ಇಳಕಲ್‌ ಹೇರ್‌ ಡ್ರೈಯರ್‌ ಬ್ಲಾಸ್ಟ್‌ ಕೇಸ್‌ಗೆ ಹೊಸ ತಿರುವು - ಅನೈತಿಕ ಸಂಬಂಧಕ್ಕೆ ಮಹಿಳೆ ಹತ್ಯೆಗೆ ಸಂಚು

| Published : Nov 23 2024, 09:42 AM IST

Hair dryer

ಸಾರಾಂಶ

ಇಳಕಲ್‌ನಲ್ಲಿ ಹೇರ್‌ ಹೇರ್‌ ಡ್ರೈಯರ್‌ ಸ್ಫೋಟಗೊಂಡು ಮಹಿಳೆಯೊಬ್ಬಳು ಗಾಯಗೊಂಡ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಅನೈತಿಕ ಸಂಬಂಧ ವಿರೋಧಿಸಿದ ಮಹಿಳೆಯನ್ನು ಕೊಲ್ಲಲು ಮಾಡಿದ ಖತರ್ನಾಕ್ ಸಂಚು ಇದು ಎಂಬ ಆಘಾತಕಾರಿ ಮಾಹಿತಿ ಪೊಲೀಸರ ತನಿಖೆಯಲ್ಲಿ ಹೊರಬಿದ್ದಿದೆ

ಬಾಗಲಕೋಟೆ : ಇಳಕಲ್‌ನಲ್ಲಿ ಹೇರ್‌ ಹೇರ್‌ ಡ್ರೈಯರ್‌ ಸ್ಫೋಟಗೊಂಡು ಮಹಿಳೆಯೊಬ್ಬಳು ಗಾಯಗೊಂಡ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಅನೈತಿಕ ಸಂಬಂಧ ವಿರೋಧಿಸಿದ ಮಹಿಳೆಯನ್ನು ಕೊಲ್ಲಲು ಮಾಡಿದ ಖತರ್ನಾಕ್ ಸಂಚು ಇದು ಎಂಬ ಆಘಾತಕಾರಿ ಮಾಹಿತಿ ಪೊಲೀಸರ ತನಿಖೆಯಲ್ಲಿ ಹೊರಬಿದ್ದಿದೆ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿ ಸಿದ್ದಪ್ಪ ಶೀಲವಂತ ಎಂಬಾತನನ್ನು ಬಂಧಿಸಿದ್ದಾರೆ.

ನಡೆದಿದ್ದೇನು?:

ಹೇರ್‌ ಡ್ರೈಯರ್‌ ಬ್ಲಾಸ್ಟ್‌ನಿಂದ ಕೈ ಕಳೆದುಕೊಂಡ ಬಸಮ್ಮ ಹಾಗೂ ಶಶಿಕಲಾ ಸ್ನೇಹಿತೆಯರಾಗಿದ್ದು, ಆರೋಪಿ ಸಿದ್ದಪ್ಪನೊಂದಿಗೆ ಗಾಯಗೊಂಡಿರುವ ಬಸಮ್ಮ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇವರಿಬ್ಬರ ಕಳ್ಳಸಂಬಂಧದ ಬಗ್ಗೆ ಶಶಿಕಲಾ ತಕರಾರು ಮಾಡಿ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡಿದ್ದ ಆರೋಪಿ, ಶಶಿಕಲಾಳನ್ನು ಮುಗಿಸಲು ಸಂಚು ರೂಪಿಸಿದ್ದ ಎಂಬುದು ತಿಳಿದು ಬಂದಿದೆ.

ತಾನೇ ಹೇರ್ ಡ್ರೈಯರ್ ಖರೀದಿಸಿ ಅದು ಸ್ಫೋಟಗೊಳ್ಳುವಂತೆ ಅದರೊಳಗೆ ಡಿಟೋನೇಟರ್ ಇರಿಸಿ, ಶಶಿಕಲಾ ವಿಳಾಸಕ್ಕೆ ಕೋರಿಯರ್‌ ಮಾಡಿದ್ದ. ಆದರೆ ಅದೃಷ್ಟವಶಾತ್ ಶಶಿಕಲಾ ಊರಲ್ಲಿಲ್ಲದ ವೇಳೆ ಪಾರ್ಸಲ್‌ ಬಂದಿದ್ದರಿಂದ ತನ್ನ ಸ್ನೇಹಿತೆ ಬಸಮ್ಮಳಿಗೆ ಪಾರ್ಸಲ್‌ ಪಡೆಯುವಂತೆ ಸೂಚಿಸಿದ್ದಳು. ಅದರಂತೆ ಡಿಟಿಡಿಸಿ ಕೊರಿಯರ್ ಸೆಂಟರ್‌ಗೆ ಹೋಗಿ ಹೇರ್ ಡ್ರೈಯರ್ ಪಡೆದಿದ್ದ ಬಸಮ್ಮ ಮನೆಗೆ ಬಂದು ಕುತೂಹಲ ತಾಳಲಾರದೆ ಹೇರ್ ಡ್ರೈಯರ್ ಆನ್‌ ಮಾಡಿದ್ದು, ಈ ವೇಳೆ ಅದು ಸ್ಫೋಟಿಸಿ ಬಸಮ್ಮಳ ಎರಡೂ ಕೈಗಳಿಗೆ ಗಂಭೀರ ಗಾಯವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾಹಿತಿ ನೀಡಿದ್ದಾರೆ.

ವಾರದಲ್ಲಿ ಪ್ರಕರಣ ಭೇದಿಸಿದ ಪೊಲೀಸರು:

ಆರಂಭದಲ್ಲಿ ಚಾರ್ಜರ್ ನಿಂದ ಉಂಟಾದ ಸಾಮಾನ್ಯ ಸ್ಫೋಟ ಎಂಬಂತೆ ಘಟನೆ ಬಿಂಬಿತವಾಗಿತ್ತು. ಆದರೆ ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದಾಗ ಮಹಿಳೆ ಹತ್ಯೆಯ ಸಂಚು ಹೊರಬಿದ್ದಿದೆ. ಎಂಎ, ಬಿ.ಇಡಿ ಪದವಿಧರನಾದ ಆರೋಪಿ ಸಿದ್ದಪ್ಪ ಕೊಪ್ಪಳದಲ್ಲಿ ಡಾಲ್ಫಿನ್ ಇಂಟರ್‌ ನ್ಯಾಷನಲ್ ಗ್ರಾನೈಟ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕಲ್ಲುಗಳನ್ನು ಬ್ಲಾಸ್ಟ್ ಮಾಡಲು ಬಳಕೆ ಮಾಡುವ ಡಿಟೋನೇಟರ್ ಸ್ಫೋಟಕವನ್ನು ಈತ ಹೇಗೆ ತಂದಿದ್ದಾನೆ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.