ಸಾರಾಂಶ
ನಗರದ ಮಲ್ಲೇಶ್ವರದಲ್ಲಿ 2013ರಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲು ಕೋರಿ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು : ನಗರದ ಮಲ್ಲೇಶ್ವರದಲ್ಲಿ 2013ರಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲು ಕೋರಿ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ತಮಿಳುನಾಡು ಮೂಲದ ಪೀರ್ ಮೊಹಿದ್ದೀನ್ ಸೇರಿದಂತೆ 10 ಮಂದಿ ಆರೋಪಿಗಳು ಸಲ್ಲಿಸಿದ್ದ ಎರಡು ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ವಿವರ:
ನಗರದ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿ ಎದುರು 2013ರ ಏ.17ರಂದು ಬಾಂಬ್ ಸ್ಫೋಟ ಪ್ರಕರಣ ಸಂಭವಿಸಿತ್ತು.ಪ್ರಕರಣ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಅರ್ಜಿದಾರರನ್ನು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡುವಂತೆ ಕೋರಿ ತನಿಖಾಧಿಕಾರಿ ರಾಜ್ಯ ಗೃಹ ಇಲಾಖೆಗೆ ಬರೆದಿದ್ದ ಮನವಿ ಪತ್ರ ಪುರಸ್ಕರಿಸಿದ್ದ ಸರ್ಕಾರ ಪೂರ್ವಾನುಮತಿ ನೀಡಿ 2014ರ ಮೇ 5ರಂದು ಆದೇಶ ಹೊರಡಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ತನಿಖಾಧಿಕಾರಿಗಳ ಸರ್ಕಾರಿ ಅಭಿಯೋಜಕ ವಕೀಲ ಪಿ.ತೇಜೇಶ್ ವಾದ ಮಂಡಿಸಿ, ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಸರ್ಕಾರ ಪೂರ್ವಾನುಮತಿ ನೀಡಿರುವುದು ಕಾನೂನುಬದ್ಧವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪೂರ್ವಾನುಮತಿ ಕುರಿತಂತೆ ಸ್ವತಂತ್ರ ಪರಿಶೀಲನೆ ನಡೆಸಬೇಕಿರುತ್ತದೆ. ಸಾಕ್ಷ್ಯಗಳ ಮೂಲಕ ನಿರ್ಧರಿಸಬೇಕಾದ ವಿಚಾರ ಅದಾಗಿದೆ. ಆ ವಿಚಾರವನ್ನು ವಿಚಾರಣಾ ನ್ಯಾಯಾಲಯದ ಮುಂದೆ ವಿಚಾರಣೆಯ ಸಮಯದಲ್ಲಿ ಪ್ರಸ್ತಾಪಿಸಬೇಕಿದೆ. ಪೂರ್ವಾನುಮತಿ ಮಂಜೂರಾತಿಯ ಮಾನ್ಯತೆಯನ್ನು ಪ್ರಕರಣದ ವಿಚಾರಣೆ (ಟ್ರಯಲ್) ಆರಂಭವಾಗುವ ಮುನ್ನ ಪ್ರಶ್ನಿಸಬೇಕಿದೆ. ಇದರಿಂದ ಅರ್ಜಿಗಳಿಗೆ ವಿಚಾರಣಾ ಮಾನ್ಯತೆ ಇಲ್ಲವಾಗಿದ್ದು, ಅವುಗಳನ್ನು ವಜಾಗೊಳಿಸಬೇಕು ಎಂದು ಕೋರಿದ್ದರು. ಈ ವಾದ ಪುರಸ್ಕರಿಸಿರುವ ಹೈಕೋರ್ಟ್, ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.