ಸಾರಾಂಶ
ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂದೆಯ ನಡುವಿನ ವೈಮನಸ್ಸು ತಾರಕಕ್ಕೆ ಏರಿದೆ.
ಕುಂದಾಪುರ : ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂದೆಯ ನಡುವಿನ ವೈಮನಸ್ಸು ತಾರಕಕ್ಕೆ ಏರಿದೆ. ಪುತ್ರಿಯ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಆಕೆಯ ತಂದೆ ಬಾಲಕೃಷ್ಣ ನಾಯಕ್ ಈಗ ಪುತ್ರಿಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪುತ್ರಿಯ ವಿರುದ್ಧ ಕೊಲೆ ಬೆದರಿಕೆ ಆರೋಪ ಹೊರಿಸಿರುವ ಬಾಲಕೃಷ್ಣ ನಾಯಕ್, ತನ್ನ ಕೊಲೆಗೆ ಮಗಳು ಸುಪಾರಿ ನೀಡಿರುವುದಾಗಿ ಕುಂದಾಪುರ ಠಾಣೆಗೆ ವಾರದ ಹಿಂದೆಯೇ ದೂರು ನೀಡಿದ್ದಾರೆ. ಆದರೆ ಕುಂದಾಪುರ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲವೆಂದು ತಿಳಿದುಬಂದಿದೆ.
ನನ್ನ ಆಸ್ತಿ, ಭೂಮಿಗಾಗಿ ಮಗಳು ನನ್ನನ್ನು ಕೊಲ್ಲಬಹುದು, ರಕ್ಷಣೆ ನೀಡಿ ಎಂದು ಅವರು ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಚೈತ್ರಾ-ಶ್ರೀಕಾಂತ್ ಮದುವೆಗೆ ತಾನು ಒಪ್ಪಿರಲಿಲ್ಲ. ಬೇರೆ ಹುಡುಗನನ್ನು ಮದುವೆ ಆಗಬೇಕಾದರೆ ₹5 ಲಕ್ಷ ನಗದು ನೀಡಲು ಒತ್ತಾಯಿಸಿದ್ದ ಆಕೆ, ಮದುವೆಗೆ ಬರದೇ ಹೋದರೆ ಭೂಗತ ದೊರೆಗಳ ಮೂಲಕ ಕೊಲ್ಲುವ ಬೆದರಿಕೆ ಹಾಕಿದ್ದಳು ಎಂದೆಲ್ಲ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.