ಬೆಂಗಳೂರು: ₹ 8 ಕೋಟಿ ದಾಟಿದ ಪಾಲಿಕೆ ಎಂಜಿನಿಯರ್‌ ಆಸ್ತಿ ಗಳಿಕೆ - ಲೋಕಾಯುಕ್ತ ಕಾರ್ಯಾಚರಣೆ

| N/A | Published : Feb 01 2025, 10:32 AM IST

BBMP

ಸಾರಾಂಶ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿಗೊಳಗಾದ ಬಿಬಿಎಂಪಿಯ ಹೆಬ್ಬಾಳ ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಾಧವ್‌ ರಾವ್‌ ಅವರ ಕುಟುಂಬ ಸದಸ್ಯರೆಲ್ಲರೂ ಬಿಬಿಎಂಪಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂಬ ಅಂಶ ಬಯಲಾಗಿದೆ.

  ಬೆಂಗಳೂರು : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿಗೊಳಗಾದ ಬಿಬಿಎಂಪಿಯ ಹೆಬ್ಬಾಳ ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಾಧವ್‌ ರಾವ್‌ ಅವರ ಕುಟುಂಬ ಸದಸ್ಯರೆಲ್ಲರೂ ಬಿಬಿಎಂಪಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂಬ ಅಂಶ ಬಯಲಾಗಿದೆ.

ಮಾಧವ್‌ರಾವ್‌ ಕುಟುಂಬದಲ್ಲಿ ಸಹೋದರಿ ಸೇರಿದಂತೆ ಐವರು ಸಹೋದರರಿದ್ದು, ಎಲ್ಲರೂ ಬಿಬಿಎಂಪಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಬೇರೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಎರವಲು ಸೇವೆಯ ಮೇಲೆ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಲೋಕಾಯುಕ್ತ ಪೊಲೀಸರ ಪರಿಶೀಲನೆ ವೇಳೆ ಗೊತ್ತಾಗಿದೆ.

ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ದಾಖಲೆಗಳ ಕುರಿತು ಮಾಧವ್‌ ರಾವ್‌ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಹಲವು ಸಂಗತಿಗಳು ಬೆಳಕಿಗೆ ಬಂದಿವೆ. 2010ರಲ್ಲಿ ಸರ್ಕಾರಿ ನೌಕರಿ ಪಡೆದ ಮಾಧವ್‌ರಾವ್‌, 14 ವರ್ಷದಲ್ಲಿಯೇ ಕೋಟ್ಯಂತರ ರು. ಮೌಲ್ಯದ ಆಸ್ತಿ ಗಳಿಕೆ ಮಾಡಿರುವುದು ಗೊತ್ತಾಗಿದೆ. 8.57 ಕೋಟಿ ರು. ಮೌಲ್ಯದ ಆಸ್ತಿ ಗಳಿಕೆ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ಮಾಧವ್‌ರಾವ್‌ ಅವರ ಸಹೋದರರ ಮನೆಗಳಲ್ಲಿಯೂ ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಅಕ್ರಮ ಸಂಪಾದನೆಯನ್ನು ದಾನ ಪತ್ರದ ಮೂಲಕ ಗಳಿಕೆ ಮಾಡಲಾಗಿದೆ ಎಂಬುದಾಗಿ ಬಿಂಬಿಸಲಾಗಿದೆ. ಇದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಿದಾಗ ಬಳಿಕ ಸತ್ಯಾಸತ್ಯತೆ ಬಯಲಾಗಲಿದೆ ಎನ್ನಲಾಗಿದೆ.

ನಿವೇಶನ, ಮನೆ ಮತ್ತು ಜಮೀನು ಕುರಿತು ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ 7.52 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇರುವುದು ಪತ್ತೆಯಾಗಿದೆ. ಬೆಂಗಳೂರು ಮಾತ್ರವಲ್ಲದೇ, ಬೀದರ್‌ ಜಿಲ್ಲೆಯಲ್ಲಿಯೂ ಆಸ್ತಿ ಸಂಪಾದನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ ಟಿ.ಕೆ.ರಮೇಶ್‌ ಸಹ ಹಲವೆಡೆ ಆಸ್ತಿ ಸಂಪಾದನೆ ಮಾಡಿರುವುದು ಗೊತ್ತಾಗಿದೆ. ಹುಲಿಯೂರು ದುರ್ಗದಲ್ಲಿ ತೋಟದ ಮನೆ ಇರುವುದು ಗೊತ್ತಾಗಿದೆ. 20 ಲಕ್ಷ ರು. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಆದಾಯಕ್ಕಿಂತ ಹೆಚ್ಚಿನ ಅಸಮತೋಲನ ಆಸ್ತಿ ಹೊಂದಿರುವ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.