ಸಾರಾಂಶ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಆಗುಂಬೆಯಲ್ಲಿನ ಕಾಳಿಂಗ ಪ್ರತಿಷ್ಠಾನವು ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುವ ಕಾಳಿಂಗ ಸರ್ಪದ ಹೊಸ ಪ್ರಭೇದ ಪತ್ತೆ ಮಾಡಿದ್ದು, ಹೊಸ ಪ್ರಭೇದಕ್ಕೆ ಓಫಿಯೋಫಾಗಸ್ ಕಾಳಿಂಗ ಎಂಬ ಹೆಸರನ್ನಿಡಲಾಗಿದೆ.
ಬೆಂಗಳೂರು : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಆಗುಂಬೆಯಲ್ಲಿನ ಕಾಳಿಂಗ ಪ್ರತಿಷ್ಠಾನವು ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುವ ಕಾಳಿಂಗ ಸರ್ಪದ ಹೊಸ ಪ್ರಭೇದ ಪತ್ತೆ ಮಾಡಿದ್ದು, ಹೊಸ ಪ್ರಭೇದಕ್ಕೆ ಓಫಿಯೋಫಾಗಸ್ ಕಾಳಿಂಗ ಎಂಬ ಹೆಸರನ್ನಿಡಲಾಗಿದೆ.
ನಗರದ ಜೆ.ಎನ್.ಟಾಟಾ ಸಭಾಂಗಣದಲ್ಲಿ ಕಾಳಿಂಗ ಪ್ರತಿಷ್ಠಾನದಿಂದ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ನೂತನ ಪ್ರಭೇದದ ಕಾಳಿಂಗಕ್ಕೆ ವೈಜ್ಞಾನಿಕ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.
ನಂತರ ಮಾತನಾಡಿದ ಈಶ್ವರ್ ಖಂಡ್ರೆ, ದೇಶದಲ್ಲಿ ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚಿನ ಹಾವು ಕಡಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, 58 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಆ ಪ್ರಮಾಣ ಕಡಿಮೆಯಿದ್ದು, ಸರಾಸರಿ 100 ಜನರಷ್ಟೇ ಮರಣ ಹೊಂದುತ್ತಿದ್ದಾರೆ. ಅದನ್ನು ಶೂನ್ಯಕ್ಕಿಳಿಸುವ ಸಲುವಾಗಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆ್ಯಂಟಿ ವೆನಮ್ ಚುಚ್ಚುಮದ್ದು ಇಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಪಶ್ಚಿಮಘಟ್ಟ ಅರಣ್ಯ ಪ್ರದೇಶ ಜೀವ ವೈವಿಧ್ಯ ತಾಣವಾಗಿದೆ. ಅಲ್ಲಿ ಹಲವು ಅಪರೂಪದ ವನ್ಯಜೀವಿಗಳು, ಸಸ್ಯಗಳು ಕಾಣಸಿಗುತ್ತವೆ. ಅದರಲ್ಲಿ ಕಾಳಿಂಗ ಸರ್ಪವೂ ಒಂದಾಗಿದೆ. 187 ವರ್ಷಗಳ ನಂತರ ಕಾಳಿಂಗ ಪ್ರತಿಷ್ಠಾನವು ಹೊಸ ಪ್ರಭೇದದ ಕಾಳಿಂಗ ಸರ್ಪವನ್ನು ಪತ್ತೆ ಮಾಡಿದೆ. ಇದೀಗ ಆ ಸರ್ಪಕ್ಕೆ ವೈಜ್ಞಾನಿಕವಾಗಿ ಓಫಿಯೋಫಾಗಸ್ ಕಾಳಿಂಗ ಎಂದು ಹೆಸರಿಡುವ ಮೂಲಕ ಜಗತ್ತೇ, ಕನ್ನಡದ ಪದವಾದ ಕಾಳಿಂಗ ಎಂದು ಕರೆಯುವಂತೆ ಮಾಡಿದ್ದಾರೆ. ಈ ರೀತಿಯ ಸಂಶೋಧನೆಗಳು ಮತ್ತಷ್ಟು ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟರು.
ಕಾಳಿಂಗ ಪ್ರತಿಷ್ಠಾನದ ಡಾ. ಗೌರಿಶಂಕರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಷ್ ಮಾಲ್ಕಡೆ, ಐಐಎಸ್ಸಿಯ ಪ್ರೊ. ಕಾರ್ತಿಕ್ ಶಂಕರ್, ಚಲನಚಿತ್ರ ನಟ ವಿನಯ್ ರಾಜ್‌ಕುಮಾರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಇತರರಿದ್ದರು.
ಎಲ್ಲ ಹಾವುಗಳು ವಿಷಕಾರಿಯಲ್ಲ. ಆದರೂ, ಜನರು ಹಾವನ್ನು ಕಂಡ ಕೂಡಲೇ ಹೆದರುತ್ತಾರೆ ಅಥವಾ ಅದನ್ನು ಕೊಲ್ಲುತ್ತಾರೆ. ಹೀಗಾಗಿ ಜನರಿಗೆ ಹಾವಿನ ಕುರಿತಂತೆ ಜಾಗೃತಿ ಮೂಡಿಸುವ ಅಗತ್ಯವಿದೆ. ಅಲ್ಲದೆ, ಹಾವು ಕಡಿತಕ್ಕೊಳಗಾದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಾವಿನ ವಿಷದಿಂದ ರಕ್ಷಿಸುವ ಚುಚ್ಚುಮದ್ದು, ಚಿಕಿತ್ಸೆ ಪಡೆಯುವ ಬದಲು ಪೂಜೆ ಮಾಡಿಸುತ್ತಾರೆ. ಇದರಿಂದ ಹಲವರ ಜೀವ ಹಾನಿಯಾಗುತ್ತಿದ್ದು, ಅದನ್ನು ತಪ್ಪಿಸಲು ಹಾವು ಕಡಿತಕ್ಕೊಳಗಾದವರಿಗೆ ಸೂಕ್ತ ಚಿಕಿತ್ಸೆ ಕೊಡುವ ಬಗ್ಗೆಯೂ ಜಾಗೃತಿ ಮೂಡಿಸಬೇಕಿದೆ ಎಂದರು.