ಸಾರಾಂಶ
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿ ವೇಳೆ 1.85 ಕೋಟಿ ರು. ಮೌಲ್ಯದ ಚಿನ್ನಾಭರಣ, 11.56 ಲಕ್ಷ ರು. ನಗದು ಸೇರಿದಂತೆ 26.66 ಕೋಟಿ ರು. ಮೌಲ್ಯದ ವಸ್ತುಗಳನ್ನು ಪತ್ತೆ ಮಾಡಲಾಗಿದೆ.
ಬೆಂಗಳೂರು : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿ ವೇಳೆ 1.85 ಕೋಟಿ ರು. ಮೌಲ್ಯದ ಚಿನ್ನಾಭರಣ, 11.56 ಲಕ್ಷ ರು. ನಗದು ಸೇರಿದಂತೆ 26.66 ಕೋಟಿ ರು. ಮೌಲ್ಯದ ವಸ್ತುಗಳನ್ನು ಪತ್ತೆ ಮಾಡಲಾಗಿದೆ.
ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ರಾಜ್ಯದ ನಾಲ್ಕು ಅಧಿಕಾರಿಗಳಿಗೆ ಸೇರಿದ 22 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು. ಬೆಂಗಳೂರು, ಮಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ ಸೇರಿದಂತೆ 22 ಕಡೆ ಶೋಧ ಕಾರ್ಯ ನಡೆಸಲಾಗಿದೆ. ಸರ್ಕಾರಿ ಅಧಿಕಾರಿಗಳ ಬಳಿ ಭಾರೀ ಪ್ರಮಾಣದಲ್ಲಿ ಚಿನ್ನಾಭರಣ ಪತ್ತೆಯಾಗಿದ್ದು, 1.85 ಕೋಟಿ ರು. ಮೌಲ್ಯದ ಚಿನ್ನಾಭರಣಗಳು ಸಿಕ್ಕಿವೆ. ಈ ವೇಳೆ ಅಕ್ಕಸಾಲಿಗರನ್ನು ಕರೆಸಿದ ಲೋಕಾಯುಕ್ತ ಪೊಲೀಸರು ಚಿನ್ನಾಭರಣದ ಪರಿಶುದ್ಧತೆ ಕುರಿತು ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಬೆಂಗಳೂರು ನಗರ ಯೋಜನೆ ನಿರ್ದೇಶಕ ಎನ್.ಕೆ.ತಿಪ್ಪೇಸ್ವಾಮಿ, ಅಬಕಾರಿ ಅಧೀಕ್ಷಕ ಕೆ.ಮೋಹನ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಮಂಗಳೂರಿನ ಹಿರಿಯ ಭೂ ವಿಜ್ಞಾನಿ ಎಂ.ಸಿ.ಕೃಷ್ಣವೇಣಿ ದಾಳಿಗೊಳಗಾದ ಅಧಿಕಾರಿಗಳಾಗಿದ್ದಾರೆ.
ತಿಪ್ಪೇಸ್ವಾಮಿ ಬಳಿ ಅಪಾರ ಪ್ರಮಾಣದ ಚಿನ್ನ ಪತ್ತೆ:
ದಾಳಿಯಾದ ಅಧಿಕಾರಿಗಳ ಪೈಕಿ ಕೃಷ್ಣವೇಣಿ ಬಳಿ ಅಧಿಕ ಮೊತ್ತದ ಆಸ್ತಿ ಮೌಲ್ಯ ಪತ್ತೆಯಾಗಿದೆ. 11.93 ಕೋಟಿ ರು. ಮೌಲ್ಯದ ಆಸ್ತಿಗಳು ಲಭ್ಯವಾಗಿವೆ. ಬಳಿಕ ಮಹೇಶ್ ಬಳಿ 6.89 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.
ಅಧಿಕಾರಿಗಳ ಅಕ್ರಮ ಆಸ್ತಿ ವಿವರ
1. ಎನ್.ಕೆ.ತಿಪ್ಪೇಸ್ವಾಮಿ, ನಿರ್ದೇಶಕ, ಬೆಂಗಳೂರು ನಗರ ಯೋಜನೆ
ಒಟ್ಟು ಐದು ಸ್ಥಳಗಳಲ್ಲಿ ಶೋಧ ಕಾರ್ಯ. 1 ನಿವೇಶನ, 2 ವಾಸದ ಮನೆಗಳು, 7.5 ಎಕರೆ ಕೃಷಿ ಜಮೀನು ಸೇರಿ 2.50 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಪತ್ತೆ. 8 ಲಕ್ಷ ರು. ನಗದು, 58.73 ಲಕ್ಷ ರು. ಮೌಲ್ಯದ ಚಿನ್ನಾಭರಣ, 29.10 ಲಕ್ಷ ರು. ಮೌಲ್ಯದ ವಾಹನಗಳು, 15 ಸಾವಿರ ರು. ಮೌಲ್ಯದ ಇತರೆ ವಸ್ತುಗಳು ಸೇರಿ 87.98 ಲಕ್ಷ ರು. ಮೌಲ್ಯದ ಚರಾಸ್ತಿ ಲಭ್ಯವಾಗಿದೆ. ಒಟ್ಟು 3.46 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.
2. ಕೆ.ಮೋಹನ್, ಅಬಕಾರಿ ಅಧೀಕ್ಷಕ, ಬೆಂಗಳೂರು ದಕ್ಷಿಣ ಅಬಕಾರಿ ಜಂಟಿ ಆಯುಕ್ತರ ಕಚೇರಿ
ಒಟ್ಟು ಐದು ಸ್ಥಳಗಳಲ್ಲಿ ತಪಾಸಣೆ. 3 ನಿವೇಶನಗಳು, 2 ವಾಸದ ಮನೆ, 2.25 ಎಕರೆ ಕೃಷಿ ಜಮೀನು ಸೇರಿ 3.22 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. 1.17 ಲಕ್ಷ ರು. ನಗದು, 44.58 ಲಕ್ಷ ರು. ಮೌಲ್ಯದ ಚಿನ್ನಾಭರಣ, 35 ಲಕ್ಷ ರು. ಮೌಲ್ಯದ ವಾಹನಗಳು, 35 ಲಕ್ಷ ರು. ಬ್ಯಾಂಕ್ ನಿಶ್ಚಿತ ಠೇವಣಿ ಸೇರಿ 1.15 ಕೋಟಿ ರು. ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು 4.37 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.
3. ಮಹೇಶ್, ವ್ಯವಸ್ಥಾಪಕ ನಿರ್ದೇಶಕ, ಕಾವೇರಿ ನೀರಾವರಿ ನಿಗಮ ನಿಯಮಿತ, ಬೆಂಗಳೂರು
ಒಟ್ಟು ಏಳು ಸ್ಥಳಗಳ ಮೇಲೆ ದಾಳಿ. 25 ನಿವೇಶನಗಳು, 1 ವಾಸದ ಮನೆ, 25 ಎಕರೆ ಕೃಷಿ ಜಮೀನು ಸೇರಿ 4.76 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 1.82 ಲಕ್ಷ ರು. ನಗದು, 15 ಲಕ್ಷ ರು. ಮೌಲ್ಯದ ಚಿನ್ನಾಭರಣ, 25 ಲಕ್ಷ ರು. ಮೌಲ್ಯದ ವಾಹನಗಳು, 1.71 ಕೋಟಿ ರು. ಮೌಲ್ಯದ ಇತರೆ ವಸ್ತುಗಳು ಸೇರಿ 2.12 ಕೋಟಿ ರು. ಮೌಲ್ಯದ ಚರಾಸ್ತಿ ಲಭ್ಯವಾಗಿದೆ. ಒಟ್ಟು 6.89 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.
4. ಎಂ.ಸಿ.ಕೃಷ್ಣವೇಣಿ, ಹಿರಿಯ ಭೂ ವಿಜ್ಞಾನಿ, ಮಂಗಳೂರು
ಒಟ್ಟು ಐದು ಕಡೆ ತಪಾಸಣೆ. 3 ನಿವೇಶನಗಳು, ಬೆಂಗಳೂರಿನ ಯಲಹಂಕದಲ್ಲಿ 1 ಫ್ಲಾಟ್, ನಿರ್ಮಾಣ ಹಂತದಲ್ಲಿರುವ 1 ವಾಣಿಜ್ಯ ಸಂಕೀರ್ಣ, 26 ಎಕರೆ ಕೃಷಿ ಜಮೀನು ಸೇರಿ 10.41 ಕೋಟಿ ರು. ಸ್ಥಿರಾಸ್ತಿ ಲಭ್ಯವಾಗಿದೆ. 56,450 ರು.ನಗದು, 66.71 ಲಕ್ಷ ರು. ಮೌಲ್ಯದ ಚಿನ್ನಾಭರಣಗಳು 60 ಲಕ್ಷ ರು. ಮೌಲ್ಯದ ವಾಹನಗಳು, 24.40 ಲಕ್ಷ ರು. ಮೌಲ್ಯದ ಇತರೆ ವಸ್ತುಗಳು ಸೇರಿ ಒಟ್ಟು 1.51 ಕೋಟಿ ರು. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಒಟ್ಟು 11.93 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.