ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯು ಈ ಬಾರಿ ಹಲವು ವೈಶಿಷ್ಟ್ಯಗಳೊಂದಿಗೆ ವರ್ಣರಂಜಿತವಾಗಿ ಬುಧವಾರ ನಡೆಯಿತು. ಲಕ್ಷಾಂತರ ಮಂದಿ ಈ ವೈಭವದ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

 ಅಂಶಿ ಪ್ರಸನ್ನಕುಮಾರ್‌

 ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯು ಈ ಬಾರಿ ಹಲವು ವೈಶಿಷ್ಟ್ಯಗಳೊಂದಿಗೆ ವರ್ಣರಂಜಿತವಾಗಿ ಬುಧವಾರ ನಡೆಯಿತು. ಲಕ್ಷಾಂತರ ಮಂದಿ ಈ ವೈಭವದ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಇದೇ ಮೊದಲ ಬಾರಿಗೆ ಭಾರತೀಯ ಸೇನೆ, ವಾಯುಪಡೆ, ನೌಕಾಪಡೆಯ ಸ್ತಬ್ಧಚಿತ್ರಗಳು, ಭೂಸೇನೆ ಹಾಗೂ ನೌಕಾದಳದ ಬ್ಯಾಂಡ್‌ ಭಾಗವಹಿಸಿದ್ದವು. ಕನ್ನಡ ಚಿತ್ರರಂಗದ ನಟ- ನಟಿಯರು ಎರಡು ವಾಹನಗಳಲ್ಲಿ, ರಾಜ್ಯದ ಕ್ರೀಡಾ ಸಾಧಕರು ಒಂದು ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ, ಮತ್ತಷ್ಟು ರಂಗು ತಂದರು. ಈ ಹಿಂದೆ ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರು ಬಿ.ಎಸ್‌.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪಂಜಿನ ಕವಾಯತಿನಲ್ಲಿ ಭಾಗಿಯಾಗಿದ್ದರು. ಆದರೆ, ಇದೇ ಪ್ರಥಮ ಬಾರಿಗೆ ಮುಖ್ಯಮಂತ್ರಿಗಳಾದ ತೆಲಂಗಾಣ ರೇವಂತ್‌ರೆಡ್ಡಿ, ಕೇರಳದ ವಿ.ಡಿ. ಸತೀಶನ್‌ ಅವರು ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದಲ್ಲದೇ ವಿಶೇಷ ವೇದಿಕೆ ಏರಿ ಕರ್ನಾಟಕ ಸಿಎಂ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಕೂಡ ಮಾಡಿದರು.

ಅಲ್ಲದೇ ಸಿಎಂ ಶಿವಕುಮಾರ್‌ ಅವರ ಪತ್ನಿ ಉಷಾ ಅವರು ಕೂಡ ವಿಶೇಷ ವೇದಿಕೆ ಏರಿ, ಪುಷ್ಪಾರ್ಚನೆಯಲ್ಲಿ ಭಾಗಿಯಾದರು. ಈವರೆಗೆ ಯಾವುದೇ ಮುಖ್ಯಮಂತ್ರಿಯ ಪತ್ನಿ ಪುಷ್ಪಾರ್ಚನೆಯಲ್ಲಿ ಭಾಗಿಯಾಗಿರಲಿಲ್ಲ. ಕೇವಲ ಅರಮನೆ ಉತ್ತರ ದ್ವಾರದಲ್ಲಿ ನಂದಿಧ್ವಜ ಪೂಜೆ ಕಾಲಕ್ಕೆ ಹಾಜರಿರುತ್ತಿದ್ದರು.

ನಂದಿಧ್ವಜಕ್ಕೆ ಪೂಜೆ:

ಅರಮನೆಯ ಉತ್ತರದಲ್ಲಿರುವ ‘ಬಲರಾಮ’ ದ್ವಾರದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಮಧ್ಯಾಹ್ನ 1.36ರಿಂದ 1.56 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿಸಿದರು. ಅಲ್ಲಿಂದ ತೆರೆದ ಜೀಪಿನಲ್ಲಿ ಅರಮನೆ ಆವರಣಕ್ಕೆ ಬಂದು ಆಸೀನರಾದರು.

ನಿಶಾನೆ ಆನೆ ‘ಅಭಿಮನ್ಯು’, ನೌಫತ್‌ ಆನೆ ‘ಗೋಪಿ’, ಸಾಲಾನೆಗಳಾದ ಮಹೇಂದ್ರ, ಲಕ್ಷ್ಮಿ, ಶ್ರೀರಾಮ, ಚೈತ್ರಾ, ಸುಗ್ರೀವ, ಶ್ರೀಕಂಠ ಮತ್ತು ಏಕಲವ್ಯ ಸಾಗಿದವು. ಈ ಎಲ್ಲಾ ಆನೆಗಳಿಗೂ ಸಿಎಂ ಡಿ.ಕೆ.ಶಿವಕುಮಾರ್‌ ಪುಷ್ಪಾರ್ಚನೆ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಅಲ್ಲದೇ ಕನಕಪುರದಿಂದ ಬಂದಿದ್ದ ಎರಡು ಜೋಡಿ ಹಳ್ಳಿಕಾರ್‌ ಎತ್ತುಗಳ ಬಳಿ ತೆರಳಿ, ಆಶೀರ್ವಾದ ಪಡೆದರು.

ವಿವಿಧ ಸಾಂಸ್ಕೃತಿಕ, ಜಾನಪದ ಕಲಾ ತಂಡಗಳು, ಸ್ತಬ್ಧಚಿತ್ರಗಳು ಒಂದರ ಹಿಂದೆ ಒಂದರಂತೆ ಸಾಗಿದವು. ಕೊನೆಯಲ್ಲಿ ಇಂಗ್ಲಿಷ್‌ ಬ್ಯಾಂಡ್‌, ಪೊಲೀಸ್‌ ಅಶ್ವದಳ, ನಾದಸ್ವರ ನಂತರ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಗಜರಾಜ ‘ಪ್ರಶಾಂತ’ ಹೊತ್ತು ಸಂಗಾತಿಗಳಾದ ‘ಕಾವೇರಿ’ ಹಾಗೂ ‘ರೂಪಾ’ ಜೊತೆ ಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಾ ಅರಮನೆ ಆವರಣದ ವಿಶೇಷ ವೇದಿಕೆ ಎದುರು ಬಂದ. ಸಂಜೆ 4.10ರಿಂದ 4.35 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಿಸಬೇಕಿತ್ತು. ಡಿ.ಕೆ.ಶಿವಕುಮಾರ್‌ ಅವರು ನಿಗದಿತ ಮುಹೂರ್ತದಲ್ಲೇ ಅಂದರೆ 4.29ಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಅರಮನೆ ಅಂಗಳದಲ್ಲಿ ಸೇರಿದ್ದ ಸಹಸ್ರಾರು ಮಂದಿ ಅಂಬಾರಿಯಲ್ಲಿದ್ದ ನಾಡದೇವತೆ ಚಾಮುಂಡೇಶ್ವರಿ ವಿಗ್ರಹ ಕಂಡು, ಭಕ್ತಿ ಪರವಶರಾಗಿ ಜೈಕಾರ ಹಾಕಿದರು.

ಪುಷ್ಪಾರ್ಚನೆ ಆಗುತ್ತಿದ್ದಂತೆಯೇ 21 ಸುತ್ತು ಕುಶಾಲತೋಪು

ಪುಷ್ಪಾರ್ಚನೆ ಆಗುತ್ತಿದ್ದಂತೆಯೇ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಿ, ರಾಷ್ಟ್ರಗೀತೆ ನುಡಿಸಲಾಯಿತು. ನಂತರ ಅಂಬಾರಿ ಆನೆಯು ಪೊಲೀಸ್‌ ಅಶ್ವದಳದ ಬೆಂಗಾವಲಿನಲ್ಲಿ ಸಾಗಿ, ರಾಜರ ಕಾಲದ ಗತವೈಭವವನ್ನು ನೆನಪಿಸಿತು.

ಮೆರವಣಿಗೆಯು ಅರಮನೆಯಿಂದ ಸಂಪೂರ್ಣವಾಗಿ ಹೊರಗೆ ಹೋಗಲು ಸುಮಾರು ಎರಡು ತಾಸು ಬೇಕಾಯಿತು. ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಸಯ್ಯಾಜಿರಾವ್‌ರಸ್ತೆ, ಆಯುರ್ವೇದ ಕಾಲೇಜು ವೃತ್ತ, ನ್ಯೂ ಸಯ್ಯಾಜಿರಾವ್‌ ರಸ್ತೆ, ಹೈವೇ ವೃತ್ತದ ಮೂಲಕ ಐದು ಕಿ.ಮೀ. ದೂರದ ಬನ್ನಿಮಂಟಪ ತಲುಪಿತು. ಅರಮನೆ ಆವರಣದಲ್ಲಿ ಮಾತ್ರವಲ್ಲದೇ ಮೆರವಣಿಗೆ ಸಾಗಿದ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ನಿಂತು, ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಸಂಜೆ ಬನ್ನಿಮಂಟಪದಲ್ಲಿ ಚಿತ್ತಾಕರ್ಷಕ ಪಂಜಿನ ಕವಾಯತು ನಡೆಯಿತು. ರಾಜ್ಯಪಾಲೆ ಡಾ। ಸುಧಾ ಯಾದವ್‌ ಗೌರವ ವಂದನೆ ಸ್ವೀಕರಿಸಿದರು. ಇದರೊಂದಿಗೆ ಕಳೆದ 11 ದಿನಗಳಿಂದ ನಡೆಯತ್ತಿದ್ದ ದಸರಾ ಮಹೋತ್ಸವಕ್ಕೆ ತೆರೆ ಬಿದ್ದಿತು.