ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯಲ್ಲಿ ಈವರೆಗೆ ರಾಜ್ಯದಲ್ಲಿ 91,278 ಫಾರ್ಮ್ 7 ಸಲ್ಲಿಕೆಯಾಗಿವೆ. ಆದರೆ, ಈವರೆಗೂ ಕರಡು ಮತದಾರರ ಪಟ್ಟಿಯಿಂದ ಒಬ್ಬನೇ ಒಬ್ಬ ಮತದಾರನ ಹೆಸರನ್ನೂ ಡಿಲೀಟ್ ಮಾಡಿಲ್ಲ
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯಲ್ಲಿ ಈವರೆಗೆ ರಾಜ್ಯದಲ್ಲಿ 91,278 ಫಾರ್ಮ್ 7 ಸಲ್ಲಿಕೆಯಾಗಿವೆ. ಆದರೆ, ಈವರೆಗೂ ಕರಡು ಮತದಾರರ ಪಟ್ಟಿಯಿಂದ ಒಬ್ಬನೇ ಒಬ್ಬ ಮತದಾರನ ಹೆಸರನ್ನೂ ಡಿಲೀಟ್ ಮಾಡಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಫಾರ್ಮ್ 7 ಸಲ್ಲಿಸಿದ ತಕ್ಷಣ ಏಕಾಏಕಿ ಆ ಮತದಾರನ ಹೆಸರನ್ನು ಡಿಲೀಟ್ ಮಾಡುವುದಿಲ್ಲ. ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ(ಇಆರ್‌ಒ)ಗಳು ಫಾರ್ಮ್ 7 ಸಲ್ಲಿಸಿದವರು ಮತ್ತು ಆ ಮತದಾರ ಇಬ್ಬರಿಗೂ ನೋಟಿಸ್ ಜಾರಿ ಮಾಡುತ್ತಾರೆ. ನೋಟಿಸ್ ನೀಡಿದ 7 ದಿನದ ಬಳಿಕ ಇಬ್ಬರನ್ನೂ ಕರೆಸಿ ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಒಂದು ವೇಳೆ ಫಾರ್ಮ್ 7 ಸಲ್ಲಿಸುವಾಗ ಸುಳ್ಳು ಹೇಳಿಕೆ ಹಾಗೂ ಸುಳ್ಳು ಘೋಷಣೆ ನೀಡಿರುವುದು ಸಾಬೀತದಾದರೆ ಆ ಅರ್ಜಿದಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಅಂಥ ಅರ್ಜಿದಾರರ ವಿರುದ್ಧ ಇಆರ್‌ಒಗಳು ಯಾವುದೇ ದೂರು ದಾಖಲಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಲ್ಕ್ ಫಾರ್ಮ್ 7 ಸಲ್ಲಿಕೆ ಬಗ್ಗೆ ಇಆರ್‌ಒಗಳು ಕ್ರಮ:
ರಾಜ್ಯದ ಕೆಲ ಕಡೆ ಬಲ್ಕ್ ಫಾರ್ಮ್ 7 ಸಲ್ಲಿಸಿರುವ ಸಂಬಂಧ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಸ್ಥಳೀಯವಾಗಿ ಇಆರ್‌ಒಗಳು ಕ್ರಮ ತೆಗೆದುಕೊಳ್ಳಲಿದ್ದಾರೆ. ಎಸ್ಐಆರ್ ಪಾರದರ್ಶಕವಾಗಿ ನಡೆದಿದೆ. ಎಸ್‌ಐಆರ್ ಪ್ರತಿ ಹಂತದಲ್ಲೂ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲಾಗಿದೆ. ಈವರೆಗೆ 91,278 ಫಾರ್ಮ್ 7 ಸಲ್ಲಿಕೆಯಾಗಿವೆ. ಈ ಪೈಕಿ ಎಷ್ಟು ನೈಜವಾಗಿದೆ ಎಂಬುದನ್ನು ಪ್ರತ್ಯೇಕ ಮಾಡಿಲ್ಲ. ಪ್ರತಿ ಫಾರ್ಮ್ 7 ಅರ್ಜಿ ಕುರಿತು ಸಂಬಂಧಿತ ಇಆರ್‌ಒಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸರ್ಕಾರದ ಮನವಿ ಇಸಿಐ ನಿರ್ಧಾರ:
ಎಸ್‌ಐಆರ್ ಪ್ರಕ್ರಿಯೆ ಸಂಬಂಧ ಸರ್ಕಾರದಿಂದ ಬಂದಿರುವ ಮನವಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸುತ್ತೇವೆ. ಈ ಬಗ್ಗೆ ನಾನು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಕೇಂದ್ರ ಚುನಾವಣಾ ಆಯೋಗವೇ ನಿರ್ಧಾರ ಕೈಗೊಳ್ಳಲಿದೆ. ಇನ್ನು ಪಕ್ಷದ ಕಾರ್ಯಕರ್ತರ ಟಾರ್ಗೆಟ್ ಆರೋಪ ಸಂಬಂಧ ನಾನು ಏನನ್ನೂ ಹೇಳಲಾರೆ. ಕೆಲ ಕಡೆ ಖಾಸಗಿಯಾಗಿ ಎಫ್ಐಆರ್ ದಾಖಲಾಗಿದೆ. ಇದು ಕಾನೂನಿಗೆ ಬಿಟ್ಟ ವಿಚಾರ. ಹೀಗಾಗಿ ಆ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ನಾವು ಯಾವುದೇ ದತ್ತಾಂಶವನ್ನು ಗೌಪ್ಯವಾಗಿಟ್ಟಿಲ್ಲ ಎಂದು ಅನ್ಬುಕುಮಾರ್ ಹೇಳಿದರು.
ಶೇ.84.68ರಷ್ಟು ನೋಟಿಸ್ ವಿಲೇವಾರಿ:
ಕರಡು ಮತದಾರರ ಪಟ್ಟಿಯ 4.50 ಕೋಟಿ ಮತದಾರರ ಪೈಕಿ ನೋ ಮ್ಯಾಪಿಂಗ್ ಮತ್ತು ತಾರ್ಕಿಕ ವ್ಯತ್ಯಾಸ ಕಾರಣಕ್ಕೆ 43.82 ಲಕ್ಷ ಮತದಾರರಿಗೆ ನೋಟಿಸ್ ಜನರೇಟ್ ಮಾಡಲಾಗಿದೆ. ಈ 43.82(ಶೇ.99.40) ಲಕ್ಷದ ಪೈಕಿ ಈವರೆಗೆ 43.55 ಲಕ್ಷ ಮತದಾರರಿಗೆ ನೋಟಿಸ್ ತಲುಪಿಸಲಾಗಿದೆ. ಈ ಪೈಕಿ 36.89(ಶೇ.84.69) ಲಕ್ಷ ನೋಟಿಸ್‌ಗಳ ವಿಚಾರಣೆ ನಡೆಸಿ ವಿಲೇವಾರಿ ಮಾಡಲಾಗಿದೆ. ಇನ್ನು 6.66 ಲಕ್ಷ ನೋಟಿಸ್ ಪಡೆದ ಮತದಾರರ ವಿಚಾರಣೆ ಬಾಕಿಯಿದ್ದು, ಅ.12ರೊಳಗೆ ಪೂರ್ಣಗೊಳಿಸಲು ಸಂಬಂಧಿತ ಇಆರ್‌ಒಗಳಿಗೆ ಸೂಚಿಸಲಾಗಿದೆ. ಬಿಎಲ್‌ಒಗಳೇ ಮತದಾರರ ಮನೆಗೆ ತೆರಳಿ ದಾಖಲೆ ಸಂಗ್ರಹಿಸಿ ಅಪ್ಲೋಡ್ ಮಾಡುತ್ತಿದ್ದಾರೆ. ಅಂತೆಯೇ ಈವರೆಗೆ ಸಲ್ಲಿಕೆಯಾಗಿರುವ ಕ್ಲೈಮು ಮತ್ತು ಆಕ್ಷೇಪಣೆಗಳನ್ನು ಅ.22ರೊಳಗೆ ವಿಲೇವಾರಿ ಮಾಡುವುದಾಗಿ ತಿಳಿಸಿದರು.
ಎಸ್‌ಐಆರ್ ಬಳಿಕ ಸೇರ್ಪಡೆಗೆ ವಿಶೇಷ ಅಭಿಯಾನ
ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡು ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಈ ಎಸ್‌ಐಆರ್ ವೇಳೆ ಮತದಾರರ ಪಟ್ಟಿಗೆ ನೋಂದಣಿಯಾಗದ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಅಭಿಯಾನ ನಡೆಸಲು ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ. ಅದರಂತೆ ಎಸ್‌ಐಆರ್ ಬಳಿಕ ರಾಜ್ಯದಲ್ಲಿ ವಿಶೇಷ ಅಭಿಯಾನ ನಡೆಸಲಿದ್ದೇವೆ. ಈ ವೇಳೆ ಫಾರ್ಮ್ 6ನಲ್ಲಿನ ಘೋಷಣಾ ಪ್ರಮಾಣ ಪತ್ರ ಇರುವುದಿಲ್ಲ. ಬಿಎಲ್‌ಒಗಳು ಹಳೇ ಮತದಾರರ ಪಟ್ಟಿ ಹಾಗೂ ಹೊಸ ಮತದಾರರ ಪಟ್ಟಿ ಪರಿಶೀಲಿಸಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದರು.
ದಿನಕ್ಕೆ 10 ಫಾರ್ಮ್ 7 ಅರ್ಜಿ ಮಾತ್ರ ಸ್ವೀಕಾರ
ಒಬ್ಬ ವ್ಯಕ್ತಿ ದಿನಕ್ಕೆ 10 ಫಾರ್ಮ್ 7 ಸಲ್ಲಿಸಲು ಅವಕಾಶವಿದೆ. ಇಡೀ ಎಸ್ಐಆರ್ ಪ್ರಕ್ರಿಯೆಯಲ್ಲಿ ಗರಿಷ್ಠ 50 ಫಾರ್ಮ್ 7 ಸಲ್ಲಿಸಬಹುದು. ನಿಗದಿತ ಮಿತಿ ಮೀರಿ ಫಾರ್ಮ್ 7 ಸಲ್ಲಿಕೆ ಮಾಡಿದರೆ ಅದನ್ನು ಇಆರ್‌ಒಗಳು ತಿರಸ್ಕರಿಸಲಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಆಕ್ಷೇಪಣೆ ಸಲ್ಲಿಕೆ ಕಡೆಯ ದಿನ ಮುಕ್ತಾಯವಾಗಿದೆ. ಸ್ವತಃ ಮತದಾರರು ಫಾರ್ಮ್ 7 ಸಲ್ಲಿಸಿದರೆ ಮಾತ್ರ ಪರಿಗಣಿಸಲಾಗುತ್ತದೆ.
9.10 ಲಕ್ಷ ಫಾರ್ಮ್ 6 ಸಲ್ಲಿಕೆ
ರಾಜ್ಯದಲ್ಲಿ ಕಳೆದ ಜೂ.16ರಿಂದ ಅ.4 ರವರೆಗೆ 9.10 ಲಕ್ಷ ಫಾರ್ಮ್ 6 ಸಲ್ಲಿಕೆಯಾಗಿವೆ. ಅಂತೆಯೆ 4,677 ಫಾರ್ಮ್ 6ಎ, 91,278 ಫಾರ್ಮ್ 7, 11.98 ಲಕ್ಷ ಫಾರ್ಮ್ 8 ಸೇರಿ ಒಟ್ಟು 22.05 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.
ಸ್ಪಷ್ಟ ಉತ್ತರ ನೀಡದ ಸಿಇಒ
ರಾಜ್ಯದ ಕೆಲ ಕಡೆ ಮತದಾರರ ಮಾಹಿತಿ ಪೂರ್ವ ಮುದ್ರಿತ ಫಾರ್ಮ್ 7 ಸಲ್ಲಿಸಿರುವ ಆರೋಪಗಳು ಕೇಳಿ ಬಂದಿವೆ. ನಿಯಮದಲ್ಲಿ ಈ ಪೂರ್ವ ಮುದ್ರಿತ ಫಾರ್ಮ್ 7 ಸಲ್ಲಿಸಲು ಅವಕಾಶವಿದೆಯೇ? ಈ ಪೂರ್ವ ಮುದ್ರಿತ ಫಾರ್ಮ್ 7 ಕೊಟ್ಟವರು ಯಾರು ಎಂಬ ಪ್ರಶ್ನೆಗೆ ರಾಜ್ಯಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಸ್ಪಷ್ಟ ಉತ್ತರ ನೀಡಲಿಲ್ಲ.
