ಸಾರಾಂಶ
ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಹುತೇಕ ಪ್ರದೇಶಗಳು ಅನಾಹುತಕ್ಕೊಳಗಾಗಿ ಜನತೆ ಸಂಕಷ್ಟ ಅನುಭವಿಸಲು ರಾಜಕಾಲುವೆಗಳು ಹೂಳು ತುಂಬಿರುವುದೇ ಕಾರಣ
ಬೆಂಗಳೂರು : ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಹುತೇಕ ಪ್ರದೇಶಗಳು ಅನಾಹುತಕ್ಕೊಳಗಾಗಿ ಜನತೆ ಸಂಕಷ್ಟ ಅನುಭವಿಸಲು ರಾಜಕಾಲುವೆಗಳು ಹೂಳು ತುಂಬಿರುವುದೇ ಕಾರಣವಾಗಿದ್ದು, ಮುಂಬರುವ ಮಳೆಗಾಲದ ವೇಳೆಗೆ ಸಮರ್ಪಕ ಕ್ರಿಯಾಯೋಜನೆ ರೂಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ನಿರ್ದೇಶನ ನೀಡಿದ್ದಾರೆ.
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಶುಕ್ರವಾರ ಕರೆದಿದ್ದ ಸಭೆಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ವಲಯ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಡಿಎ, ಬಿಎಂಆರ್‌ಸಿಎಲ್, ಕೆ-ರೈಡ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಅಧಿಕಾರಿಗಳು ನೀಡಿದ ಸಮಜಾಯಿಷಿಗೆ ಲೋಕಾಯುಕ್ತರು ಗರಂ ಆಗಿ ತರಾಟೆಗೆ ತೆಗೆದುಕೊಂಡರು. ಮಳೆ ಹಾನಿಗೆ ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ಇಲಾಖೆಗಳ ಕೊರತೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ರಾಜಕಾಲುವೆಗಳು ಹೂಳು ತುಂಬಿರುವುದರಿಂದ ಮಳೆಯ ನೀರು ಸರಾಗವಾಗಿ ಹೋಗಲು ಅಡ್ಡಿಯಾಗುತ್ತಿದೆ. ಎಲ್ಲಾ ರಾಜಕಾಲುವೆಗಳ ಹೂಳು ತೆಗೆಯುವ ಕಾರ್ಯವನ್ನು ತ್ವರಿತಗತಿಯಲ್ಲಿ ನಿರ್ವಹಿಸಬೇಕು. ಕೆಲವು ರಾಜಕಾಲುವೆಗಳು ಇಳಿಜಾರಿನಿಂದ ಇಲ್ಲದಿರುವುದೇ ನೀರು ಸರಾಗವಾಗಿ ಹೋಗದಿರಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಇಳಿಜಾರಿನ ವ್ಯವಸ್ಥೆಯನ್ನು ನಿರ್ವಹಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಸಿಲ್ಕ್‌ಬೋರ್ಡ್ ಸರ್ಕಲ್
ಸಿಲ್ಕ್‌ಬೋರ್ಡ್ ಸರ್ಕಲ್‌ನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಲು ಮೆಟ್ರೋ ಕಾಮಗಾರಿ ನಡೆಯುತ್ತಿರುವುದು ಕಾರಣವಾಗಿದೆ. ಮೆಟ್ರೋ ಪಿಲ್ಲರ್‌ನ್ನು ರಾಜಕಾಲುವೆಯ ಮಧ್ಯದಲ್ಲಿ ಅಳವಡಿಸುತ್ತಿದ್ದು, ರಾಜಕಾಲುವೆಯ ನೀರು ಹರಿಯಲು ಪರ್ಯಾಯ ಮಾರ್ಗ ಮಾಡಿರುವುದಿಲ್ಲ. ಅದೇ ರೀತಿ ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯಲು ವೈಜ್ಞಾನಿಕವಾಗಿ ಕಾಲುವೆಯನ್ನು ನಿರ್ಮಾಣ ಮಾಡದಿರುವುದು, ರಾಜಕಾಲುವೆಯ ಇಕ್ಕೆಲಗಳ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಎಲ್ಲಾ ವಿಚಾರಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು. ಬಳಿಕ ಕೈಗೊಂಡಿರುವ ಕ್ರಮಗಳ ವರದಿಯನ್ನು ನೀಡಬೇಕು ಎಂದು ತಿಳಿಸಿದರು.
ಪಣತ್ತೂರು ರೈಲ್ವೆ ಕೆಳಸೇತುವೆ ಕಾಮಗಾರಿ ನಡೆಯುತ್ತಿದ್ದು, ರಾಜಕಾಲುವೆ ನೀರು ಹರಿದು ಹೋಗಲು ಯಾವುದೇ ಪರ್ಯಾಯ ಮಾರ್ಗ ಮಾಡಿಲ್ಲ. ಪಣತ್ತೂರು ಕೆರೆ ತುಂಬಿದ ನಂತರ ನೀರು ಹೊರಹಾದು ಹೋಗಲು ಸಾಧ್ಯವಿಲ್ಲವಾಗಿದೆ. ಇದಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ತರಾಟೆಗೆ ತಗೆದುಕೊಂಡರು. ಈ ನಿಟ್ಟಿನಲ್ಲಿ ಗಮನಹರಿಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಮಳೆ ನೀರು ಹರಿಯಲು ಪರ್ಯಾಯ ಮಾರ್ಗವನ್ನು ಅಳವಡಿಸಿ ವಿವರವಾದ ವರದಿಯನ್ನು ನೀಡಬೇಕು ಎಂದು ಲೋಕಾಯುಕ್ತರು ಹೇಳಿದರು.
ಸಾಯಿ ಲೇಔಟ್‌ಲ್ಲಿ ಕಿರಿದಾದ ಮಾರ್ಗ
ಸಾಯಿ ಲೇಔಟ್‌ನಲ್ಲಿ ಜಲಪ್ರವಾಹವಾಗಲು ರಾಜಕಾಲುವೆಯಿಂದ ಬರುವ ನೀರು ಸಾಯಿ ಲೇಔಟ್‌ನಿಂದ ಹೊರ ಹಾದು ಹೋಗಲು ರೈಲ್ವೆ ಟ್ರ್ಯಾಕ್ ಹತ್ತಿರ ಕಿರಿದಾದ ಮಾರ್ಗ ಇರುವುದೇ ಕಾರಣವಾಗಿದೆ. ರಾಜಕಾಲುವೆಯಲ್ಲಿ ಬರುವ ನೀರು ಸರಾಗವಾಗಿ ಹೋಗಲು ಇನ್ನೂ ಎರಡು ಕಡೆ ಕಾಮಗಾರಿ ಕೈಗೊಂಡಿರುವುದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ರಾಜಕಾಲುವೆ ಒತ್ತುವರಿ ಮಾಡಿರುವವರನ್ನು ಗುರುತಿಸಿ, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡು ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ, ಮಳೆಯ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ತಮ್ಮ ಕಾರ್ಯವನ್ನು ನಿರ್ವಹಿಸದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮವಹಿಸುವುದಾಗಿ ತಿಳಿಸಿದರು.