ಜು.22ಕ್ಕೆ 250 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ

| Published : Jul 15 2024, 11:09 AM IST

LKG School
ಜು.22ಕ್ಕೆ 250 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿ ಕೇಂದ್ರಗಳ ಉನ್ನತೀಕರಣದ ಮೊದಲ ಭಾಗವಾಗಿ ಜು.22ಕ್ಕೆ 250 ಅಂಗನವಾಡಿಯಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿಗಳನ್ನು ಸಾಂಕೇತಿಕವಾಗಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಬೆಂಗಳೂರು :  ಅಂಗನವಾಡಿ ಕೇಂದ್ರಗಳ ಉನ್ನತೀಕರಣದ ಮೊದಲ ಭಾಗವಾಗಿ ಜು.22ಕ್ಕೆ 250 ಅಂಗನವಾಡಿಯಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿಗಳನ್ನು ಸಾಂಕೇತಿಕವಾಗಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಮಡಿವಾಳದ ಸ್ತ್ರೀ ಶಕ್ತಿ ಭವನದಲ್ಲಿ ಆಯೋಜಿಸಿದ್ದ ‘ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಜಾರಿಯಾಗಲಿ, ಐಸಿಡಿಎಸ್ ಉಳಿಸಿ ಮಕ್ಕಳನ್ನು ರಕ್ಷಿಸಿ’ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜು.22ರಂದು 250 ಅಂಗನವಾಡಿಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭವಾಗಲಿವೆ. ಮಕ್ಕಳಿಗೆ ಇಲಾಖೆಯಿಂದಲೇ ಬ್ಯಾಗ್, ಪುಸ್ತಕ, ಸಮವಸ್ತ್ರ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೊದಲ ಹಂತದಲ್ಲಿ 15ರಿಂದ 20 ಸಾವಿರ ಶಾಲೆಗಳಲ್ಲಿ ಗವರ್ನಮೆಂಟ್ ಮಾಂಟೆಸ್ಸರಿ ಆರಂಭಿಸಲಾಗುತ್ತಿದೆ. ಅಂಗನವಾಡಿಗಳನ್ನು ಉನ್ನತೀಕರಿಸುವುದೇ ಇಲಾಖೆಯ ಉದ್ದೇಶವಾಗಿದೆ. ಈಗಾಗಲೇ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಗುಣಮಟ್ಟದ ಆಹಾರ, ಶಿಕ್ಷಕಿಯರಿಗೆ ಸೀರೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅಂಗನವಾಡಿ ಶಿಕ್ಷಕಿಯರನ್ನು ಕೆಲಸದಿಂದ ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.

30 ವರ್ಷಕ್ಕಿಂತ ಮೇಲ್ಪಟ್ಟ ಅಂಗನವಾಡಿ ಕೇಂದ್ರಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು. ಶಾಲೆಗಳಿಗಿಂತ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಹೆಚ್ಚು ಸುರಕ್ಷಿತವಾಗಿರುತ್ತಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ, ಗುಣಮಟ್ಟಕ್ಕೆ ಆದ್ಯತೆ ನೀಡೋಣ ಎಂದು ಕರೆ ನೀಡಿದರು.

 ವಿಮೆ ನೀಡುವ ಬಗ್ಗೆ ಶೀಘ್ರ ತೀರ್ಮಾನ 

ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮೆ ನೀಡುವ ಕುರಿತು ಶೀಘ್ರವೇ ತೀರ್ಮಾನಿಸಲಾಗುವುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚಿಸಲಾಗುವುದು. ಗೌರವ ಧನ ಹೆಚ್ಚಳದ ಬಗ್ಗೆಯೂ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದು, ಶೀಘ್ರವೇ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್, ಸಿಐಟಿಯು ಕರ್ನಾಟಕ ಹಾಗೂ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮೀ, ಕಾರ್ಯದರ್ಶಿ ಯಮುನಾ ಗಾಂವ್ಕರ್ ಮತ್ತಿತರರು ಉಪಸ್ಥಿತರಿದ್ದರು.