ನಾಡಿದ್ದು 1 ಗಂಟೆ ಬೇಗ ನಮ್ಮ ಮೆಟ್ರೋ ಸಂಚಾರ

| Published : Jun 14 2024, 12:22 PM IST

Namma Metro

ಸಾರಾಂಶ

ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಹಿನ್ನೆಲೆಯಲ್ಲಿ ಭಾನುವಾರ ನಮ್ಮ ಮೆಟ್ರೋದ ಎಲ್ಲಾ ನಿಲ್ದಾಣಗಳಿಂದ ಬೆಳಗ್ಗೆ ಒಂದು ಗಂಟೆ ಮುಂಚಿತವಾಗಿ ರೈಲು ಸೇವೆ ಆರಂಭವಾಗಲಿದೆ.

ಬೆಂಗಳೂರು : ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಹಿನ್ನೆಲೆಯಲ್ಲಿ ಭಾನುವಾರ ನಮ್ಮ ಮೆಟ್ರೋದ ಎಲ್ಲಾ ನಿಲ್ದಾಣಗಳಿಂದ ಬೆಳಗ್ಗೆ ಒಂದು ಗಂಟೆ ಮುಂಚಿತವಾಗಿ ರೈಲು ಸೇವೆ ಆರಂಭವಾಗಲಿದೆ. 

ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ನಾಗಸಂದ್ರ ಮತ್ತು ರೇಷ್ಮೆಸಂಸ್ಥೆ, ನಿಲ್ದಾಣಗಳಿಂದ ಮೆಟ್ರೋ ರೈಲು ಸೇವೆಗಳು ಬೆಳಗ್ಗೆ 7 ಗಂಟೆಗೆ ಬದಲಾಗಿ 6 ಗಂಟೆಗೆ ಪ್ರಾರಂಭವಾಗಲಿದೆ. ಪ್ರಯಾಣಿಕರು, ಪರೀಕ್ಷಾರ್ಥಿಗಳು ಈ ಸೇವೆಯ ಪ್ರಯೋಜನ ಪಡೆಯುವಂತೆ ಬಿಎಂಆರ್‌ಸಿಎಲ್‌ ಕೋರಿದೆ.

ಚಾಲಕರಹಿತ ರೈಲಿನ ಸಿಗ್ನಲಿಂಗ್ ತಪಾಸಣೆ ಶೀಘ್ರ: ಎಲೆಕ್ಟ್ರಾನಿಕ್ ಸಿಟಿ ರಸ್ತೆಯ ನಮ್ಮ ಮೆಟ್ರೋ ಹಳದಿ ಮಾರ್ಗದ ಚಾಲಕರಹಿತ ರೈಲಿನ ಸಿಗ್ನಲಿಂಗ್‌ ತಪಾಸಣಾ ಕಾರ್ಯ ತಿಂಗಳಾಂತ್ಯದಿಂದ ನಡೆಯಲಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ. ಕಳೆದ ಫೆಬ್ರವರಿಯಲ್ಲಿ ಚೀನಾದ ಸಿಆರ್‌ಆರ್‌ಸಿ ಕಂಪನಿಯಿಂದ ಬಂದಿರುವ ಚಾಲಕರಹಿತ ರೈಲು ವಿವಿಧ ಬಗೆಯ ಪರೀಕ್ಷೆಗೆ ಒಳಪಡುತ್ತಿದೆ. ಪ್ರಸ್ತುತ ರೈಲಿನ ಅತ್ಯಂತ ಮಹತ್ವದ ಸಿಗ್ನಲಿಂಗ್‌ ತಪಾಸಣೆ ನಡೆಸಲು ಬೆಂಗಳೂರು ಮೆಟ್ರೋ ರೈಲು ನಿಗಮವು ಮುಂದಾಗಿದೆ. ಸೆಪ್ಟೆಂಬರ್‌ಗೆ ಪ್ರಾಯೋಗಿಕ ಚಾಲನೆ ಹಾಗೂ ವರ್ಷಾಂತ್ಯದ ಒಳಗೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸುವ ಉದ್ದೇಶದಿಂದ ತಪಾಸಣೆ ಪ್ರಕ್ರಿಯೆ ಚುರುಕುಗೊಂಡಿದೆ.

ಕಳೆದ ತಿಂಗಳ ಅಂತ್ಯದಿಂದ ಹಳದಿ ಮಾರ್ಗ ಅಂದರೆ ಆರ್‌.ವಿ.ರಸ್ತೆ-ಬೊಮ್ಮಸಂದ್ರ 18.82 ಕಿ.ಮೀ ನಡುವೆ ವಿದ್ಯುದೀಕರಣ ನಡೆಸಲಾಗುತ್ತಿದೆ. ಮೆಟ್ರೋ ವಯಡಕ್ಟ್ ಮೂಲಕ ಹಾದುಹೋದ 33 ಕಿಲೋವ್ಯಾಟ್ ವಿದ್ಯುತ್ ಕೇಬಲ್‌ಗಳನ್ನು ಸಮರ್ಪಕಗೊಳಿಸಿಕೊಂಡು ವಿವಿಧ ಪರೀಕ್ಷೆ ನಡೆಸಲಾಗುತ್ತಿದೆ. ಇದೀಗ ಜೂನ್ ಅಂತ್ಯದ ವೇಳೆಗೆ ರೈಲು ಸಿಗ್ನಲಿಂಗ್‌ ಪರೀಕ್ಷೆ ಆರಂಭವಾಗಲಿದೆ. ಜೂನ್ ಅಂತ್ಯದಿಂದ 45 ದಿನಗಳವರೆಗೆ ಸಿಗ್ನಲಿಂಗ್, ದೂರಸಂಪರ್ಕ ವ್ಯವಸ್ಥೆ, ವಿದ್ಯುತ್ ಸರಬರಾಜು ವ್ಯವಸ್ಥೆ ಸೇರಿ ಸಿಸ್ಟಮ್ ಪರೀಕ್ಷೆಗಳು ನಡೆಯಲಿವೆ.

ಹೊಸ ಮಾದರಿಯ ರೈಲು ಇದಾದ ಕಾರಣ ಒಟ್ಟಾರೆ 37 ಬಗೆಯ ತಪಾಸಣೆ ನಡೆಯಲಿದೆ. ಎಲ್ಲ ಸುರಕ್ಷತಾ ಪರೀಕ್ಷೆಗಳ ಬಳಿಕ ರಿಸರ್ಚ್ ಡಿಸೈನ್ಸ್ ಆ್ಯಂಡ್‌ ಸ್ಟ್ಯಾಂಡರ್ಡ್ ಆರ್ಗನೈಸೇಶನ್ (ಆರ್‌ಡಿಎಸ್ಒ) ಮೂಲಕ ಚಾಲನಾ ತಪಾಸಣೆ, ಕಮಿಷನರ್ ಆಫ್ ಮೆಟ್ರೋ ರೈಲು ಸುರಕ್ಷತೆಯಿಂದ (ಸಿಎಂಆರ್‌ಎಸ್) ಸುರಕ್ಷತಾ ತಪಾಸಣೆ ನಡೆಯಲಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ. ಸಿಎಂಆರ್‌ಎಸ್‌ ತಪಾಸಣೆಗೂ ಮುನ್ನ ಲೋಪದೋಷಗಳನ್ನು ಪಟ್ಟಿ ಮಾಡಿಕೊಂಡು ಅಗತ್ಯ ಬದಲಾವಣೆ ಮಾಡಿಕೊಳ್ಳಲಿದ್ದೇವೆ. ಆಗಸ್ಟ್‌ನಲ್ಲಿ ತೀತಾಘರ್‌ ರೈಲ್‌ ಸಿಸ್ಟಮ್ಸ್‌ನಿಂದ ಹಳದಿ ಮಾರ್ಗದ ಎರಡನೇ ರೈಲು ಬರಲಿದ್ದು, ಪರೀಕ್ಷಾರ್ಥ ಸಂಚಾರ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ.