ಸಾರಾಂಶ
ನಗರದಲ್ಲಿರುವ ಎಲ್ಲ ಆಸ್ತಿಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿಸುತ್ತಿದ್ದು ಜನರ ಮನೆ ಬಾಗಿಲಿಗೆ ಖಾತೆ ದಾಖಲೆ ತಲುಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಬೆಂಗಳೂರು : ನಗರದಲ್ಲಿರುವ ಎಲ್ಲ ಆಸ್ತಿಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿಸುತ್ತಿದ್ದು ಜನರ ಮನೆ ಬಾಗಿಲಿಗೆ ಖಾತೆ ದಾಖಲೆ ತಲುಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಮೃತ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ನಗರದ ಹಲವರ ಆಸ್ತಿಗಳು ಪೂರ್ವಜರ ಹೆಸರಿನಲ್ಲಿವೆ. ಕೆಲವರು ತಮ್ಮ ಹೆಸರಿಗೆ ಖಾತೆಗಳನ್ನೇ ಮಾಡಿಸಿಕೊಂಡಿಲ್ಲ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಜೊತೆ ಚರ್ಚಿಸಿದ್ದು ಇದನ್ನು ವ್ಯವಸ್ಥಿತ ರೂಪಕ್ಕೆ ತರಲು ಮುಂದಾಗಿದ್ದೇವೆ. ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ನಾನು ಆಸ್ತಿಗಳ ದಾಖಲೆಗಳನ್ನು ಮಾಲೀಕರ ಮನೆ ಬಾಗಿಲಿಗೇ ತಲುಪಿಸಬೇಕು ಎಂದು ಪ್ರಯತ್ನಪಡುತ್ತಿದ್ದೇನೆ. ಈಗಾಗಲೇ ಶೇ.60 ರಷ್ಟು ಆಸ್ತಿಗಳ ಪರಿಶೀಲನೆ ಮುಗಿದಿದೆ ಎಂದು ವಿವರಿಸಿದರು.
ಕನಿಷ್ಠ ವೇತನ ಕಡಿಮೆ ಮಾಡಬೇಕು ಎಂದು ಸಂಘ ಮನವಿ ಮಾಡಿದ್ದು ಈ ಬಗ್ಗೆ ನಾನು ಮತ್ತು ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದೇವೆ. ನಾವು ನಿಮ್ಮ ಪರ ನಿಲ್ಲದಿದ್ದರೆ ಹೊಸೂರು ಹಾಗೂ ಆಂಧ್ರ ಗಡಿ ಭಾಗ ಕಾಣುವಂತಾಗುತ್ತದೆ. ಹೀಗಾಗಿ ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಿಮ್ಮ ಪರವಾಗಿ ಸಕಾರಾತ್ಮಕವಾಗಿದ್ದೇವೆ ಎಂದು ಭರವಸೆ ನೀಡಿದರು.
ಕೊತ್ತನೂರು ಜೊತೆ ಮಾತನಾಡುವೆ
ಶಾಸಕ ಕೊತ್ತನೂರು ಮಂಜುನಾಥ್ ಅವರನ್ನು ಕರೆದು ಮಾತನಾಡುತ್ತೇನೆ. ನಮ್ಮ ಇಡೀ ಪಕ್ಷ ಸೈನಿಕರ ಪರವಾಗಿದೆ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧಕ್ಕೆ ಸಂಬಂಧಿಸಿದಂತೆ ಕೊತ್ತನೂರು ಮಂಜುನಾಥ್ ನೀಡಿರುವ ಹೇಳಿಕೆ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಹೋಟೆಲ್‌ವೊಂದರಲ್ಲಿ ಕನ್ನಡಿಗರ ವಿರುದ್ಧ ಬೋರ್ಡ್ ಹಾಕಿರುವುದಕ್ಕೆ ಸಂಬಂಧಿಸಿದಂತೆ ನಾವು ಕ್ರಮ ಕೈಗೊಳ್ಳುತ್ತೇವೆ. ಕನ್ನಡದ ವಿಚಾರವಾಗಿ ನಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಈ ಹಿಂದೆ ಯಾರೂ ಕೈಗೊಂಡಿಲ್ಲ. ಮುಂದೆಯೂ ಮಾಡಲು ಸಾಧ್ಯವಿಲ್ಲ. ಕನ್ನಡ ನೆಲ, ಜಲ, ಭಾಷೆ ರಕ್ಷಣೆಗೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.