸಿಸ್‌, ಶಾಹಿ, ರೆನ್ಯೂ ಪವರ್‌ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.