ಬಂಡಿಪುರ ಹುಲಿ ಸಂರಕ್ಷಿತಾರಣ್ಯ ಮಾರ್ಗವಾಗಿ ಕೇರಳಕ್ಕೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದಕ್ಕೆ ವನ್ಯಜೀವಿ ತಜ್ಞರು, ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು : ಬಂಡಿಪುರ ಹುಲಿ ಸಂರಕ್ಷಿತಾರಣ್ಯ ಮಾರ್ಗವಾಗಿ ಕೇರಳಕ್ಕೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದಕ್ಕೆ ವನ್ಯಜೀವಿ ತಜ್ಞರು, ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸುಪ್ರೀಂಕೋರ್ಟ್‌ ಆದೇಶದ ನಡುವೆಯೂ ಚರ್ಚೆ ನಡೆಸಿ ರಾತ್ರಿ ವಾಹನ ಸಂಚಾರಕ್ಕೆ ಅನುಮತಿಸುವ ಕುರಿತಂತೆ ಸಚಿವರು ಹೇಳಿಕೆ ನೀಡುತ್ತಿರುವುದರ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಡಿಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ವಾಹನಗಳ ಸಂಚಾರ ಹೆಚ್ಚಾದಂತೆ ಅದರಲ್ಲೂ ರಾತ್ರಿ ವೇಳೆ ವಾಹನಗಳು ವೇಗವಾಗಿ ಸಂಚರಿಸುವ ಕಾರಣದಿಂದಾಗಿ ವನ್ಯಜೀವಿಗಳಿಗೆ ಹಾನಿಯಾಗಲಿದೆ ಎಂದು ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನು 2009ರಿಂದ ನಿಷೇಧಿಸಲಾಗಿದೆ.

ಆದರೆ, ಇದೀಗ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆ ದೃಷ್ಟಿಯಿಂದಾಗಿ ರಾಜ್ಯ ಸರ್ಕಾರ ಬಂಡಿಪುರ ಹುಲಿ ಸಂರಕ್ಷಿತಾರಣ್ಯ ಮಾರ್ಗವಾಗಿ ಕೇರಳಕ್ಕೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿಸುವ ಮಾತುಗಳನ್ನಾಡುತ್ತಿದೆ. ಮೂರ್ನಾಲ್ಕು ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈ ಕುರಿತು ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಕೂಡ ಬಂಡಿಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಇದರಿಂದಾಗಿ ಬಂಡಿಪುರ ಅರಣ್ಯ ಪ್ರದೇಶದಲ್ಲಿನ ವನ್ಯಜೀವಿಗಳ ಜೀವಕ್ಕೆ ಕುತ್ತು ತರುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂದು ವನ್ಯಜೀವಿ ತಜ್ಞರು ಕಿಡಿಕಾರಿದ್ದಾರೆ.

15 ವರ್ಷಗಳ ಹಿಂದಿನ ಆದೇಶಕ್ಕೆ ತಿಲಾಂಜಲಿ?

ಬಂಡಿಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ವನ್ಯಜೀವಿಗಳ ಸಂರಕ್ಷಣೆ ದೃಷ್ಟಿಯಿಂದ ಕಳೆದ 15 ವರ್ಷಗಳ (2009ರಲ್ಲಿ) ಹಿಂದೆ ಚಾಮರಾಜನಗರ ಜಿಲ್ಲಾಧಿಕಾರಿಗಳು ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಿ ಆದೇಶಿಸಿದ್ದರು. ಆದರೆ, ಕೇರಳ ವಯನಾಡಿನ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕಾಗಿ ಜಿಲ್ಲಾಧಿಕಾರಿಗಳು ಆದೇಶವನ್ನು ಹಿಂಪಡೆದಿದ್ದರು. ಈ ಕ್ರಮವನ್ನು ಪ್ರಶ್ನಿಸಿ ವಕೀಲರೊಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ಜಿಲ್ಲಾಧಿಕಾರಿಗಳ ಆದೇಶ ಎತ್ತಿ ಹಿಡಿದಿತ್ತು.

ಕೊನೆಗೆ ಕೇರಳ ಸರ್ಕಾರ ಮತ್ತು ಕೆಲ ಹೋಟೆಲ್‌ ಮಾಲೀಕರ ಸಂಘಟನೆಗಳು 2010ರಲ್ಲಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದವು. ಆದರೆ, 2019ರಲ್ಲಿ ಸುಪ್ರೀಂಕೋರ್ಟ್‌ ರಾತ್ರಿ ವಾಹನ ಸಂಚಾರ ನಿಷೇಧ ಸರಿಯಾಗಿದೆ ಎಂದು ಹೇಳಿತ್ತು. ಆದರೂ ಕೇರಳ ಸರ್ಕಾರ ಕಾಲಕಾಲಕ್ಕೆ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದೆ. ಇದೀಗ ವಯನಾಡು ಉಪಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಂಡಿಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿಸುವ ಬಗ್ಗೆ ರಾಜ್ಯ ಸಚಿವರು ಸುಳಿವು ನೀಡುತ್ತಿದ್ದಾರೆ.

ಪರ್ಯಾಯ ರಸ್ತೆ ನಿರ್ಮಿಸಿದ್ದರೂ, ಬಂಡಿಪುರಕ್ಕೆ ಹಠವೇಕೆ?:

ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಬಂಡಿಪುರ ಮಾರ್ಗದ ಬದಲು ಕೇರಳಕ್ಕೆ ಸಂಪರ್ಕಿಸುವಂತೆ ವನ್ಯಜೀವಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪ್ರತ್ಯೇಕ ಮಾರ್ಗ ನಿರ್ಮಿಸಲಾಗಿದೆ ಎಂದು ತಿಳಿಸಿತ್ತು. ಅದರಂತೆ ಬೇಗೂರು-ಹುಣಸೂರು-ಗೋಣಿಕೊಪ್ಪ-ಪೊನ್ನಂಪೇಟೆ ಮಾರ್ಗವಾಗಿ ಕೇರಳಕ್ಕೆ ತೆರಳುವುದಕ್ಕಾಗಿ 75 ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ. ಆದರೂ, ವಯನಾಡು ಸೇರಿದಂತೆ ಇನ್ನಿತರ ಪ್ರದೇಶದಲ್ಲಿನ ಆರ್ಥಿಕ ಚಟುವಟಿಕೆ ವೃದ್ಧಿಯಾಗುವಂತೆ ಮಾಡಲು ಬಂಡಿಪುರ ಹುಲಿ ಸಂರಕ್ಷಿತಾರಣ್ಯದೊಳಗಿನ ಮಾರ್ಗಕ್ಕೆ ಕೇರಳ ಪಟ್ಟು ಹಿಡಿದಿದೆ.

ಗರ್ಭಿಣಿ ಆನೆ ಸಾವು

ಬಂಡಿಪುರ ಅರಣ್ಯ ಪ್ರದೇಶದಲ್ಲಿ ಎಲ್ಲ ವಾಹನಗಳಿಗೂ ಸಂಚಾರದ ವೇಗವನ್ನು 40 ಕಿ.ಮೀ.ಗೆ ಮಿತಿಗೊಳಿಸಲಾಗಿದೆ. ಅಲ್ಲದೆ, ರಾತ್ರಿ ಸಂಚಾರ ನಿಷೇಧದ ನಂತರ ವನ್ಯಜೀವಿಗಳು ಅಪಘಾತದಿಂದ ಸಾವನ್ನಪ್ಪುವ ಸಂಖ್ಯೆ ಕಡಿಮೆಯಾಗಿದೆ. ಆದರೆ, 2022ರ ಡಿಸೆಂಬರ್‌ನಲ್ಲಿ ರಾತ್ರಿ 8ರ ಸುಮಾರಿಗೆ ಲಾರಿಯೊಂದು ಗರ್ಭಿಣಿ ಆನೆಗೆ ಡಿಕ್ಕಿ ಹೊಡೆದಿತ್ತು. ಆನೆ ಸ್ಥಳದಲ್ಲೇ ಸಾವನ್ನಪ್ಪಿತ್ತು. ಹೀಗಾಗಿ ವಾಹನಗಳ ಸಂಚಾರ ನಿಷೇಧವನ್ನು ಸಂಜೆ 6 ಗಂಟೆಯಿಂದಲೇ ಆರಂಭಿಸುವಂತೆಯೂ ಆಗ್ರಹಿಸಲಾಗಿತ್ತು. ಆದರೆ, ಇದೀಗ ಇರುವ ನಿಷೇಧವನ್ನೇ ತೆರವು ಮಾಡುವ ಸುಳಿವು ನೀಡಲಾಗುತ್ತಿದೆ.

ಇಂದಿರಾಗೆ ತದ್ವಿರುದ್ಧ ನಿಲುವು

ಬಂಡಿಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧದ ನಿರ್ಧಾರ ತೆಗೆಯುತ್ತೇವೆ ಎಂದು ಸರ್ಕಾರದ ಪ್ರತಿನಿಧಿಗಳು ಹೇಳುತ್ತಿರುವುದು ದುರಾದೃಷ್ಟಕರ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ವನ್ಯಜೀವಿ ಮತ್ತು ನಿಸರ್ಗ ಸಂರಕ್ಷಣೆಗೆ ಪಣತೊಟ್ಟು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರು. ಆದರೀಗ ಅವರ ಕುಟುಂಬದವರೇ ವನ್ಯಜೀವಿಗಳ ಬಗ್ಗೆ ತಳೆದಿರುವ ನಿಲುವು ತದ್ವಿರುದ್ಧವಾಗಿದೆ.

- ಸಂಜಯ್‌ ಗುಬ್ಬಿ, ವನ್ಯಜೀವಿ ತಜ್ಞ.