ಸಾರಾಂಶ
ನವನವೀನ ಎಸ್‌ಯುವಿಗಳ ಮೂಲಕ ಕಾರು ಪ್ರಿಯರ ಮನಗೆದ್ದಿರುವ ಪ್ರತಿಷ್ಠಿತ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಕೃಷಿ ಯಂತ್ರೋಪಕರಣಗಳ ಮಾರಾಟದಲ್ಲೂ ದಾಪುಗಾಲು ಇಟ್ಟಿದೆ.
ಎಂ.ಎಲ್. ಲಕ್ಷ್ಮೀಕಾಂತ್
ನಾಭ (ಪಂಜಾಬ್) : ನವನವೀನ ಎಸ್‌ಯುವಿಗಳ ಮೂಲಕ ಕಾರು ಪ್ರಿಯರ ಮನಗೆದ್ದಿರುವ ಪ್ರತಿಷ್ಠಿತ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಕೃಷಿ ಯಂತ್ರೋಪಕರಣಗಳ ಮಾರಾಟದಲ್ಲೂ ದಾಪುಗಾಲು ಇಟ್ಟಿದೆ. ಟ್ರ್ಯಾಕ್ಟರ್‌ಗಳ ಮಾರಾಟದಲ್ಲಿ ಈಗಾಗಲೇ ದೇಶದಲ್ಲಿ ನಂಬರ್ 1 ಸ್ಥಾನದಲ್ಲಿರುವ ಕಂಪನಿ, ಬಿತ್ತನೆಗೂ ಮುನ್ನ ಕಡಿಮೆ ಖರ್ಚಿನಲ್ಲಿ ಹಾಗೂ ಕ್ಷಿಪ್ರಗತಿಯಲ್ಲಿ ಜಮೀನು ಹದಗೊಳಿಸಲು ಬಳಸುವ ‘ರೋಟವೇಟರ್’ಗಳ ಮಾರಾಟದಲ್ಲಿ ಕೆಲವೇ ವರ್ಷಗಳಲ್ಲಿ 2ನೇ ಸ್ಥಾನಕ್ಕೇರಿ ಸಾಧನೆ ಮಾಡಿದೆ.
ಕೃಷಿ ಕಾರ್ಮಿಕರ ಸಮಸ್ಯೆಗೆ ಕೃಷಿ ಕ್ಷೇತ್ರದ ಯಾಂತ್ರೀಕರಣವೇ ಪರಿಹಾರ ಎಂಬ ನಿಲುವಿಗೆ ಬಂದಿರುವ ಕಂಪನಿ, ಟ್ರ್ಯಾಕ್ಟರ್ ಜತೆಗೆ ಕೃಷಿ ಯಂತ್ರೋಪಕರಣಗಳ ಉತ್ಪಾದನೆ, ಮಾರಾಟಕ್ಕೆ ಒತ್ತು ನೀಡುತ್ತಿದೆ. ಅದರಲ್ಲಿ ಸಫಲವೂ ಆಗಿದೆ.ಕೃಷಿ ಭೂಮಿಯನ್ನು ಬಿತ್ತನೆಗೆ ಹದಗೊಳಿಸುವ ಮುನ್ನ ಉಳುಮೆ ಮಾಡಿ, ಮಣ್ಣನ್ನು ಸಣ್ಣ ಗಾತ್ರದ ಪುಡಿ ಮಾಡಬೇಕಾಗುತ್ತದೆ. ಈ ಮೊದಲೆಲ್ಲಾ ನೇಗಿಲುಗಳ ಸಹಾಯದಿಂದ ಹಲವು ದಿನಗಳ ಕಾಲ ಮಾಡುತ್ತಿದ್ದ ಈ ಕಾರ್ಯವನ್ನು ರೋಟವೇಟರ್‌ಗಳು ಸರಾಗಗೊಳಿಸಿವೆ ಎಂದು ಕಂಪನಿ ತಿಳಿಸಿದೆ.
ತನ್ನ ರೋಟವೇಟರ್‌ನಲ್ಲಿ ಶಕ್ತಿಶಾಲಿ ‘ಬೋರೋಬ್ಲೇಡ್’ಗಳನ್ನು ಕಂಪನಿ ಬಳಸುತ್ತಿದೆ. ಇವು ತುಕ್ಕು ಹಿಡಿಯುವುದಿಲ್ಲ. ಎಂತಹ ಮಣ್ಣೇ ಆದರೂ ಪುಡಿ ಮಾಡುವ ಶಕ್ತಿ ಹೊಂದಿದೆ.
ರೋಟವೇಟರ್ ಬೆಲೆ ಎಷ್ಟು?:
ದೇಶದ ವಿವಿಧ ಮಣ್ಣಿನ ಗುಣ ಹಾಗೂ ಬೆಳೆಗಳಿಗೆ ಅನುಗುಣವಾಗಿ ಕಂಪನಿಯು ರೋಟವೇಟರ್‌ಗಳನ್ನು ಅಭಿವೃದ್ಧಿಪಡಿಸಿದೆ. ಮಣ್ಣು ಬಿಗಿಯಾಗಿದ್ದರೆ ಅಥವಾ ಗಟ್ಟಿಯಾಗಿದ್ದರೆ ಅಧಿಕ ಶಕ್ತಿಶಾಲಿಯ ‘ಮಹಾವೇಟರ್’, ‘ಮಹಾವೇಟರ್ ಹೆವಿಡ್ಯೂಟಿ’, ಮಧ್ಯಮ ಪ್ರಮಾಣದ ಬಿಗಿಯಾದ ಮಣ್ಣಿಗಾಗಿ ‘ಸೂಪರ್‌ವೇಟರ್’ ಹಾಗೂ ಸಡಿಲ ಮಣ್ಣಿನ ಪ್ರದೇಶಗಳಿಗಾಗಿ ‘ಗೈರೋವೇಟರ್’ ಹಾಗೂ ‘ಮಿನಿವೇಟರ್’ ಎಂಬ ರೋಟವೇಟರ್‌ಗಳನ್ನು ಪರಿಚಯಿಸಿದೆ. ಬೆಲೆಯು 60 ಸಾವಿರದಿಂದ 1.30 ಲಕ್ಷ ರು.ವರೆಗೂ ಇದೆ. ರೈತರಿಗೆ ಮಹೀಂದ್ರಾ ಫೈನಾನ್ಸ್ ವತಿಯಿಂದ ಸಾಲ ಕೂಡ ಸಿಗುತ್ತದೆ.
2 ವರ್ಷ ವಾರಂಟಿ:
ಈ ರೋಟವೇಟರ್‌ಗಳನ್ನು ಉತ್ಪಾದಿಸಲು ಕಂಪನಿಯು ಪಂಜಾಬ್‌ನ ಪಟಿಯಾಲ ಜಿಲ್ಲೆಯಲ್ಲಿರುವ ನಾಭದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ.
ಬೇರೆ ಕಂಪನಿಗಳು ರೋಟವೇಟರ್‌ಗಳಿಗೆ 6 ತಿಂಗಳಿಂದ 1 ವರ್ಷದವರೆಗೆ ವಾರಂಟಿ ನೀಡಿದರೆ, ತಾವು 2 ವರ್ಷಗಳ ವಾರಂಟಿ ನೀಡುತ್ತಿದ್ದೇವೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಂಪನಿಯ ರೋಟವೇಟರ್‌ಗೆ ರೈತರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಮಾರಾಟದಲ್ಲಿ ಮೂರೇ ವರ್ಷದಲ್ಲಿ ಶೇ.34 ಪ್ರಗತಿ ಸಾಧಿಸಲಾಗಿದೆ, ಮಾರುಕಟ್ಟೆಯಲ್ಲಿ ಕಂಪನಿಯ ಪಾಲು ಶೇ.12.6ರಿಂದ ಶೇ.21.3ಕ್ಕೇರಿದೆ ಎಂದು ವಿವರಿಸಿದ್ದಾರೆ.
ರೋಟವೇಟರ್ ಬಳಸಿದ ಸಮಯ ತಿಳಿಯಲು ಆ್ಯಪ್
ಎಷ್ಟು ಕಾಲ ರೋಟೋವೇಟರ್ ಓಡಿದೆ, ಎಷ್ಟು ಪ್ರಮಾಣದಲ್ಲಿ ಇಂಧನ ಖರ್ಚಾಗುತ್ತಿದೆ. ಇಂಧನ ಮಿತವ್ಯಯಕ್ಕೆ ಯಾವ ವೇಗದಲ್ಲಿ ರೋಟವೇಟರ್ ಓಡಿಸಬೇಕು ಎಂಬುದನ್ನು ತಿಳಿಸುವ ‘ತೇಜಿ’ ಎಂಬ ಬ್ಲೂಟೂತ್ ತಂತ್ರಜ್ಞಾನ ಆಧರಿತ ರೋಟವೇಟರ್ ಅನ್ನು ಕೂಡ ಮಹೀಂದ್ರಾ ಪರಿಚಯಿಸಿದೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಈ ವಿವರವನ್ನು ರೈತರು ಪಡೆಯಬಹುದಾಗಿದೆ.