ಜಿಬಿಎ ಜಾರಿಗೆ ತಂದ 2.0 ತಂತ್ರಾಂಶ ಅಪ್‌ಡೇಟ್ ಆಗದ ಕಾರಣ ಇ-ಖಾತೆ, ಬಿ ಖಾತೆಯಿಂದ ಎ ಖಾತೆಗೆ ಆಸ್ತಿ ಬದಲಾವಣೆ ಮಾಡಿಸಿಕೊಂಡ ಖಾತೆದಾರರು 16 ದಿನಗಳಿಂದ ಪಾಲಿಕೆ ಕಚೇರಿಗೆ ಅಲೆಯುತ್ತಿದ್ದು, ಮನೆ, ನಿವೇಶನಗಳ ಖರೀದಿ, ಮಾರಾಟ, ಬ್ಯಾಂಕ್‌ಗಳಿಂದ ಸಾಲ ಪಡೆಯುವ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ.

 ಉಮಾಶಂಕರ ಕಾರ್ಯ

 ಬೆಂಗಳೂರು : ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜಾರಿಗೆ ತಂದ 2.0 ತಂತ್ರಾಂಶ ಅಪ್‌ಡೇಟ್ ಆಗದ ಕಾರಣ ಇ-ಖಾತೆ, ಬಿ ಖಾತೆಯಿಂದ ಎ ಖಾತೆಗೆ ಆಸ್ತಿ ಬದಲಾವಣೆ ಮಾಡಿಸಿಕೊಂಡ ಖಾತೆದಾರರು 16 ದಿನಗಳಿಂದ ಪಾಲಿಕೆ ಕಚೇರಿಗೆ ಅಲೆಯುತ್ತಿದ್ದು, ಮನೆ, ನಿವೇಶನಗಳ ಖರೀದಿ, ಮಾರಾಟ, ಬ್ಯಾಂಕ್‌ಗಳಿಂದ ಸಾಲ ಪಡೆಯುವ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ.

ಸರ್ಕಾರ ರಿಯಾಯಿತಿ ನೀಡಿದೆ ಎಂದು ತರಾತುರಿಯಲ್ಲಿ ಇ-ಖಾತೆ, ಬಿ ಖಾತೆಯಿಂದ ಎ ಖಾತೆ ಮಾಡಿಸಿಕೊಂಡವರು ಹೆಸರು, ರಸ್ತೆ, ವಾಸ ಸ್ಥಳಗಳಲ್ಲಿ ಯಾವುದಾದರಲ್ಲಾದರೂ ಒಂದು ಅಕ್ಷರ ತಪ್ಪಿದ್ದರೂ ತಿದ್ದುಪಡಿ ಮಾಡಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ನೋಂದಣಿ ಕಚೇರಿಯಲ್ಲಿ ಕಂಪ್ಯೂಟರ್ ನಿರಾಕರಿಸುತ್ತಿದೆ. ಹೀಗಾಗಿ ತಿದ್ದುಪಡಿ ಮಾಡಿಸಿಕೊಳ್ಳಲು ಜಿಬಿಎ ಆನ್‌ಲೈನ್ ಸೇವಾ ಕೇಂದ್ರಗಳಿಗೆ ತೆರಳಿ ಅಲ್ಲಿ ಅಕ್ಷರ ತಿದ್ದುಪಡಿ ಮಾಡಿಸಿಕೊಳ್ಳಲು ಹೋದವರಿಗೆ ಈ 2.0 ತಂತ್ರಾಂಶ ಅಪ್‌ಡೇಟ್ ಆಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು 2.0 ತಂತ್ರಾಂಶ ಜಾರಿಗೆ ತಂದಿದ್ದು ಇದರಲ್ಲಿ ಎಲ್ಲ ಬಗೆಯ ಬಿಲ್ಲುಗಳನ್ನು ಒಂದೇ ತಂತ್ರಾಂಶದ ಅಡಿಯಲ್ಲಿ ತರಲಾಗಿದೆ. ಖಾತೆದಾರರು ಕಾಯುವಂತಿಲ್ಲ ಎಂದು ತಿಳಿಸಿದ್ದರು. ಆದರೆ ವಾಸ್ತವದಲ್ಲಿ ಇ-ಖಾತೆ ಮಾಡಿಸಿಕೊಂಡವರು ತಮ್ಮ ಖಾತೆಯಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಕಾಯುವಂತಾಗಿದೆ. ಸಾಲಕ್ಕೆ ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಿದವರು, ಮನೆ ಮಾರುವವರು, ಖರೀದಿಸುವವರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಇನ್ನೂ ಎಷ್ಟು ದಿನ ಕಾಯಬೇಕು ಎಂಬುದರ ಬಗ್ಗೆ ಜಿಬಿಎ ಅಧಿಕಾರಿಗಳಲ್ಲಿ ಯಾರೂ ನಿಖರವಾದ ಮಾಹಿತಿ ನೀಡುತ್ತಿಲ್ಲ.

ಇ-ಖಾತೆ ಮಾಡಿಸಿಕೊಂಡ ಯಾರಾದರೂ ಮಾರಲು ಅಥವಾ ಬ್ಯಾಂಕಿನಲ್ಲಿ ಸಾಲ ಪಡೆಯಲು ಹೋದಾಗಲೇ ಖಾತೆಯಲ್ಲಿರುವ ವಿವರಗಳು ಹಾಗೂ ಕಂದಾಯ ಇಲಾಖೆಯಲ್ಲಿರುವ ವಿವರಗಳಿಗೂ ಹೊಂದಿಕೆ ಇದೆಯೋ ಇಲ್ಲವೋ ಎಂಬುದು ತಿಳಿಯುವುದು. ಇಲ್ಲದಿದ್ದರೆ ಖಾತೆಯಲ್ಲಿನ ನ್ಯೂನತೆಗಳು ತಿಳಿಯುವುದಿಲ್ಲ ಎಂದು ಖಾತೆದಾರ ಬಸವನಗುಡಿಯ ಸೋಮು ಎಂಬುವವರು ಹೇಳುತ್ತಾರೆ.

13 ಅಧಿಕಾರಿಗಳ ವಿರುದ್ಧ ಕ್ರಮ:

ಕಾರಣ ತಿಳಿಸದೆ ಖಾತೆ ಅರ್ಜಿ ತಿರಸ್ಕರಿಸಿರುವ 13 ಮಂದಿ ಕಂದಾಯ ಅಧಿಕಾರಿ ಹಾಗೂ ಸಹಾಯಕ ಕಂದಾಯ ಅಧಿಕಾರಿಗಳ ವಿರುದ್ಧ ಇಲಾಖೆ ತನಿಖೆಗೆ ಆದೇಶ ನೀಡಿದೆ. ಖಾತೆದಾರರ ಅರ್ಜಿಗಳನ್ನು ತಿರಸ್ಕರಿಸುವಾಗ ಅಧಿಕೃತ ಕಾರಣ ನೀಡಿ ತಿರಸ್ಕರಿಸಬೇಕು. ಅದನ್ನು ಹೊರತುಪಡಿಸಿ ನೂರಾರು ಅರ್ಜಿಗಳನ್ನು ಒಂದೇ ಬಾರಿಗೆ ತಿರಸ್ಕರಿಸಿರುವುದು ಅಧಿಕಾರಿಗಳ ಕರ್ತವ್ಯ ಲೋಪವಾಗಿರುವುದರಿಂದ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ದಕ್ಷಿಣ ಪಾಲಿಕೆ ಹೆಚ್ಚುವರಿ ಆಯುಕ್ತ ರಾಚಪ್ಪ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಸಮಯ ಬೇಕು: ಹೆಚ್ಚುವರಿ ಆಯುಕ್ತ

2.0 ತಂತ್ರಾಂಶ ಜಾರಿಗೆ ತಂದು ಸ್ವಲ್ಪ ದಿನಗಳೇ ಕಳೆದಿವೆ. ಯಾವುದೇ ಹೊಸ ವ್ಯವಸ್ಥೆ ಜಾರಿಗೆ ತಂದಾಗ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಸಂಬಂಧ ನಮ್ಮ ಸಿಬ್ಬಂದಿಗೆ ಕಳೆದ ವಾರ ತರಬೇತಿ ನೀಡಲಾಗಿದೆ. ಸಿಸ್ಟಂನಲ್ಲಿ ಯಾವ ಯಾವ ತಪ್ಪುಗಳು ಬರುತ್ತವೆ ಅವುಗಳನ್ನು ಹೇಗೆ ಸರಿಪಡಿಸಬೇಕು ಎಂಬುದನ್ನು ತಿಳಿಸಲಾಗಿದೆ. ಮೊದಲು ಕಂಪ್ಯೂಟರ್ ಇಲ್ಲದಿದ್ದಾಗ ಹಲವು ಮೋಸ, ವಂಚನೆ ನಡೆಯುತ್ತಿತ್ತು. ಈಗ ಅದು ಸಾಧ್ಯವಿಲ್ಲ. ಒಂದು ಆಸ್ತಿಯನ್ನು ಹಲವರಿಗೆ ನೋಂದಣಿ ಮಾಡುತ್ತಿದ್ದರು. ಆದರೆ, ಈಗ ಆ ರೀತಿ ಮಾಡಲು ಸಾಧ್ಯವಿಲ್ಲ, ಅತಿ ಶೀಘ್ರದಲ್ಲಿಯೇ ತಂತ್ರಾಂಶ ಸರಿಹೋಗಲಿದೆ ಎಂದು ದಕ್ಷಿಣ ಪಾಲಿಕೆ ಹೆಚ್ಚುವರಿ ಆಯುಕ್ತ (ಕಂದಾಯ) ರಾಚಪ್ಪ ತಿಳಿಸಿದರು.