ಸಾರಾಂಶ
ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಹತರಾದ ಕನ್ನಡಿಗರ ಮನೇಲಿ ಈಗ ನೀರವಮೌನ ಆವರಿಸಿದೆ.
ಶಿವಮೊಗ್ಗ/ಬೆಂಗಳೂರು : ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಹತರಾದ ಕನ್ನಡಿಗರ ಮನೇಲಿ ಈಗ ನೀರವಮೌನ ಆವರಿಸಿದೆ. ಪಿಯುಸಿಯಲ್ಲಿ ಮಗನಿಗೆ ಶೇ.97 ಅಂಕ ಲಭಿಸಿದ್ದನ್ನು ಸಂಭ್ರಮಾಚರಿಸಲು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಮನೆಯಲ್ಲಿ ಯಜಮಾನನನ್ನು ಕಳೆದುಕೊಂಡ ಕುಟುಂಬ ದುಃಖದ ಮಡುವಿನಲ್ಲಿದೆ.
ಇದೇ ವೇಳೆ, ಉಗ್ರರ ದಾಳಿಯಲ್ಲಿ ಕೊನೆಯುಸಿರೆಳೆದ ಭರತ್ ಭೂಷಣ್ ಅವರ ಬೆಂಗಳೂರಿನ ಮತ್ತಿಕೆರೆಯ ಸುಂದರನಗರದ ನಿವಾಸದಲ್ಲಿ ಕೂಡ ನೀರವ ಮೌನ ಆವರಿಸಿದೆ.
ಪತ್ನಿ ಪಲ್ಲವಿ, ಪುತ್ರ ಅಭಿಜೇಯ ಜೊತೆ ಏ.19 ರಂದು ಟೂರಿಸ್ಟ್ ಏಜೆನ್ಸಿ ಮೂಲಕ ಶಿವಮೊಗ್ಗದಿಂದ ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದ ಮಂಜುನಾಥ್, ಏ.24 ರಂದು ವಾಪಸ್ ಬರಬೇಕಿತ್ತು. ಆದರೀಗ ಅದೇ ದಿನ ಕುಟುಂಬ ಸದಸ್ಯರು ಅವರ ಮೃತದೇಹಕ್ಕಾಗಿ ಎದುರು ನೋಡುತ್ತಿದ್ದಾರೆ. ಬುಧವಾರ ಬೆಳಗಿನಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ ಸೇರಿ ರಾಜಕೀಯ ಮುಖಂಡರು, ಅಧಿಕಾರಿಗಳು ಮಂಜುನಾಥ್ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಪಾರ್ಥಿವ ಶರೀರ ಅವರ ಮನೆ ತಲುಪುವ ನಿರೀಕ್ಷೆಯಿದೆ.
‘ಮಂಜುನಾಥ್ ನನ್ನ ದೊಡ್ಡಮ್ಮನ ಮಗ. ಅವನಿಗೆ ಗಾಯ ಆಗಿದೆ ಎಂದಷ್ಟೇ ದೊಡ್ಡಮ್ಮನಿಗೆ ಹೇಳಿದ್ದೇನೆ. ಮನೆಗೆ ಎಲ್ಲರೂ ಬಂದರೆ ಅವರು ಪ್ಯಾನಿಕ್ ಆಗುತ್ತಾರೆ ಎಂದು ತಿಳಿದು ಅವರ ಮನೆಗೆ ಬಂದಿದ್ದೇನೆ’ ಎನ್ನುತ್ತಾ ಮಂಜುನಾಥ್ ಸಹೋದರಿ ದೀಪಾ ಕಣ್ಣೀರು ಸುರಿಸುತ್ತಿದ್ದಾರೆ. ‘ಅಳಿಯ ನಮ್ಮನ್ನು ಬಿಟ್ಟು ಹೋಗಿದ್ದಾರೆ ಅಂತ ಶಿವಮೊಗ್ಗಕ್ಕೆ ಬಂದ ಮೇಲೆಯೇ ನಮಗೆ ಗೊತ್ತಾಗಿದ್ದು’ ಎನ್ನುತ್ತಾ ಮಂಜುನಾಥ್ ಅತ್ತೆ ಗೀತಾ ಕಂಬನಿ ಮಿಡಿಯುತ್ತಿದ್ದಾರೆ.
‘ಕಾಶ್ಮೀರ ಪ್ರವಾಸದ ಬಗ್ಗೆ ನನಗೆ ಮಗ ಹೇಳಿರಲಿಲ್ಲ, ನನ್ನ ತಮ್ಮನಿಗೆ ಪ್ರವಾಸದ ಬಗ್ಗೆ ಹೇಳಿದ್ದ, ಕಾಶ್ಮೀರ ಪ್ರವಾಸ ಎಂದ ಕೂಡಲೇ ನನ್ನ ಎದೆ ಧಸಕ್ ಎಂದಂತಾಯ್ತು. ಕಾಶ್ಮೀರಕ್ಕೆ ಬೇಡ ಎಂದು ಹೇಳಿದೆ, ಆದರೆ ಇಲ್ಲ ಅಮ್ಮ, ಕಾಶ್ಮೀರ ಮೊದಲಿನ ರೀತಿಯಲ್ಲಿಲ್ಲ. ಘಟನೆ ನಡೆಯುವ ಇಂದಿನ ದಿನ ನನ್ನ ಜೊತೆ ಮಾತನಾಡಿ ಆರಾಮಾಗಿದ್ದೀನಿ ಅಂತ ಹೇಳಿದ್ದ. ನಾವು ಪ್ರಾರ್ಥನೆ ಮಾಡ್ತಾ ಇದ್ವಿ, ಆದ್ರೆ ಹೀಗಾಗುತ್ತೆ ಅಂತ ಗೊತ್ತಿರಲಿಲ್ಲ’ ಎನ್ನುತ್ತಾ ತಾಯಿ ಸುಮತಿ ಕಣ್ಣೀರು ಸುರಿಸುತ್ತಿದ್ದಾರೆ.
ವೃದ್ಧ ತಂದೆ-ತಾಯಿಯ ಕಣ್ಣೀರು:
ಇತ್ತ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಮನೆಗೂ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು, ರಾಜಕೀಯ ಪಕ್ಷಗಳ ಮುಖಂಡರು ದೌಡಾಯಿಸುತ್ತಿದ್ದಾರೆ. ದುಃಖದ ಮಡುವಿನಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಮನೆ ಬಳಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಭರತ್ ಹತ್ಯೆಯ ಸುದ್ದಿ ತಿಳಿದು ಅವರ ತಮ್ಮ ಪ್ರೀತಂ ಹಾಗೂ ಸ್ನೇಹಿತರು ಕಾಶ್ಮೀರಕ್ಕೆ ತೆರಳಿದ್ದು, ಮೃತದೇಹ ತರುವ ಯತ್ನದಲ್ಲಿದ್ದಾರೆ.
ಭರತ್ ಅವರ ತಂದೆ-ತಾಯಿ ವೃದ್ಧರಾಗಿದ್ದು, ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಬುಧವಾರ ಬೆಳಗ್ಗೆ ಪತ್ರಿಕೆಗಳನ್ನು ಓದುವಾಗಲೇ ತಂದೆಗೆ ಮಗನ ಸಾವಿನ ಸುದ್ದಿ ತಿಳಿಯಿತು. ಆಸ್ಪತ್ರೆಯಿಂದ ಕೆಲ ದಿನಗಳ ಹಿಂದೆಯಷ್ಟೇ ಡಿಶ್ಚಾರ್ಜ್ ಆಗಿ ಮನೆಗೆ ಬಂದಿರುವ ತಾಯಿಗೂ ವಿಷಯ ಗೊತ್ತಾಗಿದ್ದು, ಬುಧವಾರ ಬೆಳಗ್ಗೆ. ವೃದ್ಧ ತಂದೆ-ತಾಯಿ ಪುತ್ರನ ಹತ್ಯೆಯ ಸುದ್ದಿ ತಿಳಿದು ಕಣ್ಣೀರಿಡುತ್ತಿದ್ದಾರೆ.