ಪೊಲೀಸರು ವಾಟ್ಸಾಪಲ್ಲಿ ನೋಟಿಸ್‌ ಕೊಡುವಂತಿಲ್ಲ! - ಬೆಂಗಳೂರು ಪೊಲೀಸರು ನೀಡಿದ್ದ ನೋಟಿಸ್‌ ಹೈಕೋರ್ಟಲ್ಲಿ ರದ್ದು

| N/A | Published : Mar 01 2025, 11:54 AM IST

KSRP

ಸಾರಾಂಶ

ಹಣಕಾಸು ವಂಚನೆ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಪೊಲೀಸರು ವಾಟ್ಸಾಪ್‌ ಮೂಲಕ ಜಾರಿಗೊಳಿಸಿದ್ದ ನೋಟಿಸ್ ಅ​ನ್ನು ಹೈಕೋರ್ಟ್ ರದ್ದುಪಡಿಸಿದೆ.

 ಬೆಂಗಳೂರು : ಹಣಕಾಸು ವಂಚನೆ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಪೊಲೀಸರು ವಾಟ್ಸಾಪ್‌ ಮೂಲಕ ಜಾರಿಗೊಳಿಸಿದ್ದ ನೋಟಿಸ್ ಅ​ನ್ನು ಹೈಕೋರ್ಟ್ ರದ್ದುಪಡಿಸಿದೆ.

ವಾಟ್ಸಾಪ್‌ ಮೂಲಕ ತಮಗೆ ನಗರದ ಆಡುಗೋಡಿ ಠಾಣಾ ಪೊಲೀಸರು ನೀಡಿದ್ದ ನೋಟಿಸ್‌ ಪ್ರಶ್ನಿಸಿ ತಮಿಳುನಾಡು ಮೂಲದ ವಿದ್ಯಾರ್ಥಿ ಪವನ್​ ಕುಮಾರ್​ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್​.ಆರ್​ .ಕೃಷ್ಣಕುಮಾರ್​ ಅವರ ಪೀಠ, ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 (ಬಿಎನ್ಎಸ್ಎಸ್) ಅಥವಾ ಹಿಂದಿನ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ವಾಟ್ಸಾಪ್‌ ಮೂಲಕ ನೋಟಿಸ್ ಜಾರಿ ಮಾಡುವುದಕ್ಕೆ ಅವಕಾಶವಿಲ್ಲ. ಈ ಕುರಿತು ಸುಪ್ರೀಂಕೋರ್ಟ್ ಆದೇಶಿಸಿದೆ ಎಂದು ಸ್ಪಷಪಡಿಸಿದೆ.

ಅಲ್ಲದೆ, ಅರ್ಜಿದಾರನಿಗೆ ವಾಟ್ಸಾಪ್‌ ಮೂಲಕ ಜಾರಿ ಮಾಡಿದ ನೋಟಿಸ್‌ ರದ್ದುಪಡಿಸಿರುವ ನ್ಯಾಯಪೀಠ, ಪ್ರಕರಣ ಸಂಬಂಧ ಹೊಸದಾಗಿ ವಿಚಾರಣಾ ಪ್ರಕ್ರಿಯೆ ಆರಂಭಿಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿದೆ.

ಪ್ರಕರಣದ ವಿವರ:

ಆಡುಗೋಡಿಯಲ್ಲಿ ವಾಸವಿರುವ ಶ್ರೀನಿವಾಸ್​ ರಾವ್​ ಎಂಬುವರಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಅರ್ಜಿದಾರ ಸಲಹೆ ನೀಡಿದ್ದರು. ಅದಕ್ಕಾಗಿ ಒಂದು ವಾಟ್ಸಾಪ್‌ ಗ್ರೂಪ್​ಗೆ ಸೇರಿದ ಬಳಿಕ ಕೆಲವು ಲಿಂಕ್ ಕಳುಹಿಸಿ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದರು. ಸುಮಾರು 4.35 ಲಕ್ಷ ರು.ಗಳನ್ನು ಶ್ರೀನಿವಾಸ್‌ ಅವರಿಂದ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ ಅರ್ಜಿದಾರ, ನಂತರ ಆ ಹಣ ಹಿಂದಿರುಗಿಸದೆ ವಂಚಿಸಿದ್ದ.

ಈ ಕುರಿತು ಆಡುಗೋಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ‘ಇತರರ ಗುರುತು ಕಳವು ಮಾಡಿ ಕಂಪ್ಯೂಟರ್​ ಉಪಕರಣ ಬಳಸಿ ಹಣ ಪಡೆದು ವಂಚಿಸಿದ’ ಆರೋಪದಡಿ ಎಫ್​ಐಆರ್​ ದಾಖಲಿಸಿಕೊಂಡಿದ್ದರು. ಈ ಸಂಬಂಧ ಕಳೆದ ಫೆ.14ರಂದು ಅರ್ಜಿದಾರನಿಗೆ ವಾಟ್ಸಾಪ್‌ ಮೂಲಕ ನೋಟಿಸ್​ ಜಾರಿಗೊಳಿಸಿ, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್‌, ಬಿಎನ್ಎಸ್ಎಸ್ ಸೆಕ್ಷನ್​ 35 ಅಥವಾ ಸಿಆರ್‌ಪಿಸಿ ಸೆಕ್ಷನ್ 41(ಎ) ಪ್ರಕಾರ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಯನ್ನು ಬಂಧಿಸುವ ಅಗತ್ಯವಿಲ್ಲದ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಬಹುದಾಗಿದೆ. ಆದರೆ, ಆರೋಪಿಗಳಿಗೆ ನೋಟಿಸ್​ ನೀಡುವಲ್ಲಿ ಪೊಲೀಸರು ವಾಟ್ಸಾಪ್‌ ಅಥವಾ ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿ ಕಳೆದ ತಿಂಗಳಿನಲ್ಲಿ ಸುಪ್ರಿಂ ಕೋರ್ಟ್‌ ತೀರ್ಪು ಹೊರಡಿಸಿದೆ. ಹಾಗಾಗಿ, ಈ ಪ್ರಕ್ರಿಯೆಯನ್ನು ಅನುಮತಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.