15 ದಿನ ಮೊದಲೇ ಮಳೆಗಾಲ ಶುರು ! 16 ವರ್ಷ ಬಳಿಕ ಅವಧಿಗೆ ಮುನ್ನ ಮುಂಗಾರು

| N/A | Published : May 25 2025, 06:13 AM IST

mp monsoon forecast 2025 heavy rainfall
15 ದಿನ ಮೊದಲೇ ಮಳೆಗಾಲ ಶುರು ! 16 ವರ್ಷ ಬಳಿಕ ಅವಧಿಗೆ ಮುನ್ನ ಮುಂಗಾರು
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ವಾಡಿಕೆಗಿಂತ ಬರೋಬ್ಬರಿ 15 ದಿನ ಮೊದಲೇ ರಾಜ್ಯಕ್ಕೆ ಮುಂಗಾರು ಆಗಮನವಾಗಿದೆ. ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಕೆಲವೆಡೆ ಶನಿವಾರದಿಂದಲೇ ಮುಂಗಾರು ಮಳೆ ಅಬ್ಬರ ಆರಂಭವಾಗಿದೆ.

 ಬೆಂಗಳೂರು : ಈ ಬಾರಿ ರಾಜ್ಯದ ಜನ ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..’ ಎಂಬ ಹಾಡು ಗುನುಗುವ ಪರಿಸ್ಥಿತಿ ಬಂದಿದೆ. ಯಾಕೆಂದರೆ ಈ ಬಾರಿ ವಾಡಿಕೆಗಿಂತ ಬರೋಬ್ಬರಿ 15 ದಿನ ಮೊದಲೇ ರಾಜ್ಯಕ್ಕೆ ಮುಂಗಾರು ಆಗಮನವಾಗಿದೆ. ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಕೆಲವೆಡೆ ಶನಿವಾರದಿಂದಲೇ ಮುಂಗಾರು ಮಳೆ ಅಬ್ಬರ ಆರಂಭವಾಗಿದೆ.

ಸಾಮಾನ್ಯವಾಗಿ ಜೂ.1ಕ್ಕೆ ಕೇರಳ ಕರಾವಳಿಗೆ ಅಪ್ಪಳಿಸುವ ಮುಂಗಾರು ಮಳೆ, ತದ ನಂತರ ಒಂದು ವಾರದಲ್ಲಿ ಕರ್ನಾಟಕಕ್ಕೆ ಕಾಲಿಡುತ್ತದೆ. ಆದರೆ ಈ ಬಾರಿ ಒಂದು ವಾರ ಮೊದಲು ಕೇರಳಕ್ಕೆ, ಎರಡು ವಾರ ಮೊದಲೇ ರಾಜ್ಯಕ್ಕೆ ಆಗಮಿಸಿದೆ. ವಿಶೇಷವೆಂದರೆ ಕೇರಳ ಹಾಗೂ ರಾಜ್ಯಕ್ಕೆ ಈ ಬಾರಿ ಒಂದೇ ದಿನ ಮುಂಗಾರು ಪ್ರವೇಶವಾಗಿದೆ.

ಕೇರಳ ಹಾಗೂ ಕರ್ನಾಟಕಕ್ಕೆ ಒಂದೇ ದಿನ ಮುಂಗಾರು ಆಗಮನ ಸಾಕಷ್ಟು ಬಾರಿ ಆಗಿದೆ. ಆದರೆ, ಈ ಬಾರಿ ಮಾತ್ರ ರಾಜ್ಯಕ್ಕೆ ಆಗಮಿಸಿದ ಮುಂಗಾರು ಮಳೆ ಕರಾವಳಿ, ಮಲೆನಾಡು ಹಾಗೂ ಒಳನಾಡು ಜಿಲ್ಲೆಗಳನ್ನು ಒಂದೇ ದಿನ ವ್ಯಾಪಿಸಿರುವುದು ವಿಶೇಷ. ಈ ಹಿಂದೆ ಒಟ್ಟಿಗೆ ಕೇರಳ-ಕರಾವಳಿಗೆ ಮುಂಗಾರು ಕಾಲಿಟ್ಟಾಗ ರಾಜ್ಯದ ಗಡಿ ಜಿಲ್ಲೆಗಳಿಗೆ ಮಾತ್ರ ಮಳೆ ಸೀಮಿತವಾಗಿರುತ್ತಿತ್ತು.

16 ವರ್ಷ ಬಳಿಕ:

2009ರ ಮೇ 23ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ನಿಗದಿತ ಅವಧಿಗಿಂತ ಮೊದಲೇ ಕೇರಳಕ್ಕೆ ಮುಂಗಾರು ಆಗಮನವಾಗಿದೆ. ಬರೋಬ್ಬರಿ 16 ವರ್ಷದ ಬಳಿಕ ನಿರೀಕ್ಷೆಗಿಂತ ಮೊದಲೇ ಮುಂಗಾರು ಪದಾರ್ಪಣೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಬಾರಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದೆ ಎಂದು ಇಲಾಖೆ ಏಪ್ರಿಲ್‌ನಲ್ಲೇ ಮುನ್ಸೂಚನೆ ನೀಡಿತ್ತು.

ಈ ಜಿಲ್ಲೆಗಳಿಗೆ ಮುಂಗಾರು:

ಮುಂಗಾರು ಪ್ರವೇಶದಿಂದ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ, ಮೈಸೂರು, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ, ಮಲೆನಾಡಿನ ಕೊಡಗು, ಮಂಡ್ಯದ ಕೆಲ ಭಾಗದಲ್ಲಿ ಮಳೆಯಾದ ವರದಿಯಾಗಿದೆ. ರಾಜ್ಯಕ್ಕೆ ಮುಂಗಾರು ಪ್ರವೇಶವಾಗುತ್ತಿದಂತೆ ರಾಜಧಾನಿ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ವಾತಾವರಣವೇ ಬದಲಾವಣೆಯಾಗಿದೆ. ಬೀಸುವ ಗಾಳಿಯಲ್ಲಿ ತೇವಾಂಶ ಹೆಚ್ಚಾಗಿದೆ. ಮೋಡಗಳ ಚಲನೆ ಹೆಚ್ಚಾಗಿರುವುದು ಕಂಡು ಬಂದಿದೆ. ಸಣ್ಣ ಪ್ರಮಾಣದ ಸೋನೆ ಮಳೆ ಸಹ ಬೆಂಗಳೂರಿನಲ್ಲಿ ಸುರಿದಿದೆ.

ಕರಾವಳಿ, ಮಲೆನಾಡಲ್ಲಿ ಹೆಚ್ಚು ಮಳೆ:

ಮುಂಗಾರು ಆಗಮನದಿಂದ ಮುಂದಿನ ಎರಡ್ಮೂರು ದಿನ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದ ಗೋವಾ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪ್ರಭಾವದಿಂದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಈ ಹಿಂದಿನ ಮುಂಗಾರು ಪ್ರವೇಶದ ವಿವರ

ವರ್ಷ ಮುಂಗಾರು ಆಗಮನ

2019 ಜೂ.8

2020 ಜೂ.1

2021 ಜೂ.3

2022 ಜೂ.29

2023 ಜೂ.8

2024 ಮೇ 31

2025 ಮೇ 24

- ಸಾಮಾನ್ಯವಾಗಿ ಜೂ.1ರಂದು ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶಿಸಿ ಭರ್ಜರಿ ಮಳೆ ಸುರಿಸುತ್ತವೆ

- ಅದಾದ ಒಂದು ವಾರದ ನಂತರ ಕರಾವಳಿ ಮೂಲಕ ರಾಜ್ಯಕ್ಕೆ ಮುಂಗಾರು ಮಾರುತಗಳ ಆಗಮನವಾಗುತ್ತೆ

- ಈ ಬಾರಿ ಒಂದು ವಾರ ಮೊದಲೇ ಕೇರಳಕ್ಕೆ ಹಾಗೂ 2 ವಾರ ಮೊದಲೇ ರಾಜ್ಯಕ್ಕೆ ಮಳೆ ಮಾರುತ ಬಂದಿವೆ

- ವಿಶೇಷವೆಂದರೆ, ಕೇರಳ ಹಾಗೂ ಕರ್ನಾಟಕ ರಾಜ್ಯದಲ್ಲಿ ಒಂದೇ ಬಾರಿಗೆ ಮುಂಗಾರು ಮಳೆ ಆರಂಭವಾಗಿದೆ

- ಕೇರಳ- ಕರ್ನಾಟಕ ರಾಜ್ಯಗಳಿಗೆ ಒಂದೇ ದಿನ ಮುಂಗಾರು ಬಂದ ನಿದರ್ಶನಗಳು ಈ ಹಿಂದೆ ಕೂಡ ಇವೆ

- ಆದರೆ ಈ ಬಾರಿ ಮಾತ್ರ ಕರಾವಳಿ, ಮಲೆನಾಡು ಜತೆಗೆ ಮಲೆನಾಡು ಜಿಲ್ಲೆಗಳನ್ನೂ ಮುಂಗಾರು ಪ್ರವೇಶಿಸಿದೆ

- ಗಡಿ ಜಿಲ್ಲೆಗಳಿಗೆ ಸೀಮಿತವಾಗಿರುತ್ತಿದ್ದ ಮಳೆ ಈ ಸಲ ಚಾ.ನಗರ, ಮೈಸೂರು, ಮಂಡ್ಯ, ಕೊಡಗಿನಲ್ಲೂ ಆಗಿದೆ

- ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯಲ್ಲಿನ ತೇವಾಂಶ ಹೆಚ್ಚಳವಾಗಿದ್ದು, ಮೋಡಗಳ ಚಲನೆಯೂ ಅಧಿಕವಾಗಿದೆ

ಅವಧಿ ಪೂರ್ವ ಮುಂಗಾರು ಪ್ರವೇಶಕ್ಕೆ ಕಾರಣ ಏನು?

ಈ ಬಾರಿ ಮುಂಗಾರು ಮಾರುತಗಳು ಅಂಡಮಾನ್‌ ಬಳಿ ಆಗಮಿಸಿದಾಗಿನಿಂದ ಈವರೆಗೂ ಪ್ರಬಲವಾಗಿವೆ. ಜತೆಗೆ, ಮೇ ತಿಂಗಳಲ್ಲಿ ಹಲವು ಮೇಲ್ಮೈ ಸುಳಿಗಾಳಿ ಮತ್ತು ಟ್ರಫ್‌ನಂತಹ ಪೂರಕ ವಾತಾವರಣ ಇರುವುದು ಮುಂಗಾರು ನಿಗದಿತ ಅವಧಿಗಿಂತ ಮೊದಲೇ ರಾಜ್ಯಕ್ಕೆ ಕಾಲಿಡಲು ಕಾರಣ ಎಂದು ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

Read more Articles on