ಸಾರಾಂಶ
ರನ್ಯಾ ರಾವ್ ಚಿನ್ಮ ಸ್ಮಗ್ಲಿಂಗ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಕಳೆದ ಐದು ವರ್ಷಗಳಿಂದ ಕನ್ನಡ ಚಲನಚಿತ್ರ, ಕಿರುತೆರೆಯ ಕೆಲ ನಟಿಯರನ್ನು ಬಳಸಿಕೊಂಡು ವಿದೇಶದಿಂದ ಕಳ್ಳ ಹಾದಿಯಲ್ಲಿ ಚಿನ್ನ ಸಾಗಿಸುವ ಜಾಲವೊಂದು ಸಕ್ರಿಯವಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ರನ್ಯಾ ರಾವ್ ಚಿನ್ಮ ಸ್ಮಗ್ಲಿಂಗ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಕಳೆದ ಐದು ವರ್ಷಗಳಿಂದ ಕನ್ನಡ ಚಲನಚಿತ್ರ, ಕಿರುತೆರೆಯ ಕೆಲ ನಟಿಯರನ್ನು ಬಳಸಿಕೊಂಡು ವಿದೇಶದಿಂದ ಕಳ್ಳ ಹಾದಿಯಲ್ಲಿ ಚಿನ್ನ ಸಾಗಿಸುವ ಜಾಲವೊಂದು ಸಕ್ರಿಯವಾಗಿರುವ ವಿಚಾರ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದ ನಿರಂತರವಾಗಿ ‘ದುಬೈ ಪ್ರವಾಸ’ಕ್ಕೆ ಹೋಗಿದ್ದ ನಟಿಯರ ಪಟ್ಟಿಯನ್ನು ಡಿಆರ್‌ಐ ತಯಾರಿಸಿದ್ದು, ಆ ನಟಿಯರ ಆರ್ಥಿಕ ವ್ಯವಹಾರದ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಹೀಗಾಗಿ ರನ್ಯಾರಾವ್ ಬಳಿಕ ಮತ್ತಷ್ಟು ನಟಿಯರಿಗೆ ತನಿಖೆ ಬಿಸಿ ತಟ್ಟಲಿದೆ ಎನ್ನಲಾಗಿದೆ.
ತಮ್ಮ ಜಾಲಕ್ಕೆ ಖ್ಯಾತನಾಮರ ಬದಲು ಎರಡನೇ ಹಂತದ ನಟಿಯರನ್ನೇ ಚಿನ್ನ ಕಳ್ಳ ಸಾಗಣೆದಾರರು ಗುರಿಯಾಗಿಸಿ ಬಳಸಿದ್ದಾರೆ. ಈ ನಟಿಯರಿಗೆ ಹಣದಾಸೆ ಅಥವಾ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಕೊಡಿಸುವ ಆಮಿಷವೊಡ್ಡಿ ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಕೊರಿಯರ್ ರೀತಿ ಬಳಸಿಕೊಂಡಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ.
ನಟಿ ರನ್ಯಾರಾವ್ ಮಾದರಿಯಲ್ಲೇ ಕಳೆದ ವರ್ಷ ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯ ಪತ್ನಿ ಚಿನ್ನ ಸಾಗಿಸುವಾಗ ಸಿಕ್ಕಿಬಿದ್ದಿದ್ದರು. ಬ್ಲ್ಯಾಕ್‌ಮೇಲ್ ಮಾಡಿ ಟೆಕ್ಕಿ ಪತ್ನಿಯನ್ನು ಕೃತ್ಯಕ್ಕೆ ಬಳಸಿಕೊಳ್ಳಲಾಗಿತ್ತು.
ಆದರೆ ರಾಜ್ಯದಲ್ಲಿ ನಟಿಯರಿಗೆ ಒಂದು ಬಾರಿಗೆ ಇಂತಿಷ್ಟು ಮೊತ್ತ ಕೊಡುವುದಾಗಿ ಹೇಳಿ ಚಿನ್ನ ಸಾಗಣೆಗೆ ಉಪಯೋಗಿಸಿರಬಹುದು. ಈ ನೆಟ್‌ವರ್ಕ್‌ನಲ್ಲಿ ಕಿರುತೆರೆ ನಟಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಪದೇ ಪದೆ ದುಬೈ ಪಯಣ ಏಕೆ?: ಕಳೆದ ಐದು ವರ್ಷಗಳಲ್ಲಿ ದುಬೈಗೆ ನಟ-ನಟಿಯರು ಹೆಚ್ಚಿನ ಪ್ರಯಾಣ ಮಾಡಿದ್ದಾರೆ. ಅದರಲ್ಲೂ ಕೊರೋನಾ ದುರಿತ ಕಾಲ ಮುಗಿದ ನಂತರ ಕೆಲವರ ದುಬೈ ಹಾರಾಟ ಹೆಚ್ಚಾಗಿದೆ. ಚಲನಚಿತ್ರ ಅಥವಾ ಕಿರುತೆರೆ ಧಾರವಾಹಿಗಳ ಚಿತ್ರೀಕರಣ ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಲ್ಲದಿದ್ದರೂ ಕೆಲ ನಟ-ನಟಿಯರು ಪದೇ ಪದೆ ದುಬೈಗೆ ಭೇಟಿ ನೀಡಿರುವುದು ಅನುಮಾನ ಮೂಡಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದುಬೈ ಭೇಟಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆ ನಟಿಯರು ಅಪ್‌ಲೋಡ್ ಮಾಡಿದ್ದ ಪೋಟೋ, ವಿಡಿಯೋ ಹಾಗೂ ರೀಲ್ಸ್‌ಗಳೇ ಪುರಾವೆ ಒದಗಿಸಿವೆ. ಪ್ರವಾಸದ ಕಾರಣ ಹೇಳಿದರೂ ವರ್ಷದಲ್ಲಿ ಒಂದೇ ಸ್ಥಳಕ್ಕೆ ನಾಲ್ಕೈದು ಬಾರಿ ಯಾರು ಪ್ರವಾಸಕ್ಕೆ ಹೋಗುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹೀಗಾಗಿ ಕಲಾವಿದೆಯರ ದುಬೈ ಭೇಟಿ ಕುರಿತು ಸಾಕಷ್ಟು ಅನುಮಾನ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ವ್ಯವಸ್ಥಿತ ಕಾರ್ಯನಿರ್ವಹಣೆ:
ಈ ಚಿನ್ನ ಕಳ್ಳ ಸಾಗಣೆ ಜಾಲವು ಸಂಘಟಿತವಾಗಿ ಕಾರ್ಯನಿರ್ವಹಿಸಿದೆ. ತನ್ನ ಕಾರ್ಯಸೂಚಿಯಲ್ಲಿ ರಹಸ್ಯ ಕಾಪಾಡಿಕೊಂಡಿದೆ. ದುಬೈಗೆ ತೆರಳುವ ನಟಿಯರ ಆಯ್ಕೆ ಸೇರಿ ಪ್ರತಿ ಹಂತದಲ್ಲೂ ಪ್ರತ್ಯೇಕವಾಗಿ ಆ ತಂಡದ ಸದಸ್ಯರು ಕೆಲಸ ಮಾಡಿದ್ದಾರೆ. ಆ ನಟಿಯರ ಪ್ರವಾಸದ ಖರ್ಚು-ವೆಚ್ಚ ಭರಿಸಿದ್ದಾರೆ. ಹವಾಲಾ ಮೂಲಕ ದುಬೈಗೆ ಹಣ ವರ್ಗಾವಣೆ ಮಾಡಿ ಅಲ್ಲಿ ಚಿನ್ನ ಖರೀದಿಸಿ ನಟಿಯರಿಗೆ ತಲುಪಿಸಿದ್ದಾರೆ. ಕಾಲು ಅಥವಾ ಸೊಂಟ ಸೇರಿ ತಮ್ಮ ದೇಹದ ವಿವಿಧ ಭಾಗಗಳಲ್ಲಿ ಚಿನ್ನ ಅಡಗಿಸಿ ಬೆಂಗಳೂರಿಗೆ ಆ ನಟಿಯರು ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಸೆಲಬ್ರಿಟಿ ನೆಪದಲ್ಲಿ ಬಚಾವ್:
ವಿಮಾನ ನಿಲ್ದಾಣದಲ್ಲಿ ದುಬೈಗೆ ತೆರಳುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲ ನಟಿಯರು ತಪಾಸಣೆಗೊಳಗಾಗಿದ್ದಾರೆ. ಆದರೆ ಅಲ್ಲಿಂದ ಮರಳುವಾಗ ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ತಪಾಸಣೆಯಿಂದ ತಪ್ಪಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ನಟಿಯರ ಪ್ರತ್ಯೇಕ ಪರಿಶೀಲನೆಗೆ ಸಿಬ್ಬಂದಿ ಹೋಗುವುದಿಲ್ಲ. ಈ ಅವಕಾಶವನ್ನು ಕೆಲವರು ದುರುಪಯೋಗಪಡಿಸಿಕೊಂಡಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.