384 ಕೆಎಎಸ್‌ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆ ಆಗಸ್ಟ್ 25ಕ್ಕೆ : ಕೆಪಿಎಸ್ಸಿ ಸ್ಪಷ್ಟನೆ

| Published : Jul 30 2024, 09:51 AM IST

KPSC New 02

ಸಾರಾಂಶ

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 384 ಕೆಎಎಸ್‌ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ದಿನಾಂಕವನ್ನು ಈಗಾಗಲೇ ಎರಡು ಬಾರಿ ಮರುನಿಗದಿ ಮಾಡಿರುವ ಕಾರಣ, ಮತ್ತೆ ದಿನಾಂಕ ಬದಲಾವಣೆ ಮಾಡದೆ ನಿಗದಿಯಂತೆ ಆ.25ರಂದು ಪರೀಕ್ಷೆ ನಡೆಸಲಾಗುವುದು ಎಂದು ಕೆಪಿಎಸ್‌ಸಿ ತಿಳಿಸಿದೆ.

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 384 ಕೆಎಎಸ್‌ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ದಿನಾಂಕವನ್ನು ಈಗಾಗಲೇ ಎರಡು ಬಾರಿ ಮರುನಿಗದಿ ಮಾಡಿರುವ ಕಾರಣ, ಮತ್ತೆ ದಿನಾಂಕ ಬದಲಾವಣೆ ಮಾಡದೆ ನಿಗದಿಯಂತೆ ಆ.25ರಂದು ಪರೀಕ್ಷೆ ನಡೆಸಲಾಗುವುದು ಎಂದು ಕೆಪಿಎಸ್‌ಸಿ ತಿಳಿಸಿದೆ. 

ಆ.25ರಂದು ಐಬಿಪಿಎಸ್ ಪರೀಕ್ಷೆ ನಡೆಯುತ್ತಿರುವ ದಿನವೇ ಕೆಎಎಸ್ ಪರೀಕ್ಷೆ ನಡೆಸುವುದರಿಂದ ಎರಡೂ ಹುದ್ದೆಗಳಿಗೆ ಅರ್ಜಿ ಹಾಕಿರುವ ಅನೇಕ ಆಕಾಂಕ್ಷಿಗಳು ಒಂದು ಪರೀಕ್ಷೆಯಿಂದ ವಂಚಿತರಾಗುವ ಕಾರಣ ಮುಂದೂಡಬೇಕು ಎಂದು ಅನೇಕ ಅಭ್ಯರ್ಥಿಗಳು ಮನವಿ ಮಾಡಿದ್ದರು. ಯುಪಿಎಸ್‌ಸಿ, ಎಸ್‌ಎಸ್‌ಸಿ, ಕೆಇಎ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳ ಪರೀಕ್ಷಾ ದಿನಾಂಕಗಳನ್ನು ಪರಿಶೀಲಿಸಿ, ಅವರಿಂದ ಮಾಹಿತಿ ಪಡೆದು ಪರೀಕ್ಷಾ ದಿನಾಂಕ ನಿಗದಿಪಡಿಸಲಾಗುತ್ತದೆ. 

ಅದರಂತೆ ಎಲ್ಲವನ್ನೂ ಪರಿಶೀಲಿಸಿಯೇ ಆ.25ಕ್ಕೆ ಪೂರ್ವಭಾವಿ ಪರೀಕ್ಷೆಯ ದಿನಾಂಕ ನಿಗದಿಪಡಿಸಿ ಜೂ.27ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ, ಐಬಿಪಿಎಸ್ ಜು.1ರಂದು ಅಧಿಸೂಚನೆ ಹೊರಡಿಸಿ ಆ.25ರಂದೇ ಪರೀಕ್ಷೆ ನಿಗದಿಪಡಿಸಿದೆ. ಪದೇ ಪದೇ ದಿನಾಂಕ ಬದಲಿಸುವುದರಿಂದ ನಿಗದಿತ ಕಾಲಾವಧಿಯಲ್ಲಿ ಪರೀಕ್ಷೆ ನಡೆಸಲು ಆಗುವುದಿಲ್ಲ ಎಂದು ಕೆಪಿಎಸ್‌ಸಿ ತಿಳಿಸಿದೆ.

384 ಹುದ್ದೆಗಳಿಗೆ 2.10 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ. ರಾಜ್ಯದ 700 ಪರೀಕ್ಷಾ ಉಪ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಆಯೋಗ ಮಾಡಿಕೊಂಡಿದೆ.

- ಈಗಾಗಲೇ 2 ಬಾರಿ ಮುಂದೂಡಿದ್ದೇವೆ, ಮತ್ತೆ ಮುಂದೂಡಿಕೆ ಇಲ್ಲ: ಕೆಪಿಎಸ್ಸಿ

- ಐಬಿಪಿಎಸ್‌ ಪರೀಕ್ಷೆ ಇರುವುದರಿಂದ ಮುಂದೂಡಲು ಕೋರಿದ್ದ ಅಭ್ಯರ್ಥಿಗಳು

- 384 ಹುದ್ದೆಗಳಿಗೆ 2.10 ಲಕ್ಷ ಅರ್ಜಿ ಸಲ್ಲಿಕೆ