ಮೈಕ್ರೋ ಫೈನಾನ್ಸ್‌ಗಳ ಕಡಿವಾಣಕ್ಕೆ ಸುಗ್ರೀವಾಜ್ಞೆ? - ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

| N/A | Published : Jan 25 2025, 10:05 AM IST

Siddaramaiah

ಸಾರಾಂಶ

ಮೈಕ್ರೋ ಫೈನಾನ್ಸ್‌ ಕಂಪನಿಗಳನ್ನು ನಿಯಂತ್ರಿಸಲು ಕರ್ನಾಟಕ ಮೈಕ್ರೊ ಫೈನಾನ್ಸ್‌ ಸಂಸ್ಥೆಗಳ ನಿಯಂತ್ರಣ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ತರುವ ಕುರಿತು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

 ಬೆಂಗಳೂರು : ರಾಜ್ಯದಲ್ಲಿ ಮೀಟರ್‌ ಬಡ್ಡಿ ದಂಧೆ, ಬಾಕಿ ವಸೂಲಿ ಹೆಸರಿನಲ್ಲಿ ಶೋಷಣೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್‌ ಕಂಪನಿಗಳನ್ನು ನಿಯಂತ್ರಿಸಲು ಕರ್ನಾಟಕ ಮೈಕ್ರೊ ಫೈನಾನ್ಸ್‌ ಸಂಸ್ಥೆಗಳ ನಿಯಂತ್ರಣ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ತರುವ ಕುರಿತು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಜನ ಕಂಗಾಲಾಗಿರುವುದು ನಿಜ. ಸಾಲ ವಸೂಲಿ ಮಾನವೀಯ ಹಾಗೂ ನಾಗರಿಕ ದಾರಿಯಲ್ಲಿ ಆಗಬೇಕು. ಮುಗ್ಧರು ಯಾವುದೇ ರೀತಿಯಲ್ಲೂ ಶೋಷಣೆಗೆ ಒಳಗಾಗಬಾರದು. ಹೀಗಾಗಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತ್ಯೇಕ ವಿಧೇಯಕ ತರಲು ನಿರ್ಧರಿಸಿದ್ದು, ಕರಡನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ವಿಧೇಯಕ ಅಂಗೀಕರಿಸಲು ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್‌ವರೆಗೆ ಕಾಯಬೇಕಾಗುತ್ತದೆ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಕಾಯಿದೆ ಜಾರಿಗೊಳಿಸಲು ಶನಿವಾರದ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು.

ಮೈಕ್ರೋ ಫೈನಾನ್ಸ್‌ ಕಂಪನಿಗಳು ಬಡವರಿಗೆ ಕಿರುಕುಳ ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಆರ್‌ಬಿಐನಿಂದ ಅನುಮೋದನೆ ಪಡೆಯದ ಹಣಕಾಸು ಸಂಸ್ಥೆಗಳು ಹಾದಿ ಬೀದಿಗೆ ಒಂದೊಂದು ಕೆಲಸ ಮಾಡುತ್ತಿವೆ. ಎಲ್ಲ ದೇವರುಗಳ ಹೆಸರಿನಲ್ಲೂ ಒಂದೊಂದು ಫೈನಾನ್ಸ್‌ ಸಂಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಇವುಗಳನ್ನು ನಿಯಂತ್ರಿಸಲು ವಿಶೇಷವಾದ ಕಾನೂನು ತರಲು ಚಿಂತನೆ ನಡೆಸಲಾಗಿದೆ. ಮೀಟರ್‌ ಬಡ್ಡಿ ಹಾಗೂ ಅತಿ ಹೆಚ್ಚು ಬಡ್ಡಿ ಹಾಕಿ ಶೋಷಣೆ ಮಾಡುವವರನ್ನು ರಾಜ್ಯ ಸರ್ಕಾರ ಮಟ್ಟ ಹಾಕುತ್ತದೆ. ಅದಕ್ಕೆ ಬೇಕಾಗಿರುವ ಕಾನೂನು ತಂದು ಪೊಲೀಸ್‌ ಇಲಾಖೆಗೆ ಬಲ ನೀಡುತ್ತೇವೆ ಎಂದು ಹೇಳಿದರು.

ದೂರು ನೀಡಬೇಕು:

ಶೋಷಣೆಗೆ ಒಳಗಾದವರು ದೂರು ನೀಡಿದರೆ ಮಾತ್ರ ಮುಂದಿನ ಕ್ರಮ. ಮೀಟರ್‌ ಬಡ್ಡಿ ಹಾಕಿದ್ದಾರೆ. ಅನ್ಯಾಯದ ಬಡ್ಡಿ ಹಾಕಿದ್ದಾರೆ ಎನ್ನುವವರು ದೂರು ನೀಡಲು ಹಿಂಜರಿಯಬಾರದು. ತಮ್ಮನ್ನು ಶೋಷಣೆ ಮಾಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.