ಸಾರಾಂಶ
ನಮ್ಮ ಇಲಾಖೆಯಿಂದ ಮುಂದಿನ ತಿಂಗಳು ಇನ್ನೂ 49 ಸಾವಿರ ಮನೆಗಳನ್ನು ಫಲಾನುಭವಿ ಬಡವರಿಗೆ ಹಂಚಿಕೆ ಮಾಡುತ್ತಿದ್ದೇವೆ. ಹಂಚಿಕೆಯಾದ ಬಳಿಕ ಮನೆ ಕಟ್ಟಿರುವ ಗುತ್ತಿಗೆದಾರರಿಗೆ 900 ಕೋಟಿ ರು.ಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
ಬೆಂಗಳೂರು : ನಮ್ಮ ಇಲಾಖೆಯಿಂದ ಮುಂದಿನ ತಿಂಗಳು ಇನ್ನೂ 49 ಸಾವಿರ ಮನೆಗಳನ್ನು ಫಲಾನುಭವಿ ಬಡವರಿಗೆ ಹಂಚಿಕೆ ಮಾಡುತ್ತಿದ್ದೇವೆ. ಹಂಚಿಕೆಯಾದ ಬಳಿಕ ಮನೆ ಕಟ್ಟಿರುವ ಗುತ್ತಿಗೆದಾರರಿಗೆ 900 ಕೋಟಿ ರು.ಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಬಿಲ್ ಬಾಕಿ ಆರೋಪ ಕುರಿತ ಪ್ರಶ್ನೆಗೆ ನಮ್ಮ ಇಲಾಖೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ರಾಜೀವ್ ಗಾಂಧಿ ವಸತಿ ಯೋಜನೆಯಿಂದ ಒಟ್ಟು 2.30 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನನ್ನ ಇಲಾಖೆಯಲ್ಲಿ 9500 ಕೋಟಿ ರು. ಬಿಲ್ ಬಾಕಿ ಇತ್ತು. ಕಾರಣ ಎಂದರೆ ಒಂದು ಮನೆ ಕಟ್ಟಲು ಏಳೂವರೆ ಲಕ್ಷ ರು. ಬೇಕು. ಇದರಲ್ಲಿ ಫಲಾನುಭವಿಗಳಿಗೆ ಸರ್ಕಾರಗಳು 3 ಲಕ್ಷ ರು. ನೀಡಲಾಗುತ್ತದೆ. ಬಾಕಿ 4.5 ಲಕ್ಷ ರು.ಗಳನ್ನು ಫಲಾನುಭವಿಗಳು ಬರಿಸಲಾಗುತ್ತಿಲ್ಲ. ಹಾಗಾಗಿ ನಮ್ಮ ಸರ್ಕಾರ ಬಂದ ಮೇಲೆ ಫಲಾನುಭವಿಗಳು ನೀಡುವ ಹಣವನ್ನೂ ಸರ್ಕಾರವೇ ಬರಿಸಲು ತೀರ್ಮಾನ ಮಾಡಿ ಹಂತ ಹಂತವಾಗಿ ಬಿಲ್ ಪಾವತಿ ಮಾಡುತ್ತಿದ್ದೇವೆ ಎಂದರು.
ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿರುವ 49 ಸಾವಿರ ಹೊಸ ಮನೆಗಳ ಹಂಚಿಕೆಗೆ ಮುಖ್ಯಮಂತ್ರಿ ಅವರು ಒಪ್ಪಿದ್ದಾರೆ. ಹಂಚಿಕೆ ಬಳಿಕ 900 ಕೋಟಿ ರು. ಹಣ ಗುತ್ತಿಗೆದಾರರಿಗೆ ಜ್ಯೇಷ್ಠತೆ ಆಧಾರದಲ್ಲಿ ಬಿಡುಗಡೆ ಆಗಲಿದೆ ಎಂದರು.
ಸದ್ಯದಲ್ಲೇ ಬಾಲರಾಜ್ ಕೈಬಿಡುತ್ತೇವೆ:
ವಸತಿ ಇಲಾಖೆಯಲ್ಲಿ ಬಾಲರಾಜ್ ಎಂಬ ಅಧಿಕಾರಿ ಬಾಕಿ ಬಿಲ್ ಬಿಡುಗಡೆಗೆ ಅಡ್ಡಿಯಾಗಿರುವುದಾಗಿ ಗುತ್ತಿಗೆದಾರರು ಮಾಡಿರುವ ಆರೋಪಕ್ಕೆ, ಬಾಲರಾಜ್ ನಮ್ಮ ಇಲಾಖೆಯ ಸ್ಲಂ ಬೋರ್ಟ್‌ನಲ್ಲಿ ಎಇಇ ಆಗಿದ್ದ ಅಧಿಕಾರಿ. ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಅವರ ಬಳಿಯೇ ಇತ್ತು. ಹಾಗಾಗಿ ಮನೆಗಳ ಪೂರ್ಣಗೊಳಿಸುವ ಕಾರಣಕ್ಕೋಸ್ಕರ ಅವರನ್ನು ಒಂದು ವರ್ಷ ಮುಂದುವರಿಸಿದ್ದೇವೆ. ಒಂದು ವರ್ಷ ಅವರ ಅವಧಿ ಮುಗಿದಿದೆ. ಸದ್ಯದಲ್ಲೇ ಅವರನ್ನು ಕೈಬಿಡುತ್ತೇವೆ. ಸುಧೀರ್ ಎಂಬ ಅಧಿಕಾರಿಯನ್ನು ಮುಖ್ಯ ಎಂಜಿನಿಯರ್ ಆಗಿ ಮುಂದುವರೆಸುತ್ತೇವೆ ಎಂದು ಸಚಿವರು ತಿಳಿಸಿದರು.
ಬೇರೆಯವರಿಗೆ ಅವಕಾಶ ಕೊಟ್ಟರೆ ನನಗೆ ಖುಷಿ:
ನಾನು ಪಕ್ಷದ ಶಿಸ್ತಿನ ಸಿಪಾಯಿ, ಹೈಕಮಾಂಡ್ ಹಾಕಿದೆ ಗೆರೆ ದಾಟುವುದಿಲ್ಲ. ಎರಡೂವರೆ ವರ್ಷ ನನಗೆ ಅವಕಾಶ ಕೊಟ್ಟಿದ್ದಾರೆ. ಇನ್ನು ಎರಡೂವರೆ ವರ್ಷ ಬೇರೆಯವರಿಗೆ ಅವಕಾಶ ಕೊಟ್ಟರೆ ಅದಕ್ಕೂ ನಾನು ಖುಷಿಪಡುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹಮದ್‌ಖಾನ್ ಹೇಳಿದ್ದಾರೆ. ಸಚಿವ ಸಂಪುಟ ಪುನಾರಚನೆ ವಿಚಾರ ಕುರಿತ ಪ್ರಶ್ನೆಗೆ, ನನಗೆ ನಾನು ಸಚಿವನಾಗಿ ಮುಂದುವರೆಯುವ ವಿಶ್ವಾಸ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ. ಅದರಂತೆ ನಡೆದುಕೊಳ್ಳಬೇಕು. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ನಾನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.