ಆರ್ಥಿಕ ಸ್ಥಿತಿ ಬಗ್ಗೆ ಸಿಎಂ ಶ್ವೇತಪತ್ರ ಪ್ರಕಟಿಸಲಿ - ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ

| N/A | Published : Feb 20 2025, 10:52 AM IST

BY vijayendraa

ಸಾರಾಂಶ

ಮುಖ್ಯಮಂತ್ರಿಗಳು ಆಲ್ ಈಸ್ ವೆಲ್ ಎಂಬ ನಾಟಕವನ್ನು ಬದಿಗಿಟ್ಟು, ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಕೂಡಲೇ ಶ್ವೇತಪತ್ರ ಪ್ರಕಟಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಬೆಂಗಳೂರು : ಮುಖ್ಯಮಂತ್ರಿಗಳು ಆಲ್ ಈಸ್ ವೆಲ್ ಎಂಬ ನಾಟಕವನ್ನು ಬದಿಗಿಟ್ಟು, ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಕೂಡಲೇ ಶ್ವೇತಪತ್ರ ಪ್ರಕಟಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ತೆರಿಗೆಯಿಂದ ಸಂಗ್ರಹವಾಗಿರುವ ಹಣ ಎಲ್ಲಿ ಹೋಗುತ್ತಿದೆ? ಉಪಯೋಗ ಆಗುತ್ತಿದೆಯೇ ಅಥವಾ ದುರುಪಯೋಗ ಆಗುತ್ತಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಎಲ್ಲ ರಂಗದಲ್ಲೂ ದರ ಹೆಚ್ಚಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಆಸ್ತಿ ನೋಂದಣಿ ಶುಲ್ಕ ಶೇ .600ರಷ್ಟು ಹೆಚ್ಚಳವಾಗಿದೆ. ಆಸ್ತಿ ಮಾರ್ಗಸೂಚಿ ಮೌಲ್ಯವೂ ಶೇ.30ರಷ್ಟು ಏರಿಕೆ ಕಂಡಿದೆ. ವಾಹನಗಳ ನೋಂದಣಿ ದರ ಶೇ.10ರಷ್ಟು ಜಾಸ್ತಿಯಾದರೆ, ಆಸ್ಪತ್ರೆಗಳ ಸೇವಾ ಶುಲ್ಕ ಶೇ.5ರಷ್ಟು ಏರಿದೆ. ವಿದ್ಯುತ್ ದರ ಶೇ 14.5ರಷ್ಟು ಜಾಸ್ತಿಯಾಗಿದೆ. ನೀರಿನ ದರ ಶೇ.30 ಏರಿದೆ. ಹಾಲಿನ ದರ ಶೇ.15ರಷ್ಟು ಹೆಚ್ಚಾಗಿದೆ ಎಂದು ಟೀಕಿಸಿದರು.

ಗ್ಯಾರಂಟಿಗೆ ಹಣ ಇಲ್ಲ:

ಸರ್ಕಾರವು ಗ್ಯಾರಂಟಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಂಗಳೂರಿನ ಜನತೆ ಅತಿ ಹೆಚ್ಚು ಆಸ್ತಿ ತೆರಿಗೆ ಕಟ್ಟುತ್ತಿದ್ದಾರೆ. ವಾಹನ, ನೀರಿನ ದರ ಹೆಚ್ಚು ಪಾವತಿಸುತ್ತಿದ್ದಾರೆ. ಆದಾಯ ತೆರಿಗೆಯನ್ನೂ ಹೆಚ್ಚು ಕಟ್ಟುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ನಾಡು ಸುಭಿಕ್ಷವಾಗಿದೆ; ರಾಜ್ಯದ ಜನರು ಸಂತೋಷದಲ್ಲಿದ್ದಾರೆ; ರೈತರು, ಬಡವರು ನೆಮ್ಮದಿಯಿಂದ ಇದ್ದಾರೆ. ಗ್ಯಾರಂಟಿಗಳ ಅನುಷ್ಠಾನದ ಪರಿಣಾಮವಾಗಿ ಎಲ್ಲ ವರ್ಗದ ಜನರು ಸಂತಸದಿಂದಿದ್ದಾರೆ ಎಂಬ ಭ್ರಮೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಇದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯದ ಹಣಕಾಸಿನ ಪರಿಸ್ಥಿತಿ ಅಧೋಗತಿಗೆ ಬಂದು ತಲುಪಿದೆ. ಇನ್ನೊಂದೆಡೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರು. ಐದಾರು ತಿಂಗಳಿಂದ ಸಿಗುತ್ತಿಲ್ಲ. ಐದು ಕೆಜಿ ಅಕ್ಕಿಯ ಹಣವನ್ನೂ ಕೊಡುತ್ತಿಲ್ಲ. ಇದರ ನಡುವೆಯೇ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.7ರಂದು 16ನೇ ಬಜೆಟ್ ಮಂಡಿಸುತ್ತಿದ್ದಾರೆ. ಅತಿ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿ ಅಥವಾ ದಾಖಲೆಯನ್ನು ಸಿದ್ದರಾಮಯ್ಯ ನಿರ್ಮಾಣ ಮಾಡಲಿದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯವಾಗಿ ಹೇಳಿದರು.

ಸಿದ್ದರಾಮಯ್ಯ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ 1.90 ಲಕ್ಷ ಕೋಟಿ ರು. ಸಾಲ ಮಾಡಿದೆ ಎಂಬುದನ್ನು ನಾಡಿನ ಜನ ಗಮನಿಸಬೇಕಿದೆ. ವಿವಿಧ ಸರ್ಕಾರಿ ಇಲಾಖೆಗಳ ಆರು ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿ ಇದ್ದು, ಅದರ ವಸೂಲಿ ಕುರಿತು ಸಂಬಂಧಿತ ಸಚಿವರ ಜೊತೆ ಚರ್ಚಿಸಿದ್ದಾಗಿ ಇಂಧನ ಸಚಿವ ಜಾರ್ಜ್ ಅವರೇ ಹೇಳಿದ್ದಾರೆ. ಸಂಬಳ ಕೊಡಲಾಗದ, ವಿದ್ಯುತ್ ಬಿಲ್ ಭರಿಸಲಾಗದ ದಾರುಣ ಸ್ಥಿತಿಗೆ ರಾಜ್ಯ ತಲುಪಿದೆ. ಇದಕ್ಕೆ ಯಾರು ಹೊಣೆ ಎಂಬುದನ್ನು ಸಿದ್ದರಾಮಯ್ಯ ಅವರು ತಿಳಿಸಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿಗೆ ವಿರೋಧ ಇಲ್ಲ: ಗ್ಯಾರಂಟಿಗಳ ಬಗ್ಗೆ ನಮ್ಮ ವಿರೋಧವಿಲ್ಲ. ಅದರ ಅನುಷ್ಠಾನ ಆಗಲೇಬೇಕು. ಲೋಕಸಭಾ ಚುನಾವಣೆ ಬಂದಾಗ ಗ್ಯಾರಂಟಿ ಹಣ ನೀಡುತ್ತಾರೆ. ಉಪಚುನಾವಣೆ ಬಂದಾಗಲೂ ಗ್ಯಾರಂಟಿ ಅನುಷ್ಠಾನಕ್ಕೆ ಬರುತ್ತದೆ. ಮುಂದಿನ ಜಿಲ್ಲಾ ಮತ್ತು ತಾಪಂ ಚುನಾವಣೆ ಎದುರಾದಾಗ ಹಣ ಕೊಡುವ ಸಾಧ್ಯತೆ ಇದೆ. ರಾಜ್ಯದ ಜನರನ್ನು ಭಿಕ್ಷುಕರು ಎಂದುಕೊಂಡಿದ್ದೀರಾ ಎಂದು ವಿಜಯೇಂದ್ರ ಖಾರವಾಗಿ ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ಸುಳ್ಳಿನ ಸರದಾರ. ಸರಕಾರದ ಯೋಗ್ಯತೆಗೆ ಬೆಂಗಳೂರಿನ ಒಂದು ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ; ಭೂಗತ ಟನೆಲ್ ಬಗ್ಗೆ ಮಾತನಾಡುತ್ತೀರಿ. ಶಾಸಕರಿಗೆ ಅಭಿವೃದ್ಧಿ ಅನುದಾನ ನೀಡುತ್ತಿಲ್ಲ ಎಂದು ಹರಿಹಾಯ್ದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಪಿ.ಸಿ. ಮೋಹನ್, ಶಾಸಕರಾದ ಕೆ.ಗೋಪಾಲಯ್ಯ, ಉದಯ ಗರುಡಾಚಾರ್, ಪಕ್ಷದ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.