ಇಂದಿನಿಂದ ಪೋಡಿ ದುರಸ್ತಿ ಅಭಿಯಾನ - ಸರ್ಕಾರದಿಂದ ಮಂಜೂರಾದ ಭೂಮಿಗಳ 1.96 ಲಕ್ಷ ಪೋಡಿ ದುರಸ್ತಿ ಕಾರ್ಯ ಆರಂಭ

| Published : Nov 30 2024, 10:48 AM IST

Krishna Byre Gowda

ಸಾರಾಂಶ

ಸರ್ಕಾರಿಂದ ಮಂಜೂರಾದ ಭೂಮಿಗಳ ಪೋಡಿ ದಾಖಲೆ ದುರಸ್ತಿ ಅಭಿಯಾನ ಶನಿವಾರದಿಂದ ಆರಂಭಿಸಲಾಗುತ್ತಿದ್ದು, ಈ ಕ್ರಮದಿಂದ ರಾಜ್ಯದ 20ರಿಂದ 25 ಲಕ್ಷ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬೆಂಗಳೂರು : ಸರ್ಕಾರಿಂದ ಮಂಜೂರಾದ ಭೂಮಿಗಳ ಪೋಡಿ ದಾಖಲೆ ದುರಸ್ತಿ ಅಭಿಯಾನ ಶನಿವಾರದಿಂದ ಆರಂಭಿಸಲಾಗುತ್ತಿದ್ದು, ಈ ಕ್ರಮದಿಂದ ರಾಜ್ಯದ 20ರಿಂದ 25 ಲಕ್ಷ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 1.96 ಲಕ್ಷ ಸರ್ಕಾರಿ ಸರ್ವೇ ಸಂಖ್ಯೆಯಲ್ಲಿ ಭೂರಹಿತ ರೈತರಿಗೆ ಸರ್ಕಾರಿ ಭೂಮಿ ಮಂಜೂರು ಮಾಡಲಾಗಿದೆ. ಕಳೆದ 30ರಿಂದ 40 ವರ್ಷಗಳ ಹಿಂದೆಯೇ ಈ ಭೂಮಿ ಮಂಜೂರು ಮಾಡಲಾಗಿದ್ದರೂ, ಪೋಡಿ ದುರಸ್ತಿ ಮಾಡಿಲ್ಲ. ಇದರಿಂದ ಭೂಮಿ ಪಡೆದವರಿಗೆ ಪಹಣಿ ಸೇರಿದಂತೆ ಮತ್ತಿತರ ವಿಚಾರದಲ್ಲಿ ಸಮಸ್ಯೆಯಾಗುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಪೋಡಿ ದುರಸ್ತಿ ಕಾರ್ಯವನ್ನು ಆರಂಭಿಸಲಾಗುತ್ತಿದ್ದು, ಶನಿವಾರ ಹಾಸನದಲ್ಲಿ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪೋಡಿ ದುರಸ್ತಿಗಾಗಿ ಭೂಮಿಗೆ ಸಂಬಂಧಿಸಿದ ದಾಖಲೆಯ ನಮೂನೆ 1ರಿಂದ 5 ಮತ್ತು 6ರಿಂದ 10ನ್ನು ಸರಿಪಡಿಸಬೇಕಿದೆ. ಅದರಂತೆ ಈಗಾಗಲೆ 1.96 ಲಕ್ಷ ಸರ್ವೇ ಸಂಖ್ಯೆಗಳ ಪೈಕಿ 27,107 ಸರ್ವೇ ಸಂಖ್ಯೆಗಳ ನಮೂನೆ 1ರಿಂದ 5ನ್ನು ಆನ್‌ಲೈನ್‌ ಮೂಲಕ ದಾಖಲಿಸುವ ಕಾರ್ಯ ಪೂರ್ಣಗೊಂಡಿದೆ. ಇನ್ನೊಂದು ತಿಂಗಳಲ್ಲಿ ಉಳಿದ ಸರ್ವೇ ಸಂಖ್ಯೆಯ ನಮೂನೆ 1ರಿಂದ 5ನ್ನು ದಾಖಲಿಸುವ ಕಾರ್ಯ ಪೂರ್ಣಗೊಳ್ಳಲಿದೆ.

ಉಳಿದಂತೆ ನಮೂನೆ 6ರಿಂದ 10 ಸರ್ವೇ ಕಾರ್ಯಕ್ಕೆ ಸಂಬಂಧಿಸಿದ್ದಾಗಿದ್ದು, ನಮೂನೆ 1ರಿಂದ 5ರ ದಾಖಲೆ ಆನ್‌ಲೈನ್‌ನಲ್ಲಿ ದಾಖಲಿಸಿದ ನಂತರ ಸರ್ವೇ ಕಾರ್ಯ ಆರಂಭಿಸಲಾಗುವುದು. ಮುಂದಿನ 8ರಿಂದ 10 ತಿಂಗಳಲ್ಲಿ ಪೋಡಿ ದುರಸ್ತಿ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಕ್ರಮದಿಂದಾಗಿ ಸರ್ಕಾರಿ ಭೂಮಿ ಹೊಂದಿರುವ 20ರಿಂದ 25 ಲಕ್ಷ ಕುಟುಂಬಗಳಿಗೆ ಸಮರ್ಪಕ ದಾಖಲೆಗಳು ದೊರೆಯಲಿದೆ ಎಂದರು.

ಬಗರ್‌ಹುಕುಂ ಅರ್ಜಿ

ವಿಲೇವಾರಿಗೆ ವೇಗ

ಬಗರ್‌ಹುಕುಂ ಅಡಿಯಲ್ಲಿ ಭೂಮಿ ಮಂಜೂರಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಈವರೆಗೆ ನಡೆಸಲಾದ ಪರಿಶೀಲನೆಯಲ್ಲಿ 1.26 ಲಕ್ಷ ಅರ್ಜಿಗಳು ಮಾತ್ರ ಅರ್ಹ ಎಂದು ಪರಿಗಣಿಸಲಾಗಿದೆ. ಅದರಲ್ಲಿ ಡಿ.15ರೊಳಗೆ ರಾಜ್ಯದ ಎಲ್ಲ ಬಗರ್‌ಹುಕುಂ ಸಮಿತಿ ಮುಂದೆ ಒಟ್ಟು 5 ಸಾವಿರ ಅರ್ಜಿಗಳನ್ನು ಮಂಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜನವರಿ ವೇಳೆಗೆ ಈ ಸಂಖ್ಯೆಯನ್ನು 15ರಿಂದ 20 ಸಾವಿರಕ್ಕೆ ಏರಿಸಲಾಗುವುದು ಎಂದು ಹೇಳಿದರು.

ಬಗರ್‌ಹುಕುಂ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಡಿಜಿಟಲ್‌ ಸಾಗುವಳಿ ಚೀಟಿ ನೀಡಲಾಗುವುದು. ಅಲ್ಲದೆ ಸಾಗುವಳಿ ಚೀಟಿ ನೀಡುವುದಕ್ಕೂ ಮುನ್ನ ಜಮೀನಿಗೆ ಪೋಡಿ ಮಾಡಿಸಿ, ಪಹಣಿಯಲ್ಲಿ ರೈತರ ಹೆಸರು ನಮೂದಿಸಿ, ಜಮೀನು ನೋಂದಣಿ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಹೇಳಲಾಗಿದೆ ಎಂದರು.

ರಾಜ್ಯದಲ್ಲಿ ಸಲ್ಲಿಕೆಯಾದ ಬಗರ್‌ಹುಕುಂ ಅರ್ಜಿಗಳಲ್ಲಿ 5ರಿಂದ 6 ಲಕ್ಷ ಅರ್ಜಿಗಳು ಅನರ್ಹ ಎಂದು ಪರಿಗಣಿಸಲಾಗಿದೆ. ಅರ್ಜಿ ಸಲ್ಲಿಸಿದ ದಿನದಂದು18 ವರ್ಷ ತುಂಬದವರ ಹೆಸರಿನಲ್ಲಿ 26 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದೇ ರೀತಿ ಈಗಾಗಲೇ 5 ಎಕರೆ ಭೂಮಿ ಹೊಂದಿದ್ದರೂ ಬಗರ್‌ಹುಕುಂ ಭೂಮಿ ಮಂಜೂರಿಗಾಗಿ 26,922 ಅರ್ಜಿಗಳು, ಬಿ ಖರಾಬು ಭೂಮಿಯನ್ನು ಬಗರ್‌ಹುಕುಂ ಭೂಮಿ ಎಂದು 40,799 ಅರ್ಜಿಗಳು, ಅರಣ್ಯ ಪ್ರದೇಶ ಮಂಜೂರಾತಿಗೆ 1.68 ಲಕ್ಷ ಅರ್ಜಿಗಳು, ನಗರ ಪರಿಮಿತಿಯೊಳಗಿನ ಭೂಮಿ ಮಂಜೂರಾತಿಗೆ 68,561 ಅರ್ಜಿಗಳು, ಕೃಷಿಕರಲ್ಲದ 1 ಲಕ್ಷಕ್ಕೂ ಹೆಚ್ಚಿನ ಮಂದಿ ಸಲ್ಲಿಸಿದ್ದ ಅರ್ಜಿಗಳನ್ನು ಅನರ್ಹ ಎಂದು ಪರಿಗಣಿಸಲಾಗಿದೆ ಎಂದು ಮಾಹಿತಿ ನೀಡಿದರು.

ಖಾಲಿ ಹುದ್ದೆ ಭರ್ತಿಗೆ ಕ್ರಮ

ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 34 ಭೂ ದಾಖಲೆಯ ಸಹಾಯಕ ನಿರ್ದೇಶಕ ಹಾಗೂ 746 ಸರ್ಕಾರಿ ಸರ್ವೇಯರ್‌ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಜತೆಗೆ 1,191 ಪರವಾನಗಿ ಹೊಂದಿದ ಸರ್ವೇಯರ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದು, ಇನ್ನೂ 1 ಸಾವಿರ ಪರವಾನಗಿ ಹೊಂದಿದ ಸರ್ವೇಯರ್‌ ನೇಮಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

15 ಸಾವಿರ ಕೋಟಿ ಆದಾಯ ಸಂಗ್ರಹ

ಆದಾಯ ಸಂಗ್ರಹದಲ್ಲಿ ಕಂದಾಯ ಇಲಾಖೆಯು ಶೇ.26ರಷ್ಟು ಬೆಳವಣಿಗೆ ದರವನ್ನು ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 24,500 ಕೋಟಿ ರು. ಆದಾಯ ಸಂಗ್ರಹದ ಗುರಿ ಹೊಂದಲಾಗಿದ್ದು, ಅಕ್ಟೋಬರ್‌ ಅಂತ್ಯದ ವೇಳೆಗೆ ಸ್ಟ್ಯಾಂಪ್ಸ್‌ ಆ್ಯಂಡ್‌ ರಿಜಿಸ್ಟ್ರೇಷನ್‌ ಸೇರಿದಂತೆ ಇನ್ನಿತರ ಮೂಲಗಳಿಂದ 15 ಸಾವಿರ ಕೋಟಿ ಸಂಗ್ರಹಿಸಲಾಗಿದೆ. ಮುಂದಿನ 5 ತಿಂಗಳಲ್ಲಿ ನಿಗದಿತ ಗುರಿ ಮುಟ್ಟಲಾಗುವುದು ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.