ಬೆಂಗಳೂರು ಏರ್ಪೋರ್ಟ್‌ನಲ್ಲೇ ನಮಾಜ್

| N/A | Published : Nov 11 2025, 10:18 AM IST

namaz in KIAL Airport

ಸಾರಾಂಶ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2ರಲ್ಲಿ ಇತ್ತೀಚೆಗೆ ಮುಸಲ್ಮಾನರು ಸಾಮೂಹಿಕವಾಗಿ ನಮಾಜ್ ಮಾಡಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ

 ದೇವನಹಳ್ಳಿ :  ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2ರಲ್ಲಿ ಇತ್ತೀಚೆಗೆ ಮುಸಲ್ಮಾನರು ಸಾಮೂಹಿಕವಾಗಿ ನಮಾಜ್ ಮಾಡಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರ ಬೆನ್ನ ಹಿಂದೆಯೇ, ಸಾರ್ವಜನಿಕ ಸ್ಥಳದಲ್ಲಿ, ಅದರಲ್ಲೂ ವಿಶೇಷವಾಗಿ, ಬಿಗಿ ಭದ್ರತೆಯ ಜನನಿಬಿಡ ಏರ್‌ಪೋರ್ಟ್‌ನಲ್ಲಿ ನಮಾಜ್‌ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಮೆಕ್ಕಾಗೆ ಪ್ರಯಾಣಿಸುತ್ತಿದ್ದವರನ್ನು ಬೀಳ್ಕೊಡಲು ಬಂದಿದ್ದವರೇ ಈ ಸಾಮೂಹಿಕ ನಮಾಜ್‌ನಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಏರ್‌ಪೋರ್ಟ್‌ನ ಒಳಭಾಗದಲ್ಲೇ ಪ್ರಾರ್ಥನಾ ಕೊಠಡಿಗೆ ವ್ಯವಸ್ಥೆ ಇದ್ದರೂ, ಕೆಲವರು ಸಾರ್ವಜನಿಕ ಸ್ಥಳದಲ್ಲಿ ಸಾಮೂಹಿಕವಾಗಿ ನಮಾಜ್‌ ಮಾಡಿದ್ದಾರೆ.

ಈ ಘಟನೆ ಕುರಿತು ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ. ಅತಿ ಸೂಕ್ಷ್ಮ ಭದ್ರತಾ ಪ್ರದೇಶವಾಗಿರುವ ಏರ್‌ಪೋರ್ಟ್‌ನಲ್ಲಿ ಇಂತಹ ಸಾಮೂಹಿಕ ಪ್ರಾರ್ಥನೆಗೆ ಅನುಮತಿ ನೀಡಿದ್ದು ಯಾರು? ಕೆಲವರು, ‘ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಕೇಳುತ್ತಾರೆ. ಆದರೆ, ಏರ್‌ಪೋರ್ಟ್‌ನಲ್ಲಿ ಸಾಮೂಹಿಕ ನಮಾಜ್‌ಗೆ ಅನುಮತಿ ಕೊಟ್ಟವರು ಯಾರು? ಏರ್‌ಪೋರ್ಟ್‌ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳು ಈ ವೇಳೆ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ?’ ಎಂದು ಪ್ರಶ್ನಿಸುತ್ತಿದ್ದಾರೆ.

ಇನ್ನು ಕೆಲವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಸಚಿವ ಪ್ರಿಯಾಂಕ್‌ ಖರ್ಗೆಯವರೇ, ಇದಕ್ಕೆ ನೀವೇನು ಹೇಳುತ್ತೀರಿ. ಇದರ ಬಗ್ಗೆ ಸರ್ಕಾರದ ನಿಲುವು ಏನು?’ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಬಿಜೆಪಿಯೇ ತಡೆ ತಂದಿದ್ದು: ಖರ್ಗೆ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ ಎಂದು ನಿಯಮ ತಂದಿದ್ದು ಕಾಂಗ್ರೆಸ್‌ ಸರ್ಕಾರ. ಆದರೆ, ಅದಕ್ಕೆ ಕೋರ್ಟ್‌ನಿಂದ ಬಿಜೆಪಿಯೇ ತಡೆ ತಂದಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಾರ್ಥನೆಗಾಗಿಯೇ ಪ್ರತ್ಯೇಕ ಕೊಠಡಿಗಳು ಇರುತ್ತವೆ

ಬೆಂಗಳೂರು ವಿಮಾನ ನಿಲ್ದಾಣದ ಟರ್ನಿನಲ್ -2ರಲ್ಲಿ ಸಾಮೂಹಿಕ ನಮಾಜ್ ಮಾಡಿದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್‌, ಏರ್ಪೋರ್ಟ್‌ಗಳಲ್ಲಿ ಪ್ರಾರ್ಥನೆಗಾಗಿಯೇ ಪ್ರತ್ಯೇಕ ಕೊಠಡಿಗಳು ಇರುತ್ತವೆ. ಆದರೆ, ಸಾರ್ವಜನಿಕವಾಗಿ ನಮಾಜ್ ಮಾಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬುದು ತಮ್ಮ ಸರ್ಕಾರದ ನಿಲುವುವಾಗಿದೆ. ಈ ನಿಯಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದಾಗ ಬಿಜೆಪಿ ತನ್ನ ಅಂಗ ಸಂಸ್ಥೆಗಳ ಮೂಲಕ ಧಾರವಾಡದಲ್ಲಿ ಮಧ್ಯಂತರ ತಡೆ ತಂದಿದ್ದೇಕೆ ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್ ಅಥವಾ ನಮಾಜ್, ಯಾವುದೇ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಅಗತ್ಯ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಿದ್ದರೆ, ಸಾರ್ವಜನಿಕರಿಗೆ ಕಷ್ಟವಾಗದಿದ್ದರೆ ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ಕಾನೂನನ್ನು ರಾಜ್ಯಾದ್ಯಂತ ವಿಸ್ತರಿಸಲು ಮುಂದಾದಾಗ ಬಿಜೆಪಿಯೇ ತಡೆ ತಂದಿದ್ದು ಅಲ್ಲವೆ ಎಂದು ಪ್ರಶ್ನಿಸಿದರು.

Read more Articles on