ಹಾಲಿ ನ್ಯಾಯಧೀಶರು/ಸಿಬಿಐ ತನಿಖೆ ಆಗಲಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ

| N/A | Published : Mar 22 2025, 11:06 AM IST

Bharatiya Janata Party Karnataka President BY Vijayendra (Photo/ANI)

ಸಾರಾಂಶ

ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಅಥವಾ ಸಿಬಿಐ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಬೆಂಗಳೂರು : ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಅಥವಾ ಸಿಬಿಐ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಹಕಾರ ಸಚಿವ ರಾಜಣ್ಣ ರಾಜ್ಯ ಮತ್ತು ರಾಷ್ಟ್ರಮಟ್ಟದ 48ಕ್ಕೂ ಹೆಚ್ಚು ಪ್ರಮುಖರು ಹನಿಟ್ರ್ಯಾಪ್‌ಗೊಳಗಾದ ಕುರಿತು ತಿಳಿಸಿ ತನಿಖೆಯಾಗಬೇಕೆಂದು ಹೇಳಿಕೆ ಕೊಟ್ಟಿದ್ದಾರೆ. ಇದು ಬಹಳ ಗಂಭೀರ ವಿಚಾರ ಎಂಬುದಾಗಿ ತಿಳಿಸಿರುವ ಗೃಹ ಸಚಿವರು, ಇದರ ಬಗ್ಗೆ ತನಿಖೆ ಮಾಡಿಸುವುದಾಗಿ ತಿಳಿಸಿದ್ದರು. ಆದರೆ ಸದನ ಮುಗಿದ ಬಳಿಕ ಹೊರಕ್ಕೆ ಬಂದು, ತಮಗೆ ಅಧಿಕೃತವಾಗಿ ಯಾವುದೇ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದರು.

ಅಧಿಕಾರಿಗಳು ಮಾಹಿತಿ ನೀಡಿದ ಮೇಲೆ ಆ ಕುರಿತು ಆಲೋಚಿಸುವುದಾಗಿ ಎಂದು ಹೇಳುವ ಮೂಲಕ ದ್ವಂದ್ವ ನೀತಿ ಪ್ರದರ್ಶಿಸಲಾಗಿದೆ. ಸದನದಲ್ಲಿ ಮುಖ್ಯಮಂತ್ರಿಗಳಿಂದ ಉತ್ತರ ಪಡೆಯುವ ಪ್ರಯತ್ನ ಮಾಡಿದ್ದೇವೆ. ಅವರು ಯಾವುದೇ ರೀತಿ ಸರಿಯಾದ ಉತ್ತರ ಕೊಟ್ಟಿಲ್ಲ. ಇದೊಂದು ಗಂಭೀರ ಪ್ರಕರಣವಾಗಿದ್ದು, ಇದು ಸದನದ 224 ಶಾಸಕರ ಮತ್ತು ರಾಜ್ಯದ ಗೌರವದ ಪ್ರಶ್ನೆಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.