ಸಾರಾಂಶ
ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ಯಾವುದೇ ಕಾರಣಕ್ಕೂ ಖಾತಾ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ಯಾವುದೇ ಕಾರಣಕ್ಕೂ ಖಾತಾ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇನ್ನು ಈಗಾಗಲೇ ಸಾರ್ವಜನಿಕರು ಬಿಬಿಎಂಪಿ ಹೊರತುಪಡಿಸಿ ಉಳಿದ ನಗರ ಪ್ರದೇಶಗಳಲ್ಲಿ ಹೊಂದಿರುವ ಕಂದಾಯ ನಿವೇಶನಗಳಿಗೆ ಒಂದು ಅವಧಿಗೆ ಸೀಮಿತವಾಗಿ ಇ-ಸ್ವತ್ತು ಅಡಿ ಬಿ-ಖಾತಾ (ಇ-ಖಾತಾ) ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿ ಸೀಮಿತ ಅವಧಿ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ನಿಗದಿತ ಅವಧಿ ಬಳಿಕ ಯಾವುದೇ ಕಾರಣಕ್ಕೂ ಕಂದಾಯ ನಿವೇಶನಗಳಿಗೆ ಇ-ಖಾತಾ ನೀಡಬಾರದು. ಈ ಮೂಲಕ ಅನಧಿಕೃತ ಬಡಾವಣೆ ತಲೆ ಎತ್ತದಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟ ಆದೇಶ ನೀಡಿದರು.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಇ-ಖಾತಾ ಬಗ್ಗೆ ಉಂಟಾಗಿರುವ ಗೊಂದಲಗಳ ಬಗ್ಗೆ ಮಾಹಿತಿ ಪಡೆದರು.
ದಸ್ತಾವೇಜು ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿರುವುದರಿಂದ ಕಂದಾಯ ನಿವೇಶನ ಹೊಂದಿರುವ ಬಡವರಿಗೆ ತೀವ್ರ ಸಮಸ್ಯೆಯಾಗಿದೆ. ಹೀಗಾಗಿ ಬಿಬಿಎಂಪಿ ಹೊರತುಪಡಿಸಿ ಇತರೆ ಸ್ಥಳೀಯ ಸಂಸ್ಥೆಗಳ (ಪಾಲಿಕೆ, ನಗರಸಭೆ, ಪುರಸಭೆ) ವ್ಯಾಪ್ತಿಯ ನಗರ ಪ್ರದೇಶದಲ್ಲಿನ ಕಂದಾಯ ನಿವೇಶನಗಳಿಗೆ ಬಿ-ನಮೂನೆಯಲ್ಲಿ ಇ-ಖಾತಾ ನೀಡಬೇಕು. ಬಳಿಕ ಗ್ರಾಮೀಣ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವ ರೀತಿಯಲ್ಲಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂಬ ಬಗ್ಗೆಯೂ ಈಗಲೇ ಯೋಜನೆ ಸಿದ್ಧಪಡಿಸಿಕೊಳ್ಳಿ ಎಂದು ಮುಖ್ಯಮಂತ್ರಿ ತಾಕೀತು ಮಾಡಿದರು ಎಂದು ತಿಳಿದುಬಂದಿದೆ.
ಇನ್ನು ಎಲ್ಲಾ ದಾಖಲೆಗಳು ಸಮರ್ಪಕವಾಗಿ ಇರುವವರಿಗೂ ಇ-ಖಾತಾ ಪಡೆಯಲು, ಖಾತಾ ವರ್ಗಾವಣೆ ಮಾಡಿಸಿಕೊಳ್ಳಲು ಸಮಸ್ಯೆಯಾಗುತ್ತಿದೆ. ಇದರಲ್ಲಿ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಂಥ ಸಮಸ್ಯೆಗಳು ಆಗದಂತೆ ಎಚ್ಚರ ವಹಿಸಿ ಎಂದರು.
ಸಮಸ್ಯೆ ಆಗಬಾರದು: 10 ವರ್ಷ, 5 ವರ್ಷಕ್ಕೂ ಅಧಿಕ ಅವಧಿಯಿಂದ ಬಾಕಿ ಇದ್ದ ಮುಕ್ಕಾಲು ಕಂದಾಯ ವ್ಯಾಜ್ಯ ಪ್ರಕರಣಗಳಿಗೆ ಒಂದೂವರೆ ವರ್ಷದಲ್ಲಿ ಮುಕ್ತಿ ಸಿಕ್ಕಿದೆ ಎಂದು ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಮುಖ್ಯಮಂತ್ರಿಗಳಿಗೆ ವಿವರಿಸಿದರು. ನಮ್ಮ ಸರ್ಕಾರ ಬಂದಾಗ 10 ಸಾವಿರಕ್ಕೂ ಮಿಕ್ಕಿ ಅವಧಿ ಮೀರಿದ ಪ್ರಕರಣಗಳು ಇದ್ದವು. ಈಗ ಕೇವಲ 369 ಪ್ರಕರಣಗಳು ಮಾತ್ರ ತಹಸೀಲ್ದಾರ್ ನ್ಯಾಯಾಲಯಗಳಲ್ಲಿವೆ ಎಂದರು.
ಇದಕ್ಕೆ ಮುಖ್ಯಮಂತ್ರಿ, ಪ್ರಕರಣಗಳ ವಿಲೇವಾರಿ ತ್ವರಿತಗೊಳಿಸುವ ಜತೆಗೆ ನ್ಯಾಯದಾನದ ಗುಣಮಟ್ಟ ಸಹ ಸುಧಾರಿಸಬೇಕು. ಜನರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗಬಾರದು. ತಹಸೀಲ್ದಾರ್ ನ್ಯಾಯಾಲಯದಲ್ಲಿನ ಪ್ರಕರಣಗಳು ಇತ್ಯರ್ಥವಾಗುತ್ತಿವೆ. ಆದರೆ ಜಿಲ್ಲಾಧಿಕಾರಿ ನ್ಯಾಯಾಲಯ, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿನ ವಿಲೇವಾರಿ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಭೂ ಸುರಕ್ಷಾ ಪರಿಣಾಮಕಾರಿ ಜಾರಿಯಾಗಲಿ: ಭೂ ದಾಖಲೆಗಳ ರಕ್ಷಣೆಗೆ, ವಂಚಕರಿಂದ ದುರುಪಯೋಗ ಆಗದಂತೆ, ದಾಖಲೆ ತಿದ್ದಲು ಅವಕಾಶ ಆಗದಂತೆ ಜಾರಿಗೆ ತರುತ್ತಿರುವ ಭೂ ಸುರಕ್ಷಾ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲಿ. ಎಲ್ಲಾ ಮೂಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಖದೀಮರು ತಿದ್ದಲು ಅವಕಾಶ ಆಗದಂತೆ ದಾಖಲೆಗಳಿಗೆ ಡಿಜಿಟಲ್ ಭದ್ರತೆ ಒದಗಿಸಿ ಎಂದು ಸೂಚನೆ ನೀಡಿದರು.
ಜಮೀನು ಖಾತೆಗೆ ಆಧಾರ್ ಸೀಡಿಂಗ್ ಮಾಡುತ್ತಿರುವ ಪ್ರಗತಿ ಬಗ್ಗೆ ಮಾಹಿತಿ ಪಡೆದ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಜಮೀನುಗಳ ಖಾತೆ ಇನ್ನೂ ನಿಧನ ಹೊಂದಿದವರ ಹೆಸರಿನಲ್ಲೇ ಇದೆ. ಪೌತಿ ಖಾತೆ ಅಭಿಯಾನದ ಮೂಲಕ ಮಾಲೀಕರ ಹೆಸರಿಗೆ ಜಮೀನು ನೋಂದಣಿ ಮಾಡುವ ಕಾರ್ಯವನ್ನು ತ್ವರಿತಗೊಳಿಸಬೇಕು ಎಂದು ಹೇಳಿದರು.
ನಕ್ಷಾ ಯೋಜನೆ ಮೂಲಕ ನಗರ ಪ್ರದೇಶದಲ್ಲಿ ಡ್ರೋನ್ ಸರ್ವೆ ಮೂಲಕ ಪ್ರಾಪರ್ಟಿ ಕಾರ್ಡು ನೀಡುತ್ತಿದ್ದೇವೆ. 21 ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೇ ಕಾರ್ಯವನ್ನು ಕೈಗೊಳ್ಳಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಡ್ರೋನ್ ಸರ್ವೆ ಆರಂಭಿಸಲು ಸೂಚಿಸಿದರು.
ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಸೇರಿ ಹಲವರು ಹಾಜರಿದ್ದರು.
ಭೂ ಪರಿವರ್ತನೆ ಪೂರ್ಣ ಪ್ರಕ್ರಿಯೆ ತಿಂಗಳಲ್ಲಿ ಪೂರ್ಣಗೊಳಿಸಿ: ಸಿಎಂ
ಭೂಪರಿವರ್ತನೆ ಸಂಪೂರ್ಣ ಪ್ರಕ್ರಿಯೆಯನ್ನು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಮಾಸ್ಟರ್ ಪ್ಲಾನ್ ಆದ ಕಡೆ ಮತ್ತೆ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಈ ಕುರಿತು ಆದೇಶವನ್ನು ಆದಷ್ಟು ಬೇಗನೆ ಹೊರಡಿ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ನಗರ ಪ್ರದೇಶಗಳಲ್ಲಿ ಮಾಸ್ಟರ್ ಪ್ಲಾನ್ ಕಾಲದಿಂದ ಕಾಲಕ್ಕೆ ನವೀಕರಿಸಬೇಕು. ಹೊಸದಾಗಿ ಮಾಸ್ಟರ್ ಪ್ಲಾನ್ ಆಗದ ಕಡೆ ಆದಷ್ಟು ಬೇಗನೆ ಮಾಸ್ಟರ್ ಪ್ಲಾನ್ ಸಿದ್ದಪಡಿಸಬೇಕು ಎಂದು ಹೇಳಿದರು.