ಸಾರಾಂಶ
ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ 58 ದಿನಗಳ ಕಾಲ ‘ಜನರೊಂದಿಗೆ ಜನತಾದಳ’ ಹೆಸರಿನಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬುಧವಾರದಿಂದ ಐದು ದಿನ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ 58 ದಿನಗಳ ಕಾಲ ‘ಜನರೊಂದಿಗೆ ಜನತಾದಳ’ ಹೆಸರಿನಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬುಧವಾರದಿಂದ ಐದು ದಿನ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ.
ಬುಧವಾರ ಬೆಳಗ್ಗೆ 11.30ಕ್ಕೆ ನಿಖಿಲ್ ಅವರು ಗೌರಿಬಿದನೂರಿನ ನದಿದಡ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಮಧ್ಯಾಹ್ನ 3.30ಕ್ಕೆ ಚಿಕ್ಕಬಳ್ಳಾಪುರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ.
ಪಕ್ಷ ಸಂಘಟನೆಗಾಗಿ ಹಮ್ಮಿಕೊಂಡಿರುವ ಈ ರಾಜ್ಯ ಪ್ರವಾಸ ಹಾಗೂ ಮಿಸ್ಡ್ ಕಾಲ್ ಸದಸ್ಯತ್ವ ನೋಂದಣಿ ಅಭಿಯಾನವು ಈಗಾಗಲೇ ತುಮಕೂರು, ರಾಮನಗರ, ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಯಶಸ್ವಿಯಾಗಿದೆ. ರಾಜ್ಯ ಪ್ರವಾಸದ ವೇಳೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಮುಂದಿನ ಪ್ರವಾಸಕ್ಕೆ ಮತ್ತಷ್ಟು ಹುರುಪು ತಂದಿದೆ ಎಂದು ನಿಖಿಲ್ ತಿಳಿಸಿದ್ದಾರೆ.
ಕಳೆದ 26 ವರ್ಷಗಳಿಂದ ಪಕ್ಷದ ಮೇಲಿಟ್ಟಿರುವ ಅಭಿಮಾನ, ಬದ್ಧತೆಯಿಂದ ಜೆಡಿಎಸ್ ಸುಭದ್ರವಾಗಿದೆ. 2028ಕ್ಕೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ನಿಮ್ಮೆಲ್ಲರ ದುಡಿಮೆಗೆ ತಕ್ಕಂತೆ ಅಧಿಕಾರ ಕೊಡಿಸಿದಾಗ ಮಾತ್ರ ನಿಮ್ಮೆಲ್ಲರ ಋಣ ತೀರಿಸಿದಂತಾಗುತ್ತದೆ.
ಈ ರಾಜ್ಯ ಪ್ರವಾಸವು ಕಾರ್ಯಕರ್ತರೊಂದಿಗೆ ಸಂಬಂಧ, ಬಾಂಧವ್ಯ, ವಿಶ್ವಾಸ ಬೆಳೆಸಿಕೊಳ್ಳಲು ನೆರವಾಗಿದೆ. ಪ್ರವಾಸದಲ್ಲಿ ನಾನು ಹೋದ ಕಡೆ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ತೋಸಿದಷ್ಟೇ ಪ್ರೀತಿ ತೋರಿಸುತ್ತಿದ್ದಾರೆ. ನನ್ನ ಕೊನೆ ಉಸಿರು ಇರುವವರೆಗೂ ಪಕ್ಷ ಕಟ್ಟುವ ನನ್ನ ಹೋರಾಟ ನಿರಂತರವಾಗಿರುತ್ತದೆ. ಹೀಗಾಗಿ ನಾವೆಲ್ಲಾ ಒಟ್ಟಾಗಿ ಹೆಜ್ಜೆ ಹಾಕೋಣ. ಬಲಿಷ್ಠ ಪಕ್ಷ ಕಟ್ಟಿ 2028ಕ್ಕೆ ಮತ್ತೆ ಕುಮಾರಣ್ಣನನ್ನು ಮುಖ್ಯಮಂತ್ರಿ ಮಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.