ಸಾರಾಂಶ
ಬೆಂಗಳೂರು : ಕರ್ತವ್ಯನಿರತ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದಿರುವ ಘಟನೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ರಾಜ್ಯದಲ್ಲೂ ಶನಿವಾರ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿ ಸೇವೆ ಬಹಿಷ್ಕರಿಸಿ ವೈದ್ಯರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಹೀಗಾಗಿ ಶನಿವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆವರೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಓಪಿಡಿ ಸೇವೆಗಳಲ್ಲಿ ತೀವ್ರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ದೇಶಾದ್ಯಂತ ಐಎಂಎ ಕರೆ ನೀಡಿರುವ ಹೋರಾಟಕ್ಕೆ ಬೆಂಬಲವಾಗಿ ಕೆ.ಆರ್. ರಸ್ತೆಯ ಕೆಂಪೇಗೌಡ ಆಸ್ಪತ್ರೆಯಿಂದ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ಕಚೇರಿವರೆಗೆ (ಆಲೂರು ವೆಂಕಟರಾಯ ರಸ್ತೆ) ಬೃಹತ್ ಜಾಥಾ ನಡೆಯಲಿದೆ. ಈ ವೇಳೆ ಸಾವಿರಾರು ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರತಿಭಟನೆಗೆ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ), ಫನಾ ಬೆಂಬಲಿತ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಮಕ್ಕಳ ವೈದ್ಯರ ಸಂಘ, ಆರ್ಥೊಪಿಡಿಕ್ ಸಂಘ, ಮೆಡಿಕಲ್ ಕಾಲೇಜು ವೈದ್ಯರ ಸಂಘ, ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (ಕೆಎಆರ್‌ಡಿ) ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.
ಜತೆಗೆ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಉಳಿದ ಕಾಯಿಲೆಗಳಿಗೆ ಹೊರರೋಗಿ ಚಿಕಿತ್ಸೆ ದೊರೆಯುವುದಿಲ್ಲ ಎನ್ನಲಾಗಿದೆ.
ಯಾವ ಸೇವೆ ಇರುವುದಿಲ್ಲ?
- ಜ್ವರ, ತಲೆ ನೋವು, ಕೆಮ್ಮಿನಂತಹ ಸಾಮಾನ್ಯ ಕಾಯಿಲೆಗಳಿಗೆ ಓಪಿಡಿ ಸೇವೆ ಇಲ್ಲ
- ಡಯಾಲಿಸಿಸ್ ಇಲ್ಲ
- ಕ್ಲಿನಿಕ್ ಸೇವೆ, ಮಕ್ಕಳ ಓಪಿಡಿ, ದಂತ ಚಿಕಿತ್ಸೆ, ತುರ್ತು ಅಲ್ಲದ ಶಸ್ತ್ರಚಿಕಿತ್ಸೆಗಳು ಇಲ್ಲ
-----
ಏನೆಲ್ಲಾ ಸೇವೆ ಇರುತ್ತದೆ?
ತುರ್ತು ಸೇವೆ
ಔಷಧ ಅಂಗಡಿ
ಒಳ ರೋಗಿ ಸೇವೆ
ಹೆರಿಗೆ ಮತ್ತು ತುರ್ತು ಶಸ್ತ್ರಚಿಕಿತ್ಸೆ
-----
ನಮ್ಮ ಸಂಘದಲ್ಲಿರುವ 1.36 ಲಕ್ಷ ವೈದ್ಯರು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕೋರಿದ್ದೇವೆ. ವೈದ್ಯರಿಗೆ ಅಸುರಕ್ಷಿತ ವಾತಾವಣ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ವೈದ್ಯರ ಸುರಕ್ಷತೆಗೆ ತಕ್ಷಣ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು.
ಡಾ.ಎಸ್. ಶ್ರೀನಿವಾಸ್, ಅಧ್ಯಕ್ಷ, ಐಎಂಎ-ಕರ್ನಾಟಕ
------
ಪ್ರತಿಭಟನೆಗೆ ನಮ್ಮ ಆಕ್ಷೇಪವಿಲ್ಲ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಓಪಿಡಿ ಸೇವೆಯನ್ನು ಸಂಪೂರ್ಣ ಬಂದ್ ಮಾಡಬೇಡಿ. ಸಾರ್ವಜನಿಕರ ತುರ್ತು ಸೇವೆ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿ.
- ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಒಪಿಡಿ ಭೇಟಿ ಒಂದು ದಿನ ಮುಂದೂಡಿ:
ಶನಿವಾರ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಲಭ್ಯವಿರುವುದಿಲ್ಲ. ಹೀಗಾಗಿ
ದೂರದ ಊರಿನಿಂದ ಬೆಂಗಳೂರಿಗೆ ಬರುವುದಿದ್ದರೆ ಸಾಧ್ಯವಾದಷ್ಟು ಒಂದೆರಡು ದಿನ ಮುಂದೂಡುವುದು ಒಳಿತು. ಒಂದು ವೇಳೆ ಬೆಂಗಳೂರಿಗೆ ಬಂದರೂ ರೋಗಿಗಳು ಚಿಕಿತ್ಸೆ ದೊರೆಯದೆ ಇರಬಹುದು. ತುರ್ತು ಚಿಕಿತ್ಸಾ ಸಲಹೆ ಬೇಕಿರುವವರು ವೈದ್ಯರ ಜತೆ ಸಂಪರ್ಕ ಇಟ್ಟುಕೊಂಡು ಸಲಹೆಯಂತೆ ನಡೆದುಕೊಳ್ಳುವುದು ಉತ್ತಮ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ವೈದ್ಯರಿಗೆ ರಜೆ ರದ್ದು ಮಾಡಿದ ಸರ್ಕಾರ
ತುರ್ತು ಸೇವೆ ಹೊರತುಪಡಿಸಿ ಇತರೆ ವೈದ್ಯಕೀಯ ಸೇವೆಗಳನ್ನು ಆ.17ರಂದು ಸ್ಥಗಿತಗೊಳಿಸುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಆರೋಗ್ಯ ಸಚಿವರಿಗೆ ಪತ್ರ ನೀಡಿದೆ. ಇದರಿಂದ ರಾಜ್ಯಾದ್ಯಂತ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ವೈದ್ಯಕೀಯ ಸೇವೆಯು ವ್ಯತ್ಯಯವಾಗಿ ಸಾರ್ವಜನಿಕ ಆರೋಗ್ಯ ಸೇವೆಗೆ ಧಕ್ಕೆಯಾಗುವ ಸಾಧ್ಯತೆಯಿದೆ.
ಹೀಗಾಗಿ ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು, ಎಲ್ಲಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರ ತುರ್ತು ವೈದ್ಯಕೀಯ ಸೇವೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಈ ದಿನಾಂಕದಂದು ಯಾವುದೇ ವೈದ್ಯರಿಗೆ ರಜೆ ಮಂಜೂರು ಮಾಡಬಾರದು ಎಂದು ಆರೋಗ್ಯ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.