ಸಾರಾಂಶ
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಇರುವವರೆಗೂ ನಿಮ್ಮ ಗ್ಯಾರಂಟಿ ಯೋಜನಗಳನ್ನು ಕಸಿಯುವಂತಹ ಮಗ ಹುಟ್ಟುವುದಿಲ್ಲ
ಹಾಸನ : ‘ಬಿಜೆಪಿಯವರು ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ಮಾತ್ರ ದಾಳಿ ಮಾಡುತ್ತಿಲ್ಲ. ಅವರು ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಕಸಿದು ಬಡವರು, ಕೂಲಿ ಕಾರ್ಮಿಕರು, ರೈತರ ಮೇಲೆ ದಾಳಿಗೆ ಯತ್ನಿಸುತ್ತಿದ್ದಾರೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಇರುವವರೆಗೂ ನಿಮ್ಮ ಗ್ಯಾರಂಟಿ ಯೋಜನಗಳನ್ನು ಕಸಿಯುವಂತಹ ಮಗ ಹುಟ್ಟುವುದಿಲ್ಲ ಎಂದು ಭರವಸೆ ನೀಡಿದರು.
ಹಾಸನದಲ್ಲಿ ಗುರುವಾರ ನಡೆದ ಜನಕಲ್ಯಾಣೋತ್ಸವ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡವರ ಜೇಬಿಗೆ ನೇರವಾಗಿ ಹಣ ಹೋಗುತ್ತಿದೆ. ಇದರಿಂದ ಜನರ ಕಲ್ಯಾಣ ಆಗುತ್ತಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ರಾಜ್ಯದ ಮಹಿಳೆಯರಿಗೆ ಸಿಗುವ ಎರಡು ಸಾವಿರ, ಅನ್ನಭಾಗ್ಯ ಯೋಜನೆ ಅಕ್ಕಿ ಹಣ, 200 ಯುನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರ ನಿರುದ್ಯೋಗ ಭತ್ಯೆ ಕಸಿಯಲು ಪ್ರಯತ್ನಿಸುತ್ತಿದೆ ಬಿಜೆಪಿ ಯತ್ನಿಸುತ್ತಿದೆ ಎಂದು ದೂರಿದರು.
ನಿಮ್ಮ ಹೊಟ್ಟೆಗೇಕೆ ಬೆಂಕಿ ಬೀಳುತ್ತಿದೆ?: ಪ್ರಧಾನಿ ಮೋದಿ ಅವರು ಶ್ರೀಮಂತ ಕಂಪನಿಗಳ ತೆರಿಗೆಯನ್ನು 33%ನಿಂದ 24% ಕಡಿತಗೊಳಿಸಿ ಅವರ ಜೇಬಿಗೆ 3 ಲಕ್ಷ ಕೋಟಿ ರು. ಹಾಕಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ರಾಜ್ಯದ ಬಡ ಜನರ ಜೇಬಿಗೆ 56 ಸಾವಿರ ಕೋಟಿ ಹಾಕಿದರೆ ನಿಮ್ಮ ಹೊಟ್ಟೆಗೆ ಬೆಂಕಿ ಯಾಕೆ ಬೀಳುತ್ತಿದೆ? ಕೇಂದ್ರ ಸರ್ಕಾರ ದೊಡ್ಡ ಕೈಗಾರಿಕೆ ಮಾಲೀಕರ 17 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಹೀಗಿದ್ದರೂ ನಮ್ಮ ಸರ್ಕಾರ ಜನರ ಜೇಬಿಗೆ ಹಣ ಹಾಕಿದರೆ ಯಾಕೆ ಅಸೂಯೆ ಪಡುತ್ತೀರಿ ಎಂದು ಸುರ್ಜೇವಾಲಾ ಪ್ರಶ್ನಿಸಿದರು.