ಸಾರಾಂಶ
ಮುಂಡಗೋಡದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರು ಪಾಲಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರವಾರ
ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಆಗೊಮ್ಮೆ ಈಗೊಮ್ಮೆ ಭಾರಿ ಮಳೆ ಬೀಳುತ್ತಿದೆ. ಮುಂಡಗೋಡದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರು ಪಾಲಾಗಿದ್ದಾರೆ.ಮೇ 27ರ ತನಕ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬಿರುಗಾಳಿಯೊಂದಿಗೆ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕರಾವಳಿ ತಾಲೂಕುಗಳಲ್ಲಿ ಶುಕ್ರವಾರ ಆಗಾಗ ಭಾರಿ ಮಳೆ ಬೀಳುತ್ತಿದೆ. ದಟ್ಟವಾದ ಮೋಡ ಕವಿದ ವಾತಾವರಣ ಇದೆ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ.
ಮುಂಡಗೋಡದ ಕಲಕೇರಿ ಗ್ರಾಮದ ರಾಜು ಮಕ್ಕನಕಟ್ಟಿ ಮೀನು ಹಿಡಿಯಲು ಹೋದವರು ನೀರು ಪಾಲಾಗಿದ್ದಾರೆ. ಕಾರವಾರದ ಎಂ.ಜಿ. ರಸ್ತೆಯಲ್ಲಿ ವಿದ್ಯುತ್ ಕಂಬ ಹಾಗೂ ತಂತಿ ಮೇಲೆ ಮರ ಉರುಳಿದ ಪರಿಣಾಮ ಆ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಕಣ್ಮರೆಯಾದ ವಿದ್ಯುತ್ ಶುಕ್ರವಾರ ಸಂಜೆ ಪೂರೈಕೆಯಾಯಿತು. ಎರಡು ದಿನಗಳು ವಿದ್ಯುತ್ ಇಲ್ಲದೆ ಜನತೆ ಪರಿತಪಿಸುವಂತಾಯಿತು.ರೆಡ್ ಅಲರ್ಟ್: ಭಾರತೀಯ ಹವಾಮಾನ ಇಲಾಖೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ನಾಲ್ಕು ದಿನಗಳಿಗೆ (ಮೇ 24ರಿಂದ 27ರವರೆಗೆ) ರೆಡ್ ಅಲರ್ಟ್ ಇದೆ. ಈ ದಿನಗಳಲ್ಲಿ ಜಿಲ್ಲೆಯ ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಹೆಚ್ಚಿನ ಗಾಳಿ (ಸುಮಾರು 40 ಕಿ.ಮೀ.) ಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ತಿಳಿಸಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಹೆಚ್ಚಿನ ಗಾಳಿ ಬೀಸುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಗುಂಟ ಮಾಜಾಳಿಯಿಂದ ಭಟ್ಕಳದವರೆಗೆ ಸಮುದ್ರದಲ್ಲಿ ಭಾರೀ ಅಲೆಗಳು ಏಳುವ ಎಚ್ಚರಿಕೆ ನೀಡಲಾಗಿದೆ. ಮೇ 24 ರಂದು ಬೆಳಗ್ಗೆ 8.30 ರಿಂದ ರಾತ್ರಿ 8.30ರವರೆಗೆ 2.7-3.3 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಉತ್ತರ ಕನ್ನಡ ಕರಾವಳಿಯಲ್ಲಿ ಮಾಜಾಳಿಯಿಂದ ಭಟ್ಕಳದವರೆಗೆ ಅಲೆಗಳ ಉಬ್ಬರ ಎಚ್ಚರಿಕೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಗೆ ಅಥವಾ ಆಯಾ ತಾಲೂಕಾ ತಹಶೀಲ್ದಾರರ ಕಚೇರಿಗೆ ಕರೆಮಾಡಬಹುದು. 24*7 ಕಂಟ್ರೋಲ್ ರೂಂ ದೂ.ಸಂ.08382-229857, ವಾಟ್ಸಾಪ್ ಸಂಖ್ಯೆ. 9483511015 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.