ಸಾರಾಂಶ
ವಾಡಿಕೆಗಿಂತ ನಾಲ್ಕು ದಿನ ಮೊದಲೇ ಇಡೀ ರಾಜ್ಯವನ್ನು ಮುಂಗಾರು ವ್ಯಾಪಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು : ವಾಡಿಕೆಗಿಂತ ನಾಲ್ಕು ದಿನ ಮೊದಲೇ ಇಡೀ ರಾಜ್ಯವನ್ನು ಮುಂಗಾರು ವ್ಯಾಪಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 1ರ ಶನಿವಾರ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಇದಾದ ಕೇವಲ ಐದು ದಿನದಲ್ಲಿ ಇಡೀ ರಾಜ್ಯವನ್ನು ವ್ಯಾಪಿಸಿದ್ದು, ಈ ಮೂಲಕ ವಾಡಿಕೆಗಿಂತ ನಾಲ್ಕು ದಿನ ಮೊದಲೇ ಇಡೀ ರಾಜ್ಯವನ್ನು ವ್ಯಾಪಿಸಿದೆ. ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, 6 ರಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಜೂನ್ 9 ರಿಂದ ಮಳೆ ಪ್ರಮಾಣ ಮತ್ತೆ ಹೆಚ್ಚಾಗಲಿದೆ. ಮುಂದಿನ ಎರಡ್ಮೂರು ದಿನ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ರಾಜ್ಯದಲ್ಲಿ ಜೂನ್ 13ರ ವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ ಪ್ರಕಾರ, ಕಲಬುರಗಿಯಲ್ಲಿ ಅತಿ ಹೆಚ್ಚು 7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಮಾಗಡಿ 6, ಬೀದರ್‌ನ ಮಂಠಾಳ ಹಾಗೂ ಕೋಲಾರದ ರಾಯಲ್ಬಾಡುನಲ್ಲಿ ತಲಾ 5, ಮಧುಗಿರಿ, ಅಜ್ಜಂಪುರ, ಬೆಳ್ಳೂರಿನಲ್ಲಿ ತಲಾ 4, ಮಣಿ, ಮಂಕಿ, ನಾರಾಯಣಪುರ, ಸಿ.ಆರ್.ಪಾಟ್ನಾ ಹಾಗೂ ಹಿರಿಯೂರಿನಲ್ಲಿ ತಲಾ 3 ಸೆಂ.ಮೀ ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.