ಮುಡಾ ಕೇಸ್‌: ಏಕಪೀಠದ ಆದೇಶ ಪ್ರಶ್ನಿಸಿ ಸಿಎಂ ಮೇಲ್ಮನವಿ : ರಾಜ್ಯಪಾಲರಿಗೆ ಹೈಕೋರ್ಟ್ ನೋಟಿಸ್‌

| Published : Dec 06 2024, 07:57 AM IST

Highcourt

ಸಾರಾಂಶ

ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣ ಕುರಿತು ಪೊಲೀಸ್‌ ತನಿಖೆಗೆ ಅನುಮತಿಸಿದ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ ಸಂಬಂಧ ರಾಜ್ಯಪಾಲರ ಕಚೇರಿಗೆ ವಿಭಾಗೀಯ ಪೀಠ   ನೋಟಿಸ್‌ ಜಾರಿಗೊಳಿಸಿ ತು.

ಬೆಂಗಳೂರು : ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣ ಕುರಿತು ಪೊಲೀಸ್‌ ತನಿಖೆಗೆ ಅನುಮತಿಸಿದ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ ಸಂಬಂಧ ರಾಜ್ಯಪಾಲರ ಕಚೇರಿಗೆ ವಿಭಾಗೀಯ ಪೀಠ ಗುರುವಾರ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು 2025ರ ಜ.25ಕ್ಕೆ ಮುಂದೂಡಿತು.

ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಡಾ ವಶಪಡಿಸಿಕೊಂಡ ವಿವಾದಿತ 3.14 ಎಕರೆ ಜಮೀನಿನ ಮೂಲ ಮಾಲೀಕರಾದ ಜೆ.ದೇವರಾಜು ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೆ, ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ಸಂಬಂಧ ತಮಗೆ ನೋಟಿಸ್‌ ಜಾರಿ ಮಾಡಿದ ಮತ್ತು ಪ್ರಕರಣ ಕುರಿತ ತನಿಖೆಯ ದಾಖಲೆಗಳನ್ನು ಸಲ್ಲಿಸುವಂತೆ ಲೋಕಾಯುಕ್ತ ಸಂಸ್ಥೆಗೆ ನಿರ್ದೇಶಿಸಿ ಏಕ ಸದಸ್ಯ ನ್ಯಾಯಪೀಠ 2024ರ ನ.5ರಂದು ಹೊರಡಿಸಿರುವ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ದೇವರಾಜು ಅವರು ಮತ್ತೊಂದು ಮೇಲ್ಮನವಿ ಸಲ್ಲಿಸಿದ್ದಾರೆ.

ಈ ಮೂರು ಮೇಲ್ಮನವಿಗಳು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿದ್ದವು. ಕೆಲಕಾಲ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮೇಲ್ಮನವಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ಕಚೇರಿ ವಿಶೇಷ ಕಾರ್ಯದರ್ಶಿ, ಅಲ್ಲದೆ, ಖಾಸಗಿ ದೂರುದಾರರಾಗಿರುವ ಟಿ.ಜೆ.ಅಬ್ರಾಹಾಂ, ಸ್ನೇಹಮಯಿ ಕೃಷ್ಣ ಮತ್ತು ಎಸ್‌.ಪಿ.ಪ್ರದೀಪ್‌ ಕುಮಾರ್‌ ಅವರಿಗೂ ಇದೇ ವೇಳೆ ವಿಭಾಗೀಯ ನ್ಯಾಯಪೀಠ ನೋಟಿಸ್‌ ನೀಡಿದೆ.

ದೇವರಾಜು ಅವರ ಎರಡೂ ಮೇಲ್ಮನವಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ಕಚೇರಿ ವಿಶೇಷ ಕಾರ್ಯದರ್ಶಿ, ಅಬ್ರಹಾಂ, ಸ್ನೇಹಮಯಿ ಕೃಷ್ಣ, ಪ್ರದೀಪ್‌ ಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ಬೆಂಗಳೂರು ವಲಯದ ಸಿಬಿಐ ನಿರ್ದೇಶಕರು, ಮೈಸೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮೈಸೂರು ವಿಜಯನಗರ ಪೊಲೀಸ್‌ ಠಾಣೆ ಅಧಿಕಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಮತ್ತು ಬಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಜ.25ಕ್ಕೆ ಮುಂದೂಡಿತು.

ಈ ಮಧ್ಯೆ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ತಕರಾರು ಅರ್ಜಿಯಿಂದ ನನಗೆ ಯಾವುದೇ ರೀತಿ ತೊಂದರೆ ಆಗದಂತೆ ಏಕಸದಸ್ಯ ನ್ಯಾಯಪೀಠಕ್ಕೆ ನಿರ್ದೇಶನ ನೀಡಬೇಕು ಎಂಬ ಜೆ.ದೇವರಾಜು ಮನವಿಯನ್ನು ಈ ಹಂತದಲ್ಲಿ ಮಾನ್ಯ ಮಾಡಲಾಗದು ಎಂದು ವಿಭಾಗೀಯ ಪೀಠ ಮೌಖಿಕವಾಗಿ ಸ್ಪಷ್ಟಪಡಿತು.

ಮೇಲ್ಮನವಿಗಳ ಸಂಬಂಧ ಎಲ್ಲ ಪಕ್ಷಗಾರರ ವಾದ ಆಲಿಸದೆ ಮತ್ತು ನೋಟಿಸ್‌ ನೀಡದೆ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ. ಸಿಬಿಐ ತನಿಖೆ ಕೋರಿರುವ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ವಿಭಾಗೀಯ ಪೀಠ, ಈ ಕುರಿತು ಏಕಸದಸ್ಯ ಪೀಠಕ್ಕೆ ಮೇಲ್ಮನವಿದಾರ ದೇವರಾಜು ಮನವಿ ಸಲ್ಲಿಸಬಹುದು ಎಂದು ಸಲಹೆ ನೀಡಿತು.

ಇದಕ್ಕೂ ಮುನ್ನ ದೇವರಾಜು ಪರ ಹಾಜರಾಗಿದ್ದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ದುಷ್ಯಂತ ದವೆ, ಮುಡಾ ಪ್ರಕರಣವನ್ನು ಸಿಬಿಐ ತನಿಖೆ ವಹಿಸುವಂತೆ ಕೋರಿರುವ ಅರ್ಜಿ ಕುರಿತು ಏಕಸದಸ್ಯ ನ್ಯಾಯಪೀಠವು ದೇವರಾಜುಗೆ ನೋಟಿಸ್‌ ಜಾರಿಗೊಳಿಸಿದೆ. ತನಿಖೆ ನಡೆಸುತ್ತಿರುವ ಲೋಕಾಯುಕ್ತರಿಗೆ ತನಿಖಾ ವರದಿ ಸಲ್ಲಿಸಲೂ ಸೂಚಿಸಿದೆ. ದೇವರಾಜುಗೆ ಈಗ 80 ವರ್ಷ. ಅವರ ವಾದವನ್ನು ಆಲಿಸದೆಯೇ ಕ್ರಿಮಿನಲ್‌ ಪ್ರಕರಣ ಎದುರಿಸಲು ಏಕಸದಸ್ಯ ನ್ಯಾಯಪೀಠ ನಿರ್ದೇಶಿಸಿದೆ. ಸ್ನೇಹಮಯಿ ಕೃಷ್ಣ ಇಂದು ಸಿಬಿಐ ತನಿಖೆಗೆ ಕೊಡಿ ಎಂದು ಅರ್ಜಿ ಹಾಕಿಕೊಂಡಿದ್ದಾರೆ. ನಾಳೆ ಇ.ಡಿ.ಗೆ ಕೊಡಿ ಎಂದು ಕೇಳುತ್ತಾರೆ. ದೇವರಾಜು ಒಬ್ಬ ಬಡಪಾಯಿ. ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ ಅಥವಾ ಈ ಕ್ರಿಮಿನಲ್ ಆರೋಪಗಳ ಭಾಗೀದಾರರೂ ಅಲ್ಲ. ಈ ಅರ್ಜಿಯ ವಿಚಾರಣೆ ಡಿ.10ಕ್ಕೆ ಏಕಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆಗೆ ಬರಲಿದೆ. ಅಂದು ಏನಾಗುವುದೊ ತಿಳಿಯದು. ಹಾಗಾಗಿ, ಮುಂಜಾಗ್ರತೆಯಾಗಿ ದೇವರಾಜುಗೆ ರಕ್ಷಣೆ ನೀಡಿ ಅಗತ್ಯ ಆದೇಶ ಹೊರಡಿಸಬೇಕು ಎಂದು ಕೋರಿದರು.

ಸ್ನೇಹಮಯಿ ಕೃಷ್ಣ ಪರ ಪರ ವಕೀಲರು, ಸಿಬಿಐ ತನಿಖೆ ಕೋರಲಾಗಿರುವ ಅರ್ಜಿ ಸಂಬಂಧ ಏಕಸದಸ್ಯ ನ್ಯಾಯಪೀಠ ಕೇವಲ ನೋಟಿಸ್ ಜಾರಿ ಮಾಡಿದೆ. ಈ ಹಂತದಲ್ಲಿ ತಮಗೆ ಏನಾದರೂ ಆಗಿಬಿಡುತ್ತದೆ ಎಂಬ ಭೀತಿಯಿಂದ ದೇವರಾಜು ರಕ್ಷಣೆ ಕೋರುವಂತಹ ಯಾವುದೇ ಬೆಳವಣಿಗೆಯಾಗಿಲ್ಲ. ಹೀಗಾಗಿ, ಅವರ ಮನವಿ ಪುರಸ್ಕರಿಸಬಾರದು ಎಂದು ಆಕ್ಷೇಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ರಾಜ್ಯಪಾಲರ ಅನುಮತಿಯನ್ನು ಎತ್ತಿ ಹಿಡಿಯುವ ಮೂಲಕ ಏಕಸದಸ್ಯ ನ್ಯಾಯಪೀಠವು ಪ್ರಮಾದ ಎಸಗಿದೆ. ಆ ಕುರಿತು ನ್ಯಾಯಪೀಠಕ್ಕೆ ವಿವರಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌, ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಸೆಕ್ಷನ್‌ 17ಎ ಅಡಿ ಮುಖ್ಯಮಂತ್ರಿಯ ವಿರುದ್ಧ ತನಿಖೆಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಅಧಿಕಾರವೇ ಇಲ್ಲ. ಈ ಪ್ರಕರಣ ರಾಜ್ಯಾಡಳಿತಕ್ಕೆ ಸಂಬಂಧಿಸಿದ ಸಂಗತಿ. ಈ ರೀತಿ ಮುಖ್ಯಮಂತ್ರಿ, ಸಚಿವರ ವಿರುದ್ಧ ತನಿಖೆಗೆ ಅನುಮತಿಸುತ್ತಾ ಹೋದರೆ ಅವ್ಯವಸ್ಥೆ ಸೃಷ್ಟಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.