ಸಾರಾಂಶ
ಶಾಲೆ ಆರಂಭಗೊಂಡು ಒಂದು ತಿಂಗಳು ಕಳೆದರೂ ಬಿಬಿಎಂಪಿಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ಭಾಗ್ಯ ಸಿಕ್ಕಿಲ್ಲ. ಸಮವಸ್ತ್ರ, ಶೂ, ಸಾಕ್ಸ್ ಗೆ ಇನ್ನೊಂದು ತಿಂಗಳು ಕಾಯಬೇಕಿದೆ.
ಬೆಂಗಳೂರು : ಶಾಲೆ ಆರಂಭಗೊಂಡು ಒಂದು ತಿಂಗಳು ಕಳೆದರೂ ಬಿಬಿಎಂಪಿಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ಭಾಗ್ಯ ಸಿಕ್ಕಿಲ್ಲ. ಸಮವಸ್ತ್ರ, ಶೂ, ಸಾಕ್ಸ್ ಗೆ ಇನ್ನೊಂದು ತಿಂಗಳು ಕಾಯಬೇಕಿದೆ.
ಬಿಬಿಎಂಪಿಯು ನಗರದಲ್ಲಿ 93 ಶಿಶುವಿಹಾರ, 17 ಪ್ರಾಥಮಿಕ ಶಾಲೆ, 35 ಪ್ರೌಢಶಾಲೆ, 20 ಪಿಯು ಕಾಲೇಜು, 6 ಸ್ನಾತಕೋತ್ತರ ಪದವಿ ಕಾಲೇಜು ನಡೆಸುತ್ತಿದ್ದು, 22 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಸಕ್ತ ಸಾಲಿಗೆ ದಾಖಲಾತಿ ಪಡೆದುಕೊಂಡಿದ್ದಾರೆ. ಈಗಾಗಲೇ ಶಾಲೆ ಆರಂಭಗೊಂಡು 35 ದಿನ ಕಳೆದಿದೆ. ಆದರೂ ಬಿಬಿಎಂಪಿಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಣೆ ಮಾಡಿಲ್ಲ.
ಸಮವಸ್ತ್ರ, ಶೂ, ಸಾಕ್ಸ್ ವಿತರಣೆಗೆ ಟೆಂಡರ್ ಆಹ್ವಾನಿಸಲಾಗಿತ್ತು. ಗುತ್ತಿಗೆದಾರರು ಸರಿಯಾಗಿ ಬಿಡ್ಡಿಂಗ್ ಮಾಡಿರಲಿಲ್ಲ. ಹೀಗಾಗಿ, ಮರು ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆ ವಿದ್ಯಾರ್ಥಿಗಳ ಅಳತೆ ಪಡೆದು ವಿತರಣೆ ಮಾಡುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಖಲಾತಿ ನೆಪ
ಬಿಬಿಎಂಪಿಯ ಶಾಲಾ-ಕಾಲೇಜಿಗೆ ಜುಲೈ 31ರವರೆಗೆ ದಾಖಲಾತಿಗೆ ಅವಕಾಶ ಇದೆ. ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ದಾಖಲಾಗುವ ಸಾಧ್ಯತೆ ಇದೆ. ದಾಖಲಾತಿ ಪೂರ್ಣಗೊಂಡ ನಂತರ ಒಂದೇ ಬಾರಿ ಎಲ್ಲಾ ವಿದ್ಯಾರ್ಥಿಗಳ ಅಳತೆ ಪಡೆದು ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಈಗಾಗಲೇ ದಾಖಲಾಗಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು ಜುಲೈ 31ರ ವರೆಗೆ ಸಮವಸ್ತ್ರ, ಶೂ, ಸಾಕ್ಸ್ ಇಲ್ಲದೇ ಶಾಲೆಗೆ ಹೋಗಬೇಕಾದ ಸ್ಥಿತಿ ನಿರ್ಮಾಣ ಮಾಡಲಾಗಿದೆ.
-ಕೋಟ್-
ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನೆಪ ಹೇಳಿಕೊಂಡು ಸಮವಸ್ತ್ರ, ಶೂ, ಸಾಕ್ಸ್ ವಿತರಣೆ ಮಾಡುತ್ತಿಲ್ಲ. ಈಗಾಗಲೇ ದಾಖಲಾತಿ ಪಡೆದು ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಶೂ, ಸಾಕ್ಸ್ ಈಗಲೇ ವಿತರಣೆ ಮಾಡಲಿ. ನಂತರ ದಾಖಲಾಗುವ ವಿದ್ಯಾರ್ಥಿಗಳಿಗೆ ಇನ್ನೊಂದು ಹಂತದಲ್ಲಿ ವಿತರಣೆ ಮಾಡಲಿ.
- ಸೋಮನಗೌಡ, ಬಿಬಿಎಂಪಿ ಶಾಲಾ ವಿದ್ಯಾರ್ಥಿಯ ಪೋಷಕ