ಸಾರಾಂಶ
ಅರಣ್ಯ ವ್ಯಾಪ್ತಿಯಲ್ಲಿ ನೈಸರ್ಗಿಕವಾಗಿ ಗಾಯಗೊಳ್ಳುವ ವನ್ಯಜೀವಿಗಳನ್ನು ಕೃತಕವಾಗಿ ಚಿಕಿತ್ಸೆ ನೀಡುವ ಬದಲು ಅವುಗಳನ್ನು ನೈಸರ್ಗಿಕವಾಗಿಯೇ ಗುಣಮುಖರಾಗುವಂತೆ ಬಿಡಬೇಕು
ಬೆಂಗಳೂರು : ಅರಣ್ಯ ವ್ಯಾಪ್ತಿಯಲ್ಲಿ ನೈಸರ್ಗಿಕವಾಗಿ ಗಾಯಗೊಳ್ಳುವ ವನ್ಯಜೀವಿಗಳನ್ನು ಕೃತಕವಾಗಿ ಚಿಕಿತ್ಸೆ ನೀಡುವ ಬದಲು ಅವುಗಳನ್ನು ನೈಸರ್ಗಿಕವಾಗಿಯೇ ಗುಣಮುಖರಾಗುವಂತೆ ಬಿಡಬೇಕು. ವನ್ಯಜೀವಿಗಳು ಗಾಯಗೊಳ್ಳುವುದು ಹಾಗೂ ಗುಣಮುಖವರಾಗುವುದು ಸಹಜ ಪ್ರಕ್ರಿಯೆಯಾಗಿದ್ದು, ಅದರಲ್ಲಿ ಮಾನವ ಹಸ್ತಕ್ಷೇಪ ಮಾಡದಂತೆ ತಡೆಯಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಹಾಸನ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿದ್ದ ಕಾಡಾನೆಗೆ ಅರಣ್ಯ ಸಿಬ್ಬಂದಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸಾವನ್ನಪ್ಪಿದೆ. ಆದರೆ, ವನ್ಯಜೀವಿಗಳು ನೈಸರ್ಗಿಕವಾಗಿ ಗಾಯಗೊಂಡಾಗ ಅವುಗಳನ್ನು ತಮ್ಮ ಪಾಡಿಗೆ ಬಿಡಬೇಕು. ಅವುಗಳು ಗಾಯದಿಂದ ಚೇತರಿಸಿಕೊಳ್ಳುತ್ತವೆ.
ಒಂದು ವೇಳೆ ಅವು ಸಾವನ್ನಪ್ಪಿದರೆ ಅವುಗಳ ಕಳೆಬರ ಬೇರೆ ಪ್ರಾಣಿಗಳಿಗೆ ಆಹಾರವಾಗುತ್ತವೆ. ಯಾವುದೇ ವನ್ಯಜೀವಿ ಮೃತಪಟ್ಟಾಗ ಅವುಗಳು ಇನ್ನೊಂದು ವನ್ಯಜೀವಿಯ ಆಹಾರವಾಗುವುದು ಸಹಜ ಪ್ರಕ್ರಿಯೆಯಾಗಿದೆ. ವನ್ಯಜೀವಿಗಳ ಮೇಲಿನ ಕಾಳಜಿಗಾಗಿ ಈ ಪ್ರಕ್ರಿಯೆ ತಪ್ಪಿಸಿದರೆ ಮುಂದೆ ಮಾನವ-ವನ್ಯಜೀವಿ ಸಂಘರ್ಷ ಸೇರಿದಂತೆ ಇನ್ನಿತರ ಅವಘಡಗಳಿಗೆ ಕಾರಣವಾಗುತ್ತವೆ ಎಂದಿದ್ದಾರೆ.
ಹೀಗಾಗಿ, ವನ್ಯಜೀವಿಗಳನ್ನು ನೈಸರ್ಗಿಕವಾಗಿ ಜೀವನ ಸಾಗಿಸುವಂತೆ ಅರಣ್ಯ ಇಲಾಖೆ ವಾತಾವರಣ ನಿರ್ಮಿಸಬೇಕು. ಬೇರೆ ಪ್ರಾಣಿಗಳಿಂದ ಬೇಟೆಗೊಳಗಾದ ವನ್ಯಜೀವಿಗಳನ್ನು ಹೊರತುಪಡಿಸಿ, ಮಾನವನ ಕೃತ್ಯದಿಂದ ಅಥವಾ ಅನೈಸರ್ಗಿಕವಾಗಿ ಗಾಯಗೊಳ್ಳುವ ವನ್ಯಜೀವಿಗಳಿಗೆ ಮಾತ್ರ ಚಿಕಿತ್ಸೆ ನೀಡುವುದು ಒಳಿತು. ಇದರಿಂದ ವನ್ಯಜೀವಿಗಳು ಅನೈಸರ್ಗಿಕವಾಗಿ ಸಾವನ್ನಪ್ಪುವುದು ತಪ್ಪಲಿದೆ ಎಂದು ಪತ್ರದಲ್ಲಿ ಕೋರಿದ್ದಾರೆ.